ಹೊಸದಿಲ್ಲಿ: “ದೇಶದ ಸುಮಾರು 300 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದ್ದು, ಕೊರೊನಾದ ಒಮಿಕ್ರಾನ್ ರೂಪಾಂತರಿಯನ್ನು ಸಾಮಾನ್ಯ ನೆಗಡಿ-ಜ್ವರ ಎಂದು ಹಗುರವಾಗಿ ಪರಿಗಣಿಸಬೇಡಿ. ಕೂಡಲೇ ಲಸಿಕೆ ಪಡೆಯಿರಿ.’
ಹೀಗೆಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ದೇಶವಾಸಿಗಳಿಗೆ ಕರೆ ನೀಡಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ದಿಲ್ಲಿ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಕೇರಳ ಮತ್ತು ಗುಜರಾತ್ “ಕಳವಳಕಾರಿ ರಾಜ್ಯ’ಗಳಾಗಿ ಬದಲಾಗಿವೆ ಎಂದೂ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ.
ಡಿ. 30ರಂದು ದೇಶದ ಕೊರೊನಾ ಪಾಸಿಟಿವಿಟಿ ದರ ಶೇ.1.1 ರಷ್ಟಿತ್ತು. ಬುಧವಾರದ ವೇಳೆಗೆ ಅದು ಶೇ.11.05 ಕ್ಕೇರಿಕೆಯಾಗಿದೆ. ಒಮಿಕ್ರಾನ್ ಸಾಮಾನ್ಯ ಶೀತ-ಜ್ವರ ಅಲ್ಲ, ಅದನ್ನು ಹಗುರವಾಗಿ ಪರಿಗಣಿಸದಿರಿ. ನಾವೆಲ್ಲರೂ ಆದಷ್ಟು ಎಚ್ಚರಿಕೆಯಿಂದಿರಬೇಕು, ಲಸಿಕೆ ಪಡೆಯಬೇಕು ಮತ್ತು ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಹೇಳಿದ್ದಾರೆ. ಜತೆಗೆ ಎಲ್ಲೆಡೆಯೂ ಸಾಕಷ್ಟು ವೈದ್ಯಕೀಯ ಆಮ್ಲಜನಕ ದಾಸ್ತಾನು ಇರುವಂತೆ ನೋಡಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ.
ಇದನ್ನೂ ಓದಿ:ಕೋವಿಡ್ ಭಾರಿ ಏರಿಕೆ : ರಾಜ್ಯದಲ್ಲಿ ಇಂದು 21 ಸಾವಿರ ಕೇಸ್; 10 ಸಾವು
ಮತ್ತಷ್ಟು ಮಂದಿಗೆ ಸೋಂಕು: ಪಂಜಾಬ್ ಮಾಜಿ ಸಿಎಂ ಕ್ಯಾ| ಅಮರೀಂದರ್ ಸಿಂಗ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದಿಲ್ಲಿಯಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿನ ಸುಮಾರು 50 ಸಿಬಂದಿಗೂ ಪಾಸಿಟಿವ್ ಆಗಿದೆ.
2 ಲಕ್ಷದ ಸನಿಹಕ್ಕೆ ದೈನಂದಿನ ಸೋಂಕು
ಮಂಗಳವಾರದಿಂದ ಬುಧವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,94,720 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 442 ಮಂದಿ ಸಾವಿಗೀಡಾಗಿದ್ದಾರೆ. ಒಮಿಕ್ರಾನ್ ಕೇಸುಗಳ ಸಂಖ್ಯೆ 4,868ಕ್ಕೇರಿಕೆಯಾಗಿದೆ ಎಂದೂ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದಿಲ್ಲಿಯಲ್ಲಿ ರವಿವಾರ 27,561 ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.26.22ಕ್ಕೇರಿಕೆಯಾಗಿದೆ. ಅದೇ ರೀತಿ ಮುಂಬಯಿಯಲ್ಲೂ ದಿಢೀರ್ ಹೆಚ್ಚಳವಾಗಿದ್ದು, 16,420 ಮಂದಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ.