ಅಣ್ಣ ತಂಗಿಯ ವಿಶೇಷ ಸಂಬಂಧವು ನಿಜಕ್ಕೂ ಅಮೂಲ್ಯ ಇದು ಸ್ನೇಹ, ಪ್ರೀತಿ, ಜಗಳಗಳಿಂದ ಕೂಡಿದ ಒಂದು ನಂಟು. ಅದೆಷ್ಟೋ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡಿ ನಂತರ ಕೋಪವು ಕೇವಲ ಕ್ಷಣಿಕವೇ ಎಂಬುದನ್ನು ಅರಿತು, ನಗುತ್ತಾ ಎಲ್ಲಾ ದ್ವೇಷವನ್ನು ಮರೆಸುವ ಶಕ್ತಿ ಈ ಸಂಬಂಧಕ್ಕಿದೆ. ಇದಕ್ಕಾಗಿಯೇ ಒಂದು ವಿಶೇಷವಾದ ದಿನವನ್ನು ಮೀಸಲಾಡಲಾಗಿದೆ.
ಅದುವೇ ಆಗಸ್ಟ್ 19ರಂದು ಆಚರಿಸುವ ರಕ್ಷಾಬಂಧನ. ರಕ್ಷಾಬಂಧನ ಎಂಬ ಪದ ಕೇಳಿದಾಗಲೇ ಆ ಪದದಲ್ಲಿ ಎಷ್ಟು ತೂಕವಿದೆ ಎಂದು ನಮಗೆ ಅರಿವಾಗುತ್ತದೆ.
ಭಾರತದ ಎಷ್ಟೋ ಪ್ರಮುಖ ಹಬ್ಬಗಳಲ್ಲಿ ಈ ಹಬ್ಬವು ಕೂಡ ಒಂದಾಗಿದೆ. ಈ ಹಬ್ಬದಂದು ತಂಗಿಯಾದವಳು ತನ್ನ ಅಣ್ಣನಿಗೆ ರಾಖೀ ಕಟ್ಟುವುದರ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತಾಳೆ.
ರಾಖೀ ಎಂದರೆ ಅದು ಕೇವಲ ದಾರವಲ್ಲ ಅಣ್ಣ ತಂಗಿ ಸಂಬಂಧವನ್ನು ಬೆಸೆಯುವ ಪವಿತ್ರವಾದ ಶ್ರೀರಕ್ಷೆ . ರಕ್ಷಾಬಂಧನ ಎನ್ನುವ ಪದವು ರಕ್ಷಣೆ, ಬಲ, ಧೈರ್ಯ, ನಂಬಿಕೆ ಎಂಬ ಅರ್ಥವನ್ನು ತನ್ನೊಳಗೆ ತುಂಬಿಕೊಂಡಿದೆ. ಒಬ್ಬ ಅಣ್ಣನಾದವನು ತನ್ನ ತಂಗಿಗೆ ಯಾವಾಗಲೂ ಬೆನ್ನೆಲುಬಾಗಿ, ಕಾವಲುಗಾರನಾಗಿ, ಅವಳನ್ನು ರಕ್ಷಣೆ ಮಾಡುವವನಾಗಿರುತ್ತಾನೆ.
ತಂಗಿಗೆ ಅಣ್ಣನು ವಿಶ್ವಾಸದ ಸಂಕೇತವಾಗಿರುತ್ತಾನೆ. ಈ ಸಂಬಂಧದ ಪ್ರೀತಿಯ ಸಂಕೇತವಾಗಿ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಕೇವಲ ಒಡಹುಟ್ಟಿದ ಸಹೋದರ ಸಹೋದರಿಯರಿಗೆ ಮಾತ್ರ ಸೀಮಿತವಲ್ಲ, ತನ್ನನ್ನು ಅಣ್ಣನಂತೆ ಕಾಳಜಿ ವಹಿಸುವ, ಧೈರ್ಯ ತುಂಬುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಈ ರಾಖೀ ಹಬ್ಬವನ್ನು ಆಚರಿಸುತ್ತಾರೆ.
ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತ ಸುಂದರವಾಗಿ ಕಾಣುತ್ತಾನೋ ಅದೇ ರೀತಿ ಒಂದು ಹೆಣ್ಣಿನ ಜೀವನದಲ್ಲಿ ಅವಳು ತಪ್ಪು ಮಾಡಿದಾಗ ಅವಳನ್ನು ತಿದ್ದಲು, ದುಃಖದಲ್ಲಿದಾಗ ಕಣ್ಣೀರು ಓರೆಸಲು, ಭಯದಲ್ಲಿದ್ದಾಗ ಧೈರ್ಯ ತುಂಬಲು ಒಬ್ಬ ಅಣ್ಣನಿದ್ದರೆ ಅವಳ ಬದುಕು ಕೂಡ ಸುಂದರಮಯವಾಗುತ್ತದೆ.
ಅಣ್ಣ ತಂಗಿ ಎನ್ನುವುದು ಕೇವಲ ಹೆಸರಿಗೆ ಮಾತ್ರವಲ್ಲ, ಆ ಎರಡು ಪದಗಳಲ್ಲಿ ಹೇಳಲಾಗದ ಅದೆಷ್ಟೋ ಭಾವನೆಗಳಿವೆ. ಬೆಲೆ ಕಟ್ಟಲಾಗದ ಅತ್ಯಮೂಲ್ಯವಾದ ಬಾಂಧವ್ಯ ಎಂದರು ತಪ್ಪಾಗಲಾರದು. ಬಾಳಿಗೊಂದು ಸಂತೋಷದ ಕಿರಣವನ್ನು ತುಂಬುವ ಈ ಸಂಬಂಧವು ಎಂದೆಂದಿಗೂ ಮರೆಯಲಾಗದ ಅನುಬಂಧ.
ದೀಪ್ತಿ ಕೋಟ್ಯಾನ್
ಎಸ್.ಡಿ.ಎಂ.ಕಾಲೇಜು ಉಜಿರೆ