Advertisement

ಬಿರುಕು ಮೂಡಿಸುವ ಯತ್ನಕ್ಕೆ ಕಿವಿಗೊಡಬೇಡಿ: ಕಾಶಿ ಶ್ರೀ

10:31 AM Aug 28, 2017 | Team Udayavani |

ಅಫಜಲಪುರ: ವೀರಶೈವ-ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ವಿಷಯದಲ್ಲಿ ಯಾರೂ ಅನ್ಯತಾ
ಭಾವಿಸಬಾರದು. ನಮ್ಮ ನಮ್ಮಲ್ಲಿಯೇ ಬಿರುಕು ಮೂಡಿಸಿ ರಾಜಕೀಯ ಮಾಡಲು ಕೆಲವರು ಹೊರಟಿದ್ದಾರೆ. ಇದಕ್ಕೆ ಸಾಮಾನ್ಯ ಜನರು ಕಿವಿಗೊಡಬಾರದು ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯರು ನುಡಿದರು. ತಾಲೂಕಿನ ಅಳ್ಳಗಿ (ಬಿ) ಗ್ರಾಮದ
ಶಾಂತಲಿಂಗೇಶ್ವರ ಮಠದ ಜಾತ್ರಾ ಮಹೋತ್ಸವ, ಅಬ್ಬೆ ತುಮಕೂರು ವಿಶ್ವಾರಾಧ್ಯ ಶ್ರೀಗಳ ಪುರಾಣ ಮಹಾಮಂಗಲ
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೀರಶೈವ ಧರ್ಮ ಆದಿಗುರು ರೇಣುಕಾಚಾರ್ಯರಿಂದ ಸ್ಥಾಪಿತವಾಗಿದ್ದು, ಪ್ರಾಚೀನವಾಗಿದೆ. ಈ ಧರ್ಮವನ್ನು ಕೆಲವರು ಬೇಕೆಂತಲೇ ಹಾಳುಗೆಡುವುವ ಕೆಲಸ ಮಾಡುತ್ತಿದ್ದಾರೆ. ಅಂತವರಿಂದ ವೀರಶೈವ ಧರ್ಮಕ್ಕೆ ಯಾವುದೇ ನಷ್ಟವಿಲ್ಲ. ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲಿಂಗಾಯತ ಎನ್ನುವುದು ಒಂದು ಸಂಸ್ಕಾರ ಅಷ್ಟೇ. ಎಲ್ಲರೂ ಭಕ್ತಿ ಭಾವನೆಯಿಂದ ಮಠ-ಮಾನ್ಯಗಳಿಗೆ ಆಗಮಿಸಿ ಪುರಾಣ ಪ್ರವಚನ ಆಲಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳಿ ಎಂದು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಠದ ಪೀಠಾಧಿ ಪತಿ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ನಮಗೆ ಸಂಸ್ಕಾರ ನೀಡಿರುವ ವೀರಶೈವ ಧರ್ಮ ನಮಗೆ ಪರಮೋಚ್ಚವಾಗಿದೆ. ನಾವೆಲ್ಲರೂ ವೀರಶೈವ ಪರಂಪರೆ ಅನ್ವಯ ಜೀವನ ಸಾಗಿಸಬೇಕು ಎಂದು ಹೇಳಿದರು. ಅಫಜಲಪುರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಚಿನ್ಮಯಗಿರಿಯ ಸಿದ್ದರಾಮ ಶ್ರೀಗಳು, ಅತನೂರಿನ ಗುರುಬಸವ ಶಿವಾಚಾರ್ಯರು ಮಾತನಾಡಿದರು. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಕೈಲಾಸಲಿಂಗ ಶಿವಾಚಾರ್ಯರು, ರೇಣುಕ ಶಿವಾಚಾರ್ಯರು ಹಾಗೂ ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ, ಅಳ್ಳಗಿ(ಬಿ) ಗ್ರಾಮಸ್ಥರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next