ಚೀನಾದ ನಂತರ ಕೊರೊನಾ ವೈರಸ್ ಅತಿ ಹೆಚ್ಚು ಹಾನಿ ಮಾಡಿರುವುದು ಐರೋಪ್ಯ ರಾಷ್ಟ್ರ ಇಟಲಿಯಲ್ಲಿ. ಅದೇಕೆ, ಇಟಲಿಯಂಥ ರಾಷ್ಟ್ರ ಈ ಪರಿ ಸಾವು-ನೋವು ಅನುಭವಿಸುತ್ತಿದೆ ಎಂದೇ ಎಲ್ಲರೂ ಅಚ್ಚರಿಪಡುತ್ತಿದ್ದಾರೆ. ಈ ಪ್ರಶ್ನೆಗೆ, “ಇದೆಲ್ಲ ನಮ್ಮ ಅಸಡ್ಡೆಯಿಂದಲೇ ಆಯಿತು’ ಎಂದು ಉತ್ತರಿಸುತ್ತಾರೆ ಇಟಾಲಿಯನ್ನರು.
ಇಟಾಲಿಯನ್ ಮಾಧ್ಯಮಗಳು ಕೊರೊನಾ ವೈರಸ್ ಬಗ್ಗೆ ವರದಿ ಮಾಡಲಾರಂಭಿಸಿದಾಗ, ಅನೇಕ ಇಟಾಲಿಯನ್ನರಂತೆ, ಸಾಕ್ಷ್ಯ ಚಿತ್ರ ನಿರ್ದೇಶಕ ಓಲ್ಮೋ ಪೇರೆಂಟಿ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲವಂತೆ. “”ಕೊರೊನಾ ವೈರಸ್ ಅಪಾಯ ಗಂಭೀರವಾದದ್ದು ಎಂದು ವಾದಿಸುತ್ತಿದ್ದವರನ್ನೆಲ್ಲ ನಾನು ಮತ್ತು ನನ್ನ ಗೆಳೆಯರು ಅಪಹಾಸ್ಯ ಮಾಡುತ್ತಿದ್ದೆವು” ಎನ್ನುತ್ತಾರವರು.
ಕೆಲವೇ ದಿನಗಳ ನಂತರ, ತಾವು ಯಾವುದೋ ಭ್ರಮಾಲೋಕದಲ್ಲಿ ಬದುಕುತ್ತಿದ್ದೇವೇನೋ ಎಂಬಂತೆ ಇಟಾಲಿಯನ್ನರ ವಾಸ್ತವವೇ ಬುಡಮೇಲಾಯಿತು. ಬೆರಳೆಣಿಕೆಯಲ್ಲಿ ವರದಿಯಾಗುತ್ತಿದ್ದ ಪ್ರಕರಣಗಳು ನೋಡನೋಡುತ್ತಿದ್ದಂತೆಯೇ ನಿತ್ಯ ನೂರರ ಗಡಿ ದಾಟಲಾರಂಭಿಸಿಬಿಟ್ಟವು. 2100ಕ್ಕೂ ಅಧಿಕ ಜನರು ಈಗ ಈ ದೇಶದಲ್ಲಿ ಸಾವಿಗೀಡಾಗಿದ್ದಾರೆ. 28 ಸಾವಿರ ಜನರಿಗೆ ಸೋಂಕು ತಗುಲಿದೆ. ಸೋಮವಾರ ಒಂದೇ ದಿನ 349 ಜನ ಮೃತಪಟ್ಟಿದ್ದಾರೆ! ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಇಟಲಿಯ ಆರ್ಥಿಕತೆ ಹಳ್ಳ ಹಿಡಿದಿದೆ. ಆಸ್ಪತ್ರೆಗಳು ಕೋವಿಡ್- 19 ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಆಸ್ಪತ್ರೆಗಳು ಎಲ್ಲರಿಗೂ ಚಿಕಿತ್ಸೆ ಒದಗಿಸಲಾಗದೇ ಕೈ ಚೆಲ್ಲುತ್ತಿವೆ. ರೋಗಾವಸ್ಥೆ ಉಲ್ಬಣವಾದವರಿಗೆ ಮಾತ್ರ ಕೃತಕ ವೆಂಟಿಲೇಷನ್ ಸೌಲಭ್ಯ ಸಿಗುತ್ತಿದ್ದು, ಉಳಿದವರಿಗೆ ಅದೂ ಇಲ್ಲ. ಹೀಗಾಗಿ, ಸಾವಿರಾರು ಸೋಂಕಿತರು ಯಾವುದೇ ಸಹಾಯವಿಲ್ಲದೇ ಅನಿಶ್ಚಿತತೆ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಈಗ ಇಟಲಿಯಲ್ಲಿ ಸಾಂಪ್ರದಾಯಿಕ ರೀತಿಯ ಶವಸಂಸ್ಕಾರವನ್ನೂ ನಿಷೇಧಿಸಲಾಗಿದೆ(ಹೆಚ್ಚು ಜನರು ಸೇರುತ್ತಾರೆ ಎಂಬ ಕಾರಣಕ್ಕಾಗಿ). ಅನೇಕ ಸ್ಮಶಾನಗಳನ್ನು ಮುಚ್ಚಲಾಗಿದೆ. ಹೀಗಾಗಿ, ದೇಹಗಳು ಶವಪೆಟ್ಟಿಗೆಯಲ್ಲೇ ಸಾಲುಗಟ್ಟಿವೆ! ಕುಟುಂಬಸ್ಥರು ದಾರಿ ತೋಚದೇ ಕಂಗಾಲಾಗಿದ್ದಾರೆ.
“”ನಾವು ಆರಂಭದಲ್ಲಿ ಕೊರೊನಾ ಅಪಾಯವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದಾಗಿ, ಇಂದು ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಅಂದು ನಾವು ಮಾಡಿದ ತಪ್ಪನ್ನೇ, ಈಗ ಅನೇಕ ದೇಶಗಳು ಮಾಡುತ್ತಿವೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳ ಜನರು ಈ ವಿಷಯವನ್ನು ಹಗುರಾಗಿ ನೋಡುತ್ತಿದ್ದಾರೆ. ” ಎನ್ನುವ ಓಲ್ಮೋ ಪೇರೆಂಟಿ, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಒಂದು ಕರೆ ಕೊಟ್ಟಿದ್ದರು. ಏಕಾಂತದಲ್ಲಿ ಇರುವ ಜನರು ತಮ್ಮ ಅನುಭವದ ಬಗ್ಗೆ ವಿಡಿಯೋ ಮಾಡಿ ಕಳಿಸುವಂತೆ ಅವರು ಕೇಳಿಕೊಂಡಾಗ, ಅನೇಕ ಇಟಾಲಿಯನ್ನರು ತಮ್ಮ ಅನುಭವಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋಗಳನ್ನೆಲ್ಲ ಒಟ್ಟುಗೂಡಿಸಿ “10 ಡೇಸ್’ ಎನ್ನುವ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಒಂದು ಕಿರು ವಿಡಿಯೋ ಬಿಡುಗಡೆಗೊಳಿಸಲಾಗಿದೆ. ವೀಡಿಯೋದಲ್ಲಿ ಯುವಕನೊಬ್ಬ, “”ಎಲ್ಲರೂ ಭಾವಿಸುವಂತೆ ಕೊರೊನಾ ಅಪಾಯ ಅಂತೆಕಂತೆಯಲ್ಲ” ಎಂದು ಎಚ್ಚರಿಸುತ್ತಾನೆ. ಮಾಸ್ಕ್ ಧರಿಸಿರುವ ಮಹಿಳೆಯೊಬ್ಬಳು, ತಾನು ಈ ಮೊದಲು ಮಾಸ್ಕ್ ಧರಿಸಿದವರನ್ನೆಲ್ಲ ಅಣಕಿಸುತ್ತಿದ್ದೆ, ಈಗ ಇಂಥ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ಒಪ್ಪಿಕೊಳ್ಳುತ್ತಾಳೆ.
ಇದೇ ರೀತಿಯೇ ಇನ್ನೂ ಅನೇಕ ಇಟಾಲಿಯನ್ನರ ಸ್ವಾನುಭವದ ಕಥೆಗಳನ್ನು ಹಂತಹಂತವಾಗಿ ಬಿಡುಗಡೆಗೊಳಿಸುವುದಾಗಿ ಓಲ್ಮೋ ಪೇರೆಂಟಿ ಹೇಳುತ್ತಾರೆ. “”ನಾವು ತಪ್ಪು ಮಾಡಿ, ಇಂದು ಇಂಥ ದುಸ್ಥಿತಿಗೆ ಸಿಲುಕಿದ್ದೇವೆ. ಆದರೆ ತಪ್ಪುಗಳಿಗೆ ಇರುವ ವಿಶೇಷ ಗುಣವೇನೆಂದರೆ, ನೀವು ಸ್ವತಃ ತಪ್ಪು ಮಾಡಿ ಪಾಠ ಕಲಿಯಬೇಕಿಲ್ಲ. ಬೇರೆಯವರ ತಪ್ಪಿನಿಂದಲೂ ಪಾಠ ಕಲಿಯಬಹುದು. ಹೀಗಾಗಿ, ಉಳಿದ ದೇಶದವರಿಗೆಲ್ಲ ನಮ್ಮ ವಿನಂತಿಯಿಷ್ಟೇ- ಈ ರೋಗವನ್ನು ಹಗುರವಾಗಿ ಪರಿಗಣಿಸದಿರಿ. ಮುನ್ನೆಚ್ಚರಿಕೆ ಕ್ರಮಗಳನ್ನು ದಯವಿಟ್ಟೂ ಪಾಲಿಸಿ, ಹೊರಗೆ ಓಡಾಡಬೇಡಿ. ಜಗತ್ತು ಭಾವಿಸುತ್ತಿರುವುದಕ್ಕಿಂತಲೂ ಈ ಸಮಸ್ಯೆ ಗಂಭೀರವಾಗಿದೆ. ಅಮೆರಿಕ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳು ಇನ್ನೊಂದು 10-15 ದಿನದಲ್ಲಿ ಇಟಲಿಯಂಥದ್ದೇ ಪರಿಸ್ಥಿತಿಯನ್ನು ಎದುರಿಸಲಿವೆ ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ. ಟೇಕ್ ಕೇರ್, ಅಸಡ್ಡೆ ಮಾಡಬೇಡಿ” ಎಂಬ ಸಲಹೆ ನೀಡುತ್ತಾರೆ.