ಹುಬ್ಬಳ್ಳಿ: ಶಿವಸಂಸ್ಕೃತಿಯನ್ನು ಎತ್ತಿಹಿಡಿದಿರುವ ವೀರಭದ್ರ ದೇವರ ಅವತಾರದ ಹಿಂದೆ ಶಿಷ್ಟರ ರಕ್ಷಣೆ ಮತ್ತು ದುಷ್ಟರ ನಿಗ್ರಹದ ಸಂದೇಶ ಅಡಗಿದೆ. ಅಧರ್ಮವನ್ನು ಅಳಿಸಿ ಧರ್ಮ ಉಳಿಸಿದ ವೀರಭದ್ರನು ಎಲ್ಲರಿಂದಲೂ ಪೂಜಿತನಾಗಿದ್ದಾನೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಆಂಧ್ರಪ್ರದೇಶದ ರಾಯಚೋಟಿ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ದಶಕದ ಸಂಭ್ರಮದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಹುಬ್ಬಳ್ಳಿ ಮಹಾನಗರದ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮವನ್ನು ಒಡೆದು ಛಿದ್ರಗೊಳಿಸಿವ ದುಷ್ಟಶಕ್ತಿಗಳು ಎಲ್ಲ ಕಾಲಘಟ್ಟಗಳಲ್ಲಿಯೂ ಕಾಣಸಿಗುತ್ತಾರೆ. ಧರ್ಮದಲ್ಲಿ ರಾಜಕಾರಣವನ್ನು ಬೆರೆಸಿ ಸ್ವಾರ್ಥದ ಬೆನ್ನುಹತ್ತಿರುವ ಕೆಲವು ದುಷ್ಟ ಶಕ್ತಿಗಳ ಬಗ್ಗೆ ಎಲ್ಲರೂ ಸದಾಕಾಲ ಎಚ್ಚರವಹಿಸಬೇಕು. ಮನುಷ್ಯ ಎಷ್ಟೇ ಅಧಿಕಾರ, ಸಂಪತ್ತು, ಸ್ಥಾನ-ಮಾನ ಹೊಂದಿದ್ದರೂ ಸಹಿತ ತನ್ನ ಭೌತಿಕ ಬದುಕಿನ ಒತ್ತಡಗಳಲ್ಲಿ ಬೆಂದು ಬಸವಳಿದು ಶಾಂತಿ, ನೆಮ್ಮದಿ ಸಮಾಧಾನ ಸಂತೃಪ್ತಿಯನ್ನೇ ಕಳೆದುಕೊಂಡಿದ್ದಾನೆ. ಧರ್ಮದ ಸಾತ್ವಿಕ ಚಿಂತನೆ ಮತ್ತು ಆಚಾರ-ವಿಚಾರಗಳ ಅನುಪಾಲನೆಯಿಂದ ಮಾತ್ರ ನಿರಂತರವಾದ ಶಾಂತಿ-ನೆಮ್ಮದಿ ಸಾಧ್ಯವಾಗುತ್ತದೆ ಶ್ರೀಗಳು ಹೇಳಿದರು.
ಕಡಪಾ ಜಿಲ್ಲೆಯ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಶಂಕರ ಬಾಲಾಜಿ ಧರ್ಮ ಸಮ್ಮೇಳನಕ್ಕೆ ಚಾಲನೆ ನೀಡಿದರು. ತುಮಕೂರು ಜಿಲ್ಲೆ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶ್ರೀ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಸ್ವಾಮೀಜಿ, ಬೃಹನ್ಮಠದ ಶ್ರೀ ರೇಣುಕ ಮಹಾಂತ ಸ್ವಾಮೀಜಿ, ಸಾವಿರದೇವರ ಸಂಸ್ಥಾನ ಬೃಹನ್ಮಠದ ಶಾಂತಮಲ್ಲ ಸ್ವಾಮೀಜಿ, ಹಿರೇಮಠದ ಚನ್ನವೀರ ಸ್ವಾಮೀಜಿ ಉಪದೇಶಾಮೃತ ನೀಡಿದರು. ಸೇವಾ ಸಮಿತಿ ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಸಿ.ಎಂ. ಶಿವಶರಣಪ್ಪ, ಪಿ.ಎಂ. ಚಿಕ್ಕಮಠ, ಪ್ರಕಾಶ ಅಂದಾನಿಮಠ, ಶಂಕರ ಕುರ್ತಕೋಟಿ, ಅನಿಲ ಉಳ್ಳಾಗಡ್ಡಿ, ರಾಚಯ್ಯ ಮಠಪತಿ, ಎಂ.ಐ. ದೇಶನೂರ, ಶಿವಾನಂದ ನಾಗಠಾಣ, ಗಂಗಾಧರ ಹಿರೇಮಠ ಇನ್ನಿತರರಿದ್ದರು.