Advertisement
ಜೀವನದಲ್ಲಿ ಒತ್ತಡ, ನಿರ್ಲಕ್ಷ, ಏಕಾಂಗಿತನ ಮುಂತಾದ ತಾಪತ್ರಯಗಳಿಂದ ಮನುಷ್ಯನಲ್ಲಿ ಮಾನಸಿಕ ಆರೋಗ್ಯ ರೋಗ ಉಂಟಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ರೋಗ ಬರಬಹುದು. ಅದರಲ್ಲಿಯೂ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಾನಸಿಕ ಕಾಯಿಲೆ ಎಂದರೆ ಯಾರೇ ಒಬ್ಬರು ಯೋಚನೆ ಮಾಡುವಂತಹ ರೀತಿ, ಅವನ ವರ್ತನೆಗಳಲ್ಲಾಗುವ ಅಸಾಮಾನ್ಯ ಬದಲಾವಣೆಯಾಗಿದೆ. ಈ ತೊಂದರೆ ಇರುವವರು ಬೇರೆಯವರ ಜತೆ ಸರಿಯಾದ ರೀತಿಯಲ್ಲಿ ಬೆರೆಯಲು ಕಷ್ಟವಾಗುತ್ತದೆ. ಸಮಸ್ಯೆಗಳನ್ನು ನಿಭಾಯಿಸಲು ಕೂಡ ಕಷ್ಟಪಡುತ್ತಾನೆ.
ಆತಂಕದ ಸಮಸ್ಯೆ, ಮನಸ್ಥಿತಿ ಬದಲಾಗುವ ಕಾಯಿಲೆ, ಮಾನಸಿಕ ಅಸ್ವಸ್ಥತೆಗಳು, ತಿನ್ನುವ ಕಾಯಿಲೆ, ಪ್ರಚೋದನೆ ನಿಯಂತ್ರಣ ಮತ್ತು ವ್ಯಸನ ಅಸ್ವಸ್ಥತೆ, ವ್ಯಕ್ತಿತ್ವದ ಅಸ್ವಸ್ಥತೆ ಹೀಗೆ ಮಾನಸಿಕ ಅನಾರೋಗ್ಯದಲ್ಲಿ ಹಲವು ವಿಧಗಳಿವೆ.
Related Articles
Advertisement
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ, ಆಧುನಿಕತೆ ಬೆಳೆಯುತ್ತಿದ್ದು, ವಿದ್ಯುನ್ಮಾನ ವಸ್ತುಗಳ ಬಳಕೆ ಹೆಚ್ಚಾಗಿ ಮಾನಸಿಕ ಖನ್ನತೆಯಿಂದ ಬಳಲುವವರ ಸಂಖ್ಯೆಯೂ ಹೆಚ್ಚುತ್ತಿದೆ. ವಿದ್ಯಾರ್ಥಿಗಳು, ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದು ಕೂಡ ಇದಕ್ಕೆ ಒಂದು ಕಾರಣ ಎಂದು ಹೇಳಬಹುದು. ಅದರಲ್ಲಿಯೂ ಮಾನಸಿಕ ಖನ್ನತೆಗೆ ಒಳಗಾದರವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರ ಬದಲು ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಉತ್ತಮ ಆರೋಗ್ಯ ಕಾಪಾಡಬಹುದಾಗಿದೆ.
ಮಾನಸಿಕ ಆರೋಗ್ಯ ಸಮಸ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ನಾಲ್ವರು ಭಾರತೀಯರಲ್ಲಿ ಒಬ್ಬರು ಜೀವನದ ಯಾವುದಾದರೂ ಒಂದು ಹಂತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಗಂಭೀರ ಮಾನಸಿಕ ಸಮಸ್ಯೆಗಳಲ್ಲಿ ಶೇ.50ರಷ್ಟು ಮತ್ತು ಸಾಮಾನ್ಯ ಮಾನಸಿಕ ಸಮಸ್ಯೆಗಳಲ್ಲಿ ಶೇ.10ರಷ್ಟು ಪ್ರಕರಣಗಳು ಮಾತ್ರ ತಜ್ಞರ ಬಳಿ ಚಿಕಿತ್ಸೆಗೆ ದಾಖಲಾಗುತ್ತಿದೆ.
ಮಾನಸಿಕ ಆರೋಗ್ಯ ಎಂಬ ಪದವನ್ನು 19ನೇ ಶತಮಾನದಲ್ಲಿ ವಿಲಿಯಮ್ ಸ್ವಿಟ್ಟರ್ ಅವರು ವ್ಯಾಖ್ಯಾನಿಸಿದ್ದರು. ಅಮೆರಿಕದ ಮನೋವೈದ್ಯಕೀಯ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಐಸಾಕ್ ರೇ ಅವರು ಮನಸ್ಸಿನ ಶಕ್ತಿಯನ್ನು, ಗುಣಮಟ್ಟವನ್ನು ಅಥವಾ ಬೆಳವಣಿಗೆಯನ್ನು ನಾಶಪಡಿಸುವ ಅಥವಾ ತಡೆಹಿಡಿಯುವ ಘಟನೆಗಳ ಮತ್ತು ಪ್ರಭಾವಗಳ ವಿರುದ್ಧ ಮನಸ್ಸನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಕಲೆ ಎಂದು ವ್ಯಾಖ್ಯಾನಿಸಿದ್ದಾರೆ.
ಮಾನಸಿಕ ಆರೋಗ್ಯ ತೊಂದರೆ ಇದ್ದರೆ ಹೀಗೆ ಮಾಡಿ· ಪ್ರೊಟೀನ್‌ಯುಕ್ತ ಆಹಾರವನ್ನು ಸೇವನೆ ಮಾಡಿ.
· ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
· ಹೆಚ್ಚಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ.
· ಸ್ನೇಹಿತರೊಂದಿಗೆ ಹೆಚ್ಚಿನ ಕಾಲ ಕಳೆಯಿರಿ.
· ಜೀವನದಲ್ಲಿ ಭರವಸೆ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದಿರಿ.
· ವ್ಯಾಯಾಮ, ಯೋಗದಲ್ಲಿ ತೊಡಗಿಸಿಕೊಳ್ಳಿ. 2022ರ ಗುರಿ
ದೇಶದಲ್ಲಿ ಎಲ್ಲರೂ ಆರೋಗ್ಯವಂತರಾಗಿರ ಬೇಕು. 2022ನೇ ವರ್ಷದೊಳಗೆ ದೇಶದಲ್ಲಿನ ಎಲ್ಲ ಜನರಿಗೂ ಮಾನಸಿಕ ಆರೋಗ್ಯ ಸೇವೆ ಒದಗಿಸುವುದು ಕೇಂದ್ರ ಸರಕಾರ ಗುರಿಯನ್ನಾಗಿಸಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೌನ್ಸೆಲಿಂಗ್ ಅಗತ್ಯ
ವಿವಿಧ ಕಾರಣದಿಂದ ಅನೇಕ ಮಂದಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಒತ್ತಡಕ್ಕೆ ಮಾನಸಿಕ ರೋಗಕ್ಕೆ ತುತ್ತಾಗುವವರು ಹೆಚ್ಚಾಗುತ್ತಿದ್ದಾರೆ. ಮುಖ್ಯವಾಗಿ ಬೆಳೆದ ಪರಿಸರ, ಒತ್ತಡ, ಉದ್ಯೋಗ ನಷ್ಟ ಕೂಡ ಕಾರಣವಾಗಬಹುದು. ಕೌನ್ಸೆಲಿಂಗ್ ಪ್ರಕ್ರಿಯೆ ಇದಕ್ಕೆ ಮುಖ್ಯ.
– ಡಾ| ರತ್ನಾಕರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ - ನವೀನ್ ಭಟ್ ಇಳಂತಿಲ