Advertisement

ಕೋವಿಡ್ ಬಗ್ಗೆ ತಪ್ಪು ಕಲ್ಪನೆ ಬೇಡ; ಮನೋಸ್ಥೈರ್ಯ ಹೆಚ್ಚಿಸಿಕೊಳ್ಳೋಣ: ಜನಾರ್ದನ ಪೂಜಾರಿ ಸಲಹೆ

02:13 PM Jul 24, 2020 | mahesh |

ಅನಗತ್ಯವಾಗಿ ಭಯಪಡುವ ಬದಲು ಸಾಮಾನ್ಯ ಕಾಯಿಲೆ ಬಂದಿದೆ ಎಂದು ಭಾವಿಸಿ ಚಿಕಿತ್ಸೆ ಪಡೆದರೆ ಒಂದೆರಡು ವಾರಗಳಲ್ಲೇ ಕೊರೊನಾದಿಂದ ಮುಕ್ತರಾಗಬಹುದು.

Advertisement

ಬಂಟ್ವಾಳ: ಕೋವಿಡ್ ಕುರಿತು ತಪ್ಪು ಕಲ್ಪನೆ ಸಲ್ಲದು. ಸೋಂಕು ತಗಲಿದರೆ ಮನೋಸ್ಥೈರ್ಯ ಹೆಚ್ಚಿಸಿಕೊಂಡು, ಧನಾತ್ಮಕವಾಗಿ ಆಲೋಚಿಸಿದರೆ ಯಾವುದೇ ಸಮಸ್ಯೆಯಾಗದು. ಇದರೊಂದಿಗೆ ಇತರರು ಕೂಡ ರೋಗಿಯಲ್ಲಿ ಭಯವನ್ನು ಹುಟ್ಟಿಸುವ ಕೆಲಸ ಮಾಡಲೇಬಾರದು.

ಇಂತಹ ಕಾಯಿಲೆ ಹಿಂದೆಯೂ ಬಂದಿದೆ, ಮುಂದೆ ಬರುವ ಸಾಧ್ಯತೆಯೂ ಇದೆ. ಹೀಗಾಗಿ ಜನರು ಅನಗತ್ಯ ಭಯಪಡುವ ಬದಲು ಸಾಮಾನ್ಯ ಕಾಯಿಲೆ ಬಂದಿದೆ ಎಂದು ಚಿಕಿತ್ಸೆ ಪಡೆದರೆ ಒಂದೆರಡು ವಾರಗಳಲ್ಲೇ ಕೊರೊನಾದಿಂದ ಮುಕ್ತರಾಗಬಹುದು. ಕೊರೊನಾ ಬಾಧಿತರೆಂದರೆ ಅವರನ್ನು ಅಸ್ಪೃಶ್ಯರಂತೆ ಕಾಣುವ ಪರಿಸ್ಥಿತಿ ದೂರವಾಗಬೇಕು. ಇದರಿಂದ ಜನ ತಮ್ಮಲ್ಲಿ ರೋಗ ಲಕ್ಷಣಗಳಿದ್ದರೂ ಅದನ್ನು ಹೇಳುವುದಕ್ಕೆ ಹಿಂದೇಟು ಹಾಕುತ್ತಾರೆ. ಇದು ಇತ್ತೀಚೆಗಷ್ಟೇ ಕೊರೊನಾ ಗೆದ್ದಿರುವ ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಅಭಿಮತ.

ಇಡೀ ಜಗತ್ತನ್ನು ಕಾಡಿರುವ ಕೊರೊನಾ ಕಾಯಿಲೆಯ ಕುರಿತು ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಕೊರೊನಾ ರೋಗಿಗಳಲ್ಲಿ ಭಯ ಹುಟ್ಟಿಸುವ ಬದಲು ಧೈರ್ಯ ತುಂಬುವ ಕೆಲಸವಾಗಬೇಕು. ಇದರಿಂದ ಅರ್ಧ ರೋಗ ದೂರವಾಗುತ್ತದೆ. ರೋಗವನ್ನು ದ್ವೇಷಿಸಬೇಕೇ ವಿನಾ ರೋಗಿಯನ್ನು ಅಲ್ಲ. ಇದನ್ನು ಎಲ್ಲರೂ ಪಾಲಿಸಬೇಕು. ಏಕೆಂದರೆ ಹೆಚ್ಚಿನ ಕಡೆ ರೋಗಿಯನ್ನೇ ದ್ವೇಷಿಸುವಂತೆ ಕಾಣುತ್ತಾರೆ. ಇದು ಸಲ್ಲದು. ಕೊರೊನಾ ಸೋಂಕಿತರಿಗೆ ಅವರ ಕಾಯಿಲೆಗಿಂತಲೂ ಅವರನ್ನು ಕಾಣುವ ದೃಷ್ಟಿಕೋನವೇ ಕುಪಿತಗೊಳ್ಳುವಂತೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಅವರನ್ನು ಕಾಣುವ ದೃಷ್ಟಿಕೋನದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು ಅಗತ್ಯ.

ಸುರಕ್ಷತೆಗೆ ಆದ್ಯತೆ
ಪ್ರಸ್ತುತ ದಿನಗಳಲ್ಲಿ ಕೊರೊನಾಕ್ಕೆ ಜನರು ಅನಗತ್ಯ ಭಯಪಡುವ ಸ್ಥಿತಿ ಇದೆ. ಆದರೆ ಜನರು ಭಯಪಡುವ ಬದಲು ಸುರಕ್ಷತೆಗೆ ಆದ್ಯತೆ ನೀಡಿದರೆ ಕೊರೊನಾ ನಮಗೆ ಬಾಧಿಸುವ ಸಾಧ್ಯತೆ ತೀರಾ ಕಡಿಮೆ. ಮುಖ್ಯವಾಗಿ ಸರಕಾರದ ನಿರ್ದೇಶನದಂತೆ ಎಚ್ಚರಿಕೆ ವಹಿಸಿ ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು
ಕೊಳ್ಳುವುದು ಅಗತ್ಯವಾಗಿದೆ. ಅಗತ್ಯವಿದ್ದರೆ ಮಾತ್ರವೇ ಹೊರಗೆ ಹೋಗಿ. ಕೊರೊನಾಕ್ಕೆ ಭಯಪಡಬೇಕಿಲ್ಲ. ಆದರೆ ಸಂಶಯವಿದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.
ಜನಾರ್ದನ ಪೂಜಾರಿ ಹಾಗೂ ಅವರ ಮನೆಯ ಸದಸ್ಯರಿಗೆ ಕೊರೊನಾ ಸೋಂಕು ತಗಲಿ ಪ್ರಸ್ತುತ ಎಲ್ಲರೂ ಗುಣಮುಖರಾಗಿದ್ದು, ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ರೋಗ ನಿರೋಧಕ ಶಕ್ತಿ ಹೆಚ್ಚಲಿ
ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದರೆ ನಮಗೆ ಯಾವುದೇ ಕಾಯಿಲೆಗಳು ಬಾಧಿಸುವುದಿಲ್ಲ. ಅದೇ ರೀತಿ ಕೊರೊನಾಕ್ಕೂ ರೋಗ ನಿರೋಧಕ ಶಕ್ತಿಯೇ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ಜನತೆ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಮುಖ್ಯವಾಗಿ ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕಿದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾದಂತೆ ನಿಮಗೆ ಬಾಧಿಸುವ ಕಾಯಿಲೆಗಳು ಕೂಡ ದೂರವಾಗುತ್ತವೆ. ಒಂದು ವೇಳೆ ಬಂದರೂ ನಾವು ಶೀಘ್ರ ಗುಣಮುಖರಾಗಲು ಸಾಧ್ಯ
-ಜನಾರ್ದನ ಪೂಜಾರಿ,  ಕೇಂದ್ರದ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next