ಇಂದೋರ್ : “ದೇವಸ್ಥಾನಗಳಿಗೆ ಭೇಟಿ ಕೊಡುವುದಕ್ಕೆ ನನಗೆ ಬಿಜೆಪಿಯ ಸರ್ಟಿಫಿಕೇಟ್ ಬೇಕಾಗಿಲ್ಲ; ಹಿಂದು ಧರ್ಮವನ್ನು ನಾನು ಬಿಜೆಪಿಯವರಿಗಿಂತಲೂ ಚೆನ್ನಾಗಿ ಅರಿತುಕೊಂಡಿದ್ದೇನೆ; ನಾನು ಪ್ರತಿಯೊಂದು ಧರ್ಮವನ್ನು ಗೌರವಿಸುವ ರಾಷ್ಟ್ರೀಯವಾದಿಯೇ ವಿನಾ ಹಿಂದೂವಾದಿ ಅಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಕಟು ವಾಕ್ ದಾಳಿ ಎಸಗಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೊದಲಾದವರು ಆಯಾ ದೇವಸ್ಥಾನಗಳ ಸಂಪ್ರದಾಯ, ಕಟ್ಟುಕಟ್ಟಳೆಗೆ ಅನುಗುಣವಾದ ದಿರಿಸನ್ನು ತೊಟ್ಟು ದೇವಳಗಳನ್ನು ಭೇಟಿ ನೀಡುವಾಗ ಯಾರೂ ಆ ಬಗ್ಗೆ ಮಾತನಾಡುವುದಿಲ್ಲ; ಆದರೆ ಅದೇ ನಾನು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಬಿಜೆಪಿಯವರು ಟೀಕಿಸುತ್ತಾರೆ; ಇದು ಸರಿಯಾ ? ”ಎಂದು ರಾಹುಲ್ ಪ್ರಶ್ನಿಸಿದರು.
“ನಾನು ಪ್ರತಿಯೊಂದು ಧರ್ಮದ ನಾಯಕ; ಆದುದರಿಂದಲೇ ನಾನು ರಾಷ್ಟ್ರೀಯವಾದಿ. ಹಾಗಿರುವುದರಿಂದ ನಾನು ಪ್ರತಿಯೊಂದು ಜಾತಿ, ಭಾಷೆ, ಮತ, ಧರ್ಮ, ವರ್ಗಗಳ ಜನರನ್ನು ಗೌರವಿಸುವವನಾಗಿದ್ದೇನೆ’ ಎಂದು ರಾಹುಲ್ ಹೇಳಿದರು.
ಆಯ್ದ ಪತ್ರಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ರಾಹುಲ್, “ನಾನು ದೇವಳಗಳಿಗೆ ಭೇಟಿ ಕೊಟ್ಟರೆ ಹಿಂದೂ ಫ್ಯಾನ್ಸಿ ಡ್ರೆಸ್ ಪ್ರದರ್ಶಿಸುತ್ತಿದ್ದೇನೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಅವರು ಮೋದಿ, ಅಮಿತ್ ಶಾ ಬಗ್ಗೆ ಏನೂ ಹೇಳುವುದಿಲ್ಲ; ನಮ್ಮ ದೇಶದ ದೇವಾಲಯಗಳೆಲ್ಲ ಬಿಜೆಪಿ ಮತ್ತು ಆರ್‌ಎಸ್‌ಎಸ್ ಗೆ ಸೇರಿದ ಸೊತ್ತುಗಳೇ ? ಮೋದಿ ಮತ್ತು ಅಮಿತ್ ಶಾ ಅವರಿಗೆ ದೇವಸ್ಥಾನ ಭೇಟಿಯ ಗುತ್ತಿಗೆ ಸಿಕ್ಕಿದೆಯಾ ?” ಎಂದು ಪ್ರಶ್ನಿಸಿದರು.
ವಿಧಾನಸಭಾ ಚುನಾವಣೆಯತ್ತ ಮುಖಮಾಡಿರುವ ಮಧ್ಯ ಪ್ರದೇಶಕ್ಕೆ ಎರಡು ದಿನಗಳ ಮಿಂಚಿನ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ ಅವರಿಂದು ಉಜ್ಜೆ„ನಿಯ ಸುಪ್ರಸಿದ್ಧ ಮಹಾ ಕಾಲೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು ಅಲ್ಲಿ ಪೂಜೆ ಸಲ್ಲಿಸಿದರು.