ಬೆಳ್ತಂಗಡಿ: ತುಳು ಭಾಷೆಯ ಮೇಲೆ ಕನ್ನಡದ ಹೇರಿಕೆ ನಿಲ್ಲಬೇಕು ಹಾಗೂ ಇದೀಗ ಪ್ರಸ್ತಾವನೆಯಲ್ಲಿರುವ ಕನ್ನಡ ಧ್ವಜವನ್ನು ತುಳುನಾಡಿನಲ್ಲಿ ಕಡ್ಡಾಯಗೊಳಿಸಬಾರದು ಎಂದು ತುಳುನಾಡ್ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಶೈಲೇಶ್ ಆರ್. ಜೆ. ಒತ್ತಾಯಿಸಿದ್ದಾರೆ. ಅವರು ಮಂಗಳವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡಕ್ಕೆ ಪ್ರತ್ಯೇಕ ಧ್ವಜವಿರುವುದಕ್ಕೆ ತಮ್ಮ ಯಾವ ವಿರೋಧವೂ ಇಲ್ಲ. ಆದರೆ ಅದನ್ನು ತುಳುನಾಡಿನಲ್ಲಿ ಕಡ್ಡಾಯಗೊಳಿಸಿ, ತುಳುವರ ಮೇಲೆ ಹೇರಿಕೆ ಮಾಡಬಾರದು ಎಂಬುದು ಒತ್ತಾಯವಾಗಿದೆ. ತುಳು ಭಾಷೆಗೆ ರಾಜ್ಯದಲ್ಲಿಯೇ ಯಾವುದೇ ಸ್ಥಾನಮಾನ ಇಲ್ಲವಾಗಿದ್ದು ಭಾಷೆಯನ್ನು ಕಡೆಗಣಿಸುವ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಶಾಲೆಗಳಲ್ಲಿ ತುಳು ಭಾಷೆಯ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ತುಳುವನ್ನು ಎರಡನೇ ಭಾಷೆಯನ್ನಾಗಿ ತುಳುನಾಡಿನಲ್ಲಿ ಕಲಿಸುವಂತಾಗಬೇಕು. ಇದೀಗ ಕನ್ನಡ ಲಿಪಿಯಲ್ಲಿ ತುಳು ಭಾಷೆಯನ್ನು ಕಲಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಮಕ್ಕಳಿಗೆ ತುಳು ಲಿಪಿಯನ್ನು ಕಲಿಸುವ ಕಾರ್ಯನಡೆಯಬೇಕು ಹಾಗೂ ತುಳು ಲಿಪಿಯಲ್ಲಿಯೇ ತುಳು ಭಾಷೆಯನ್ನು ಕಲಿಸುವಂತಾಗಬೇಕು ಎಂದವರು ತಿಳಿಸಿದರು. ತುಳು ಭಾಷೆಗೆ ಮಾನ್ಯತೆ ನೀಡುವುದಕ್ಕಾಗಿ ಕಾಸರಗೋಡು ಸಂಸದ ಕರುಣಾಕರನ್, ರಾಜ್ಯದ ಸಂಸದರಾದ ಆಸ್ಕರ್ ಫೆರ್ನಾಂಡಿಸ್, ಬಿ.ಕೆ. ಹರಿಪ್ರಸಾದ್ ಮತ್ತು ಮಹಾರಾಷ್ಟ್ರದ ಸಂಸದೆ ಪೂನಂ ಮಹಾಜನ್ ಅವರು ಧ್ವನಿಯೆತ್ತಿದ್ದಾರೆ. ಅವರ ಪ್ರಯತ್ನ ಪ್ರಶಂಸನೀಯ ಎಂದರು.
ತುಳು ರಾಜ್ಯ ಸ್ಥಾಪನೆಯಾಗಲಿ
ಎತ್ತಿನಹೊಳೆ ಯೋಜನೆಯ ವಿಚಾರದಲ್ಲಿಯೂ ತುಳುನಾಡಿಗೆ ಅನ್ಯಾಯವಾಗಿದೆ. ತುಳುನಾಡಿನ ಜನರ ಧ್ವನಿಗೆ ಯಾವ ಬೆಲೆಯೂ ಇಲ್ಲವಾಗಿದೆ. ತುಳುನಾಡು ಹರಿದು ಹಂಚಿಹೋಗಿದ್ದು ಒಗ್ಗಟ್ಟಿಲ್ಲದ ಕಾರಣ ಇದು ನಡೆಯುತ್ತಿದೆ. ತುಳುನಾಡನ್ನು ಒಟ್ಟುಗೂಡಿಸಿ ತುಳು ರಾಜ್ಯ ಸ್ಥಾಪನೆಯಾದರೆ ಮಾತ್ರ ತುಳುಭಾಷೆಗೆ, ಸಂಸ್ಕೃತಿಗೆ ಅರ್ಹ ಮನ್ನಣೆ ದೊರಕಲಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಜನತೆ ಪ್ರಯತ್ನಿಸಬೇಕಾಗಿದೆ. ತುಳುನಾಡು ಒಕ್ಕೂಟದ ಗುರಿಯೂ ಇದಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಳುನಾಡು ಒಕ್ಕೂಟದ ಕಾನೂನು ಸಲಹೆಗಾರ, ನ್ಯಾಯವಾದಿ ಪ್ರಶಾಂತ್, ಧರ್ಮಸ್ಥಳ ವಲಯ ಸಮಿತಿ ಸಂಚಾಲಕ, ನ್ಯಾಯವಾದಿ ನವೀನ್ ಬಿ.ಕೆ., ಅಳದಂಗಡಿ ವಲಯ ಸಮಿತಿ ಕಾರ್ಯದರ್ಶಿ ರಾಜೇಶ್ ಕುಲಾಲ್ ಉಪಸ್ಥಿತರಿದ್ದರು. ತಹಶೀಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.