ವ್ಯಾವಹಾರಿಕವಾಗಿ ನಡೆದುಕೊಳ್ಳುವವರ ಜೊತೆ, ಎಮೋಷನಲ್ ಅಟ್ಯಾಚ್‌ಮೆಂಟ್ ಬೆಳೆಸಿಕೊಳ್ಳಬಾರದು. ಇದು ಸಂಬಂಧಗಳಲ್ಲೂ, ಕಂಪನಿಗಳಲ್ಲೂ ಅಪ್ಲೈ ಆಗುತ್ತದೆ…
ಲಾಕ್‌ಡೌನ್, ಕೋವಿಡ್ 19… ಈ ಪದಗಳನ್ನು ಕೇಳುವ ಮನಸ್ಸುಗಳು ಕಲ್ಲವಿಲಗೊಳ್ಳುತ್ತವೆ. ಈ ಮೂರು ತಿಂಗಳಲ್ಲಿ, ಆ ಮಟ್ಟದ ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಮುಂದೇನು, ನಮ್ಮ ಭವಿಷ್ಯ ಹೇಗೆ, ಕೆಲಸ ಇರುತ್ತಾ… ಇಂಥವೇ ಯೋಚನೆಗಳು ಎಲ್ಲರನ್ನೂ ಹಣ್ಣುಮಾಡಿವೆ. ಪರಿಣಾಮ; ಮನಸ್ಸು ಭಯದ ಗೂಡಾಗಿದೆ. “ಭವಿಷ್ಯ ಕುರಿತು ಯೋಚಿಸಿಯೇ, ಟೆಕ್ಕಿಯೊಬ್ಬರು ಮಾನಸಿಕವಾಗಿ ತಲ್ಲಣಗೊಂಡಿದ್ದಾರೆ.
ಯೋಚಿಸಿ ಯೋಚಿಸಿ ಅವರಿಗೆ ರಾತ್ರಿ ನಿದ್ದೆಬಾರದು. ಕಣ್ಣುಗಳೆಲ್ಲ ಊದಿಕೊಂಡಿವೆ’- ಎಂದು ಪರಿಚಯದ ವೈದ್ಯರೊಬ್ಬರು ಹೇಳಿದರು. ಟೆಕ್ಕಿಗೆ ಅಂಥಾ ಸ್ಥಿತಿ ಯಾಕೆ ಬಂತು ಎಂದು ವಿಚಾರಿಸಿದಾಗ ತಿಳಿದದ್ದು: ಅವರು ಪ್ರತಿ ತಿಂಗಳೂ 80 ಸಾವಿರದಷ್ಟು ಸಾಲ ಕಟ್ಟಬೇಕು. ಈಗ ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಮೂರು ತಿಂಗಳ ನೋಟಿಸ್ ಕೈಯಲ್ಲಿ ಇದೆ. ಪರಿಣಾಮವಾಗಿ, ಮುಂದಿನ ದಾರಿಯ ಬಗ್ಗೆ ತಿಳಿಯದೆ ಕಂಗಾಲಾಗಿದ್ದಾರೆ.
ಕೋವಿಡ್ 19 ತಂದ ಸಂಕಷ್ಟಗಳು ಒಂದೆರಡಲ್ಲ. ಕೋವಿಡ್ 19ದ ರಿಣಾಮಕ್ಕಿಂತ, ಕಂಪನಿಗಳು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳುವ ತೀರ್ಮಾನ ಇದೆಯಲ್ಲ; ಅದು, ಇಡೀ ಸಮಾಜದ ಸೈಕಾಲಜಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನೀವು ಗಮನಿಸಿರಬಹುದು. ಎಷ್ಟೋ ಜನ, ಆಫೀಸಿನ ಬಗ್ಗೆ ಅತೀ ಅನ್ನುವಂಥ ಅಟ್ಯಾಚ್‌ಮೆಂಟ್ ಬೆಳೆಸಿಕೊಂಡಿರುತ್ತಾರೆ. ಎಲ್ಲ ಜವಾಬ್ದಾರಿಯನ್ನೂ ತಮ್ಮ ಹೆಗಲ ಮೇಲೆ ಇಟ್ಟುಕೊಂಡು ಓಡಾಡುತ್ತಿರುತ್ತಾರೆ.
ಆದರೆ, ಕೆಲಸ ಬಿಡಬೇಕಾಗಿ ಬಂದಾಗ- “ಕಂಪನಿಗೆ ಎಷ್ಟೆಲ್ಲಾ ದುಡಿದೆ, ಕೊನೆಗೆ ಸಿಕ್ಕ ಮರ್ಯಾದೆ ಇದು…’ ಅನ್ನೋ ಬೇಸರದ ಮಾತು, ಅವರ ಬಾಯಿಂದಲೇ ಬರುತ್ತದೆ. ಗಮನಿಸಿ: ಅವರ ಸಂಕಟದ ಮಾತಿನ ಹಿಂದೆ ಎಮೋಷನಲ್ ಅಟ್ಯಾಚ್ ಮೆಂಟ್ ಕೆಲಸ ಮಾಡುತ್ತಿರುತ್ತದೆ. ಕೆಲಸದ ಕುರಿತು ಉತ್ಸಾಹ, ಕರ್ತವ್ಯಪರತೆ ತಪ್ಪಲ್ಲ. ಆದರೆ, ಅತಿಯಾದ ಅಟ್ಯಾಚ್‌ಮೆಂಟ್ ಅಗತ್ಯವಿಲ್ಲ. ಇದೇ ಉತ್ಸಾಹವನ್ನು ಬದುಕುವುದರ ಕಡೆ ತೋರಿಸಿದರೆ, ಪಿಂಕ್ ಸ್ಲಿಪ್ ಸಿಕ್ಕರೂ ಮನಸ್ಸು ನಿರಾಳವಾಗಿರುತ್ತಿತ್ತು, ಅಲ್ಲವೇ? ಇಂಥ ಸಂದರ್ಭದಲ್ಲಿ ಮನಸ್ಸನ್ನು ಕೆಡಿಸಿಕೊಳ್ಳಬಾರದು.
ಕಷ್ಟದ ಸಂದರ್ಭವನ್ನು ಎದುರಿಸಲು ಸಜ್ಜಾಗಬೇಕು. ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವ ದಾರಿಗಳನ್ನು ನೋಡಬೇಕು. ಮೂರು ತಿಂಗಳು ಕಷ್ಟವಾಗಬಹುದು. ಆಮೇಲೆ ಯಾವುದಾದರೂ ಒಂದು ದಾರಿ ತೆರೆದುಕೊಳ್ಳುತ್ತದೆ. ಅಲ್ಲಿಯ ತನಕ ತಾಳ್ಮೆ ಬೇಕು. ಅನಗತ್ಯವಾಗಿ ಏನೇನೋ ಊಹಿಸಲು ಹೋಗದೆ, ಮನಸ್ಸೇ ರಿಲ್ಯಾಕ್ಸ್ ಪ್ಲೀಸ್, ಅಂತ ನಿಮಗೆ ನೀವೇ ಹೇಳಿಕೊಳ್ಳುತ್ತಿರಬೇಕು.