Advertisement
ಆದರೆ ಕನ್ನಡ ಚಿತ್ರರಂಗದಲ್ಲಿ “ಸುಪ್ರಭಾತ’, “ಲಾಲಿ’, “ಅಮೃತವರ್ಷಿಣಿ’ಯಂತಹ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಖ್ಯಾತ ನಿರ್ದೇಶಕ ದಿನೇಶ್ ಬಾಬು ಮಾತ್ರ ತಮಗೆ “ಸ್ಟಾರ್ ನಟರ ಸಹವಾಸವೇ ಬೇಡ. ನನಗೆ ಯಾವುದೇ ಸ್ಟಾರ್ಗೆ ಸಿನಿಮಾ ಮಾಡುವ ಯೋಚನೆ ಇಲ್ಲ’ ಅಂತಿದ್ದಾರೆ.
Related Articles
Advertisement
“ಈಗ ಬರುತ್ತಿರುವ ಹೊಸ ತಲೆಮಾರಿನ ನಿರ್ದೇಶಕರಿಗೆ ಮೇಕಿಂಗ್ ಕಡೆಗಿರುವ ಆಸಕ್ತಿ, ಚಿತ್ರದ ಸಬೆjಕ್ಟ್ (ಕಥಾವಸ್ತು) ಕಡೆಗೆ ಇರುವಂತೆ ಕಾಣುತ್ತಿಲ್ಲ. ಯಾವುದೇ ಚಿತ್ರಕ್ಕೆ ಸಬ್ಜೆಕ್ಟ್ (ಕಥಾವಸ್ತು) ತುಂಬಾ ಮುಖ್ಯ. ಒಂದು ಕಥೆಯನ್ನು ವಿಭಿನ್ನವಾಗಿ ಹೇಗೆ ಕಟ್ಟಿಕೊಡುತ್ತೇವೆ ಎನ್ನುವ ಮೂಲಕವೇ ನೋಡುಗರಲ್ಲಿ ಕುತೂಹಲ ಹುಟ್ಟಿಸಬೇಕು. ಅದಕ್ಕೆ ಸ್ಕ್ರಿಪ್ಟ್ ಹಂತದಲ್ಲೇ ಸಾಕಷ್ಟು ತಯಾರಿ ಮುಖ್ಯ. ಆನಂತರ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸ್ಕ್ರೀನ್ ಮೇಲೆ ತರಬಹುದು. ಆದರೆ ಈಗ ಹೆಚ್ಚಿನ ಸಿನಿಮಾ ಮೇಕರ್ಗೆ ಆ ಬಗ್ಗೆ ಯೋಚನೆಯೂ ಇಲ್ಲ, ಆಸಕ್ತಿಯೂ ಇಲ್ಲ. ಇನ್ನು ಸ್ಟಾರ್ ನಟರು ಅಂದುಕೊಂಡವರಿಗೆ ಕೂಡ ಚಿತ್ರದ ಸಬೆjಕ್ಟ್ಗಿಂತ, ಬಜೆಟ್, ರಿಚ್‌ನೆಸ್, ಕ್ಯಾರವಾನ್, ಬಿಲ್ಡಪ್ಸ್, ಓವರ್ ಪಬ್ಲಿಸಿಟಿ ಇಂಥವುಗಳೇ ಮುಖ್ಯವಾಗುತ್ತದೆ. ಆದರೆ ನಾನು ಸಬ್ಜೆಕ್ಟ್ ಮೇಲೆ ಸಿನಿಮಾ ಮಾಡುವವನು. ಹಾಗಾಗಿ ಅಂಥ ಸ್ಟಾರ್ ಜೊತೆಗೆ ಮಾಡೋದಕ್ಕೆ ಸಾಧ್ಯವೇ ಇಲ್ಲ’ ಅಂತಾರೆ ದಿನೇಶ್ ಬಾಬು.
ಇದೇ ವೇಳೆ ದಿನೇಶ್ ಬಾಬು ತಮ್ಮ ಸಿನಿಯಾನವನ್ನು ಮೆಲುಕು ಹಾಕುತ್ತಾರೆ. “ನಾನು ಹಿಂದೆ ಕೆಲಸ ಮಾಡಿದ ಎಲ್ಲಾ ಸ್ಟಾರ್ ನಟ-ನಟಿಯರಲ್ಲಿ ಒಂದು ಶಿಸ್ತು ಇರುತ್ತಿತ್ತು. ಒಂದು ಸಿನಿಮಾಕ್ಕೆ ಸಬೆjಕ್ಟ್ ಎಷ್ಟು ಮುಖ್ಯ, ನಾವು ಎಂಥ ಪಾತ್ರ ಮಾಡುತ್ತಿದ್ದೇವೆ. ಅದಕ್ಕೆ ಎಂಥ ತಯಾರಿ ಬೇಕು. ಒಂದು ಸಿನಿಮಾಕ್ಕೆ ನಾವು ಹೇಗಿರಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿಯೇ ವಿಷ್ಣುವರ್ಧನ್ ಅವರಂಥ ಸ್ಟಾರ್ ನಟನ ಜೊತೆ ಅಷ್ಟೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ಮಾಡುವಾಗ ಆ ಕಲಾವಿದರಿಗೆ ತಾವು ಸ್ಟಾರ್ ಅನ್ನೋ ಯೋಚನೆಯೇ ತಲೆಯಲ್ಲಿ ಇರುತ್ತಿರಲಿಲ್ಲ. ಹಾಗಾಗಿ ಅಂಥ ಸಿನಿಮಾಗಳು ಬರೋದಕ್ಕೆ ಸಾಧ್ಯವಾಯ್ತು. ಆದ್ರೆ ಈಗ ಹಾಗಿಲ್ಲ. ನಟನೊಬ್ಬ ತಾನು ಸ್ಟಾರ್ ಅನ್ನೋದನ್ನ ತಲೆಯಲ್ಲಿ ಇಟ್ಟುಕೊಂಡೆ ಸೆಟ್‌ಗೆ ಬರುತ್ತಾನೆ. ಸಿನಿಮಾದ ಸಬೆjಕ್ಟ್ಗಿಂತ, ಬೇರೆ ಬೇರೆ ವಿಷಯಗಳೇ ಅವರಿಗೆ ಮುಖ್ಯವಾಗುತ್ತದೆ. ಹೀಗಿರುವಾಗ ನಿರ್ದೇಶಕನೊಬ್ಬ ಒಂದೊಳ್ಳೆ ಸದಭಿರುಚಿ ಸಿನಿಮಾ ಮಾಡೋದಾದ್ರೂ ಹೇಗೆ?’ ಎಂದು ಬೇಸರದ ಪ್ರಶ್ನೆಯನ್ನು ಮುಂದಿಡುತ್ತಾರೆ ಬಾಬು.
ಒಬ್ಬ ನಿರ್ದೇಶಕನಿಗೆ ನಿರ್ಮಾಪಕ, ಕಲಾವಿದರ ಸಹಕಾರ ಕೂಡಾ ಮುಖ್ಯ ಎಂಬುದು ದಿನೇಶ್ ಬಾಬು ಅವರ ಮಾತು. “ಒಬ್ಬ ಹೊಸ ನಿರ್ದೇಶಕರ ಮೂರು-ನಾಲ್ಕು ವರ್ಷ ಕಷ್ಟಪಟ್ಟು ಒಂದೊಳ್ಳೆ ಕಥೆ ಮಾಡಿ, ಅದರ ಮೇಲೆ ಸಾಕಷ್ಟು ಕೆಲಸ ಮಾಡಿ, ಅದನ್ನು ಸಿನಿಮಾ ಮಾಡುತ್ತಾನೆ. ಅವನ ಆ ಸಿನಿಮಾ ಹಿಟ್ ಆಗುತ್ತಿದ್ದಂತೆ, ಅವರ ಕೆಲಸದ ಶೈಲಿಯೇ ಬದಲಾಗುತ್ತದೆ. ಹಿಂದೆಯೇ ಹತ್ತಾರು ಪ್ರೊಡ್ನೂಸರ್ ಬರುತ್ತಾರೆ. ಆ ನಿರ್ದೇಶಕ ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಾನೆ. ಎರಡು ತಿಂಗಳಿಗೊಂದು ಸಿನಿಮಾ ಮಾಡಲು ಶುರು ಮಾಡ್ತಾನೆ. ಒಂದು ಒಳ್ಳೆಯ ಸಿನಿಮಾ ಕೊಟ್ಟ ನಿರ್ದೇಶಕ ನಂತರ ಒಂದರ ಹಿಂದೊಂದು ಕೆಟ್ಟ ಸಿನಿಮಾ ಮಾಡ್ತಾನೆ. ತನ್ನ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾನೆ. ಒಳ್ಳೆಯ ಸಬೆjಕ್ಟ್ ಇಟ್ಟುಕೊಂಡು ಅದರ ಮೇಲೆ ವರ್ಕ್ ಮಾಡಿ ಸಿನಿಮಾ ಮಾಡೋದು ದಿನ ಬೆಳಗಾಗುವುದರೊಳಗೆ ಆಗುವಂಥದ್ದಲ್ಲ. ಯಾವುದೇ ಸಿನಿಮಾ ಆಗಲಿ ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಅದರಲ್ಲೂ ಒಳ್ಳೆಯ ಸಿನಿಮಾ ಆಗ್ಬೇಕು ಅಂದ್ರೆ ಅದಕ್ಕೆ ಸಮಯ ಬೇಕೆ ಬೇಕು. ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಹೀಗೆ ಎಲ್ಲರ ಸಹಕಾರವಿರಬೇಕು. ಬೇರೆ ಭಾಷೆಗಳಲ್ಲಿ ಈ ಥರದ ಪರಿಸ್ಥಿತಿ ಇಲ್ಲ. ಕಲಾವಿದರು, ನಿರ್ದೇಶಕರು, ನಿರ್ಮಾಪಕರು ವಿವೇಚನೆಯಿಂದ, ಶಿಸ್ತಿನಿಂದ ಸಿನಿಮಾ ಮಾಡುತ್ತಾರೆ. ನಮ್ಮವರು ಇಂಥದ್ದನ್ನು ನೋಡಿ ಕಲಿತುಕೊಳ್ಳಲು ಸಾಕಷ್ಟಿದೆ’ ಎಂದು ಹೊಸಬರಿಗೆ ಕಿವಿ ಮಾತು ಹೇಳುತ್ತಾರೆ.
ಜಿ.ಎಸ್.ಕಾರ್ತಿಕ ಸುಧನ್