ಬಸ್‌ನಲ್ಲಿ, ರಾತ್ರಿ ಪ್ರಯಾಣದ ವೇಳೆ, ಸಹ ಪ್ರಯಾಣಿಕರಿಂದ ಆದ ಕಿರುಕುಳದ ಬಗ್ಗೆ ಲೇಖಕಿಯೊಬ್ಬರು ಈಚೆಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಅದಕ್ಕೆ ತಕ್ಷಣ ಸ್ಪಂದಿಸಿದ ಕೆ.ಆಸ್.ಆರ್.ಟಿ.ಸಿ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಘೋಷಿಸಿತು. ಇಷ್ಟಾದರೂ, ಪ್ರಯಾಣದ ಸಂದರ್ಭದಲ್ಲಿ, ಫೇಸ್‌ಬುಕ್ ಗೆಳೆತನದ ನೆಪದಲ್ಲಿ ಒಂದಲ್ಲ ಒಂದು ರೀತಿಯ ಕಿರಿಕಿರಿಗಳು ಆಗುತ್ತಲೇ ಇವೆ…
ಆಗಷ್ಟೇ ಡಿಗ್ರಿಗೆ ಸೇರಿದ್ದೆ. ದಿನಾ ಕಾಲೇಜಿಗೆ ಬಸ್ಸಿನಲ್ಲಿ ಹೋಗಬೇಕಿತ್ತು. ಬೆಳಗ್ಗೆ ನಮ್ಮೂರಿಂದ ಪಟ್ಟಣಕ್ಕೆ ಇರುವುದು ಒಂದೇ ಒಂದು ಬಸ್ಸು. ಅದರಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ರಶು. ಸೀಟ್ ಸಿಗುವುದಂತೂ ಕನಸಿನ ಮಾತೇ. ಅವತ್ತೂ ಬಸ್ ಎಂದಿನಂತೆ ತುಂಬಿಕೊಂಡಿತ್ತು. ಹಿಂದೆ ನಿಂತಿದ್ದ ಹುಡುಗನ ಕೈ ನನ್ನ ಹೆಗಲಿಗೆ ತಾಗುತ್ತಿತ್ತು. ನಾನು ಇನ್ನೂ ಸ್ವಲ್ಪ ಮುಂದೆ ಸರಿದು, ನಿಂತೆ. ಆತನೂ ನನ್ನತ್ತ ಬಾಗಿದ. ಇಕ್ಕಟ್ಟಾಗಿ ನಿಂತಿರೋದ್ರಿಂದ ಹೀಗಾಗ್ತಿದೆ ಅಂತ ನಾನು ಸುಮ್ಮನಿದ್ದೆ. ಬಸ್ಸಿನಿಂದ ಇಳಿದರೆ ಸಾಕಪ್ಪಾ ಅಂತ ಅನ್ನಿಸಿಬಿಟ್ಟಿತ್ತು. ಮರುದಿನವೂ ಅದು ಪುನರಾವರ್ತನೆಯಾಯ್ತು. ಆ ಹುಡುಗ ಬೇಕಂತಲೇ ನನ್ನ ಹಿಂದೆ ಬಂದು ನಿಂತಿದ್ದ. ಬಸ್ಸು ರಶಾಗುತ್ತಿದ್ದಂತೆ, ಆತನ ಕೈ ಮೆಲ್ಲಗೆ ನನ್ನತ್ತ ಬಂತು. ಹಲ್ಲು ಕಚ್ಚಿ ಸಹಿಸಿಕೊಂಡೆ. ಬಸ್ಸಿಳಿದ ಮೇಲೂ ಅದೇ ವಿಷಯ ನೆನಪಾಗಿ, ಮೈ ನಡುಗಿತು. ಅವನನ್ನು ಸುಮ್ಮನೆ ಬಿಡಬಾರದು ಅಂತ ಮನಸ್ಸಿನಲ್ಲೇ ನಿರ್ಧರಿಸಿದೆ.
ಮೂರನೇ ದಿನವೂ ಅವನು ನನ್ನ ಹಿಂದೆಯೇ ನಿಂತ. ಇವತ್ತು ಮೈ ಮುಟ್ಟಲು ಬಂದರೆ ಅವನಿಗೊಂದು ಗತಿ ಕಾಣಿಸಲೇಬೇಕು ಅಂತ ನಿಶ್ಚಯಿಸಿಕೊಂಡೇ ಬಸ್ ಹತ್ತಿದ್ದೆ. ಎರಡು ದಿನ ಸುಮ್ಮನಿದ್ದ ನನ್ನನ್ನು “ಪಾಪದ ಹುಡುಗಿ’ ಅಂದುಕೊಂಡಿದ್ದನೇನೋ; ನಿಧಾನಕ್ಕೆ ನನ್ನ ಸೊಂಟದ ಹತ್ತಿರ ಕೈ ಚಾಚಿದ. ಅವನತ್ತ ತಿರುಗಿ, “ಇನ್ನೊಂದ್ಸಲ ಮೈ ಮುಟ್ಟೋಕೆ ಬಂದ್ರೆ ಕೈ ಮುರಿತೀನಿ ಹುಷಾರ್’ ಅಂತ ಅಬ್ಬರಿಸಿದೆ. ಬಸ್‌ನಲ್ಲಿದ್ದ ಎಲ್ಲರೂ ನಮ್ಮತ್ತ ತಿರುಗಿದರು. ಕಂಡಕ್ಟರ್‌ನನ್ನು ಕರೆದು, ನಡೆದದ್ದನ್ನು ವಿವರಿಸಿದೆ. ಎಲ್ಲರೂ ಸೇರಿ ಅವನಿಗೆ ಕ್ಲಾಸ್ ತೆಗೆದುಕೊಂಡರು. ಅವತ್ತು ಬೆವರುತ್ತಾ ನನ್ಮುಂದೆ ನಿಂತಿದ್ದ ಆತನನ್ನು ಮತ್ತೆಂದೂ ನಾನು ಆ ಬಸ್‌ನಲ್ಲಿ ಕಾಣಲಿಲ್ಲ.
ಇದು ನನ್ನ ಗೆಳತಿ ಹೇಳಿದ ಕತೆ. ಒಮ್ಮೆ ಅವಳು ಹಾಸನದಿಂದ-ಮಂಗಳೂರಿಗೆ ಬಸ್‌ನಲ್ಲಿ ಹೊರಟಿದ್ದಳು. ನಿವೃತ್ತಿಯ ವಯಸ್ಸಿನ ವ್ಯಕ್ತಿಯೊಬ್ಬರು ಆಕೆಯ ಪಕ್ಕ ಕೂತಿದ್ದರಂತೆ. ನೋಡಿದರೆ ಗೌರವ ಮೂಡುವಂತಿದ್ದ ಆ ವ್ಯಕ್ತಿಯ ಪಕ್ಕ ಇವಳು ನಿರಾತಂಕವಾಗಿ ಕುಳಿತಳು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಗೆಳತಿಗೆ ನಿದ್ದೆ ಹತ್ತಿತು. ಹಾಗೇ ಕಣ್ಮುಚ್ಚಿ ನಿದ್ದೆ ಮಾಡುತ್ತಿದ್ದವಳಿಗೆ ಸಡನ್ನಾಗಿ ಎಚ್ಚರಾದಾಗ, ಆ ವ್ಯಕ್ತಿಯ ಕೈ ಇವಳ ಸೊಂಟವನ್ನು ಮುಟ್ಟುತ್ತಿತ್ತಂತೆ. ಅವರಿಂದ ದೂರ ಸರಿದು, ಮತ್ತೆ ಕಣ್ಣುಚ್ಚಿದಳು. ಆದರೆ, ಈ ಸಲ ಅವಳು ನಿದ್ರೆ ಮಾಡುತ್ತಿರಲಿಲ್ಲ. ಅವರು ನಿಜವಾಗಿಯೇ ಮೈ ಮುಟ್ಟಿದರೋ ಅಥವಾ ಪ್ರಮಾದದಿಂದ ಹಾಗಾಯಿತೋ ಅಂತ ಚೆಕ್ ಮಾಡಲು ನಿದ್ದೆ ಬಂದವಳಂತೆ ನಟಿಸಿದಳು. ಆ ವ್ಯಕ್ತಿ ಬೇಕಂತಲೇ ಸೊಂಟ ಸವರುತ್ತಿರುವುದು ಗೊತ್ತಾಯ್ತು. ತಂದೆಗಿಂತ ಹಿರಿಯ ವಯಸ್ಸಿನ ಅವರನ್ನು, ಗದರಿಸಿ ಅವಮಾನ ಮಾಡಲು ಹಿಂಜರಿಕೆ, ಬಸ್‌ನಲ್ಲಿರುವವರು ತನ್ನನ್ನೇ ಅನುಮಾನಿಸಿದರೆ ಅಂತ ಭಯ. ಆಗ ಆಕೆ ಬ್ಯಾಗ್‌ನಿಂದ ಉಪಾಯವಾಗಿ ಸೇಫ್ಟಿ ಪಿನ್ ತೆಗೆದು, ಅವರ ಕೈಗೆ ಜೋರಾಗಿ ಚುಚ್ಚಿಬಿಟ್ಟಳು. ಆ ಮುದುಕ ತೆಪ್ಪಗಾದ.
ಬಸ್, ಮೆಟ್ರೋ, ರೈಲು, ಶಾಲೆ, ಕಾಲೇಜು, ಕಚೇರಿ, ಫೇಸ್‌ಬುಕ್… ಹೀಗೆ ಎಲ್ಲ ಕಡೆಯಲ್ಲೂ ನಿಮಗೆ ಇಂಥ ಅನುಭವಗಳು ಎದುರಾಗುತ್ತವೆ. ಅಪರಿಚಿತರನ್ನು ಬಿಡಿ, ಕೆಲವೊಮ್ಮೆ ನಮ್ಮ ಶಿಕ್ಷಕರೋ, ಸಹೋದ್ಯೋಗಿಯೋ ಹೀಗೆ ಅನುಚಿತವಾಗಿ ವರ್ತಿಸಿ ಬಿಡುತ್ತಾರೆ. ಫೇಸ್‌ಬುಕ್‌ನಲ್ಲಿ ನೀವಾಗಿಯೇ ರಿಕ್ವೆಸ್ಟ್ ಕಳಿಸಿದ ನೆಪಕ್ಕೆ, ಇನ್ಯಾರೋ ಮೆಸೇಜ್ ಮಾಡಿ ಕಾಟ ಕೊಡುತ್ತಾರೆ. ಅಂಥವರನ್ನು ಖಂಡಿತಾ ಸುಮ್ಮನೆ ಬಿಡಬಾರದು. ಅವರು ನಿಮ್ಮೊಂದಿಗೆ ನಡೆದುಕೊಳ್ಳುತ್ತಿರುವ ರೀತಿ, ಕಳಿಸುತ್ತಿರುವ ಮೆಸೇಜ್‌ಗಳು ಇಷ್ಟವಾಗದಿದ್ದರೆ ಅದನ್ನು ಅವರಿಗೆ ಸ್ಪಷ್ಟವಾಗಿ ಹೇಳಿ ಬಿಡಬೇಕು. ಅರ್ಥ ಮಾಡಿಕೊಂಡರೆ ಅವರಿಗೇ ಒಳ್ಳೆಯದು. ಇಲ್ಲವಾದರೆ, ಅವರ ವಿರುದ್ಧ ದೊಡ್ಡದಾಗಿಯೇ ದನಿ ಎತ್ತಿ. ಕಾನೂನಿನ ಮೊರೆ ಹೋಗಿ. ಆಗ ನಿಮ್ಮ ಸಹಾಯಕ್ಕೆ ಬರುವವರು ಇದ್ದೇ ಇರುತ್ತಾರೆ.
ಇಂಥ ವೇಳೆ…
* ಪ್ರತಿನಿತ್ಯ ಬಸ್, ಆಟೋ, ರೈಲಿನಲ್ಲಿ ಪಯಣಿಸುವವರು ನೀವಾದರೆ ಸೇಫ್ಟಿ ಪಿನ್ ಅಥವಾ ಪೆಪ್ಪರ್ ಸ್ಪ್ರೆ ಜೊತೆಗಿಟ್ಟುಕೊಳ್ಳಿ.
* ಫೇಸ್‌ಬುಕ್‌ನಲ್ಲಿ ಗೆಳೆಯರನ್ನು ಆರಿಸಿಕೊಳ್ಳುವಾಗ ಎಚ್ಚರವಿರಲಿ.
* ಫೇಸ್‌ಬುಕ್‌ನಲ್ಲಿ ಯಾರಾದರೂ ಅನುಚಿತವಾಗಿ ಮೆಸೇಜ್ ಮಾಡಿದರೆ, ಮುಲಾಜಿಲ್ಲದೆ ಬ್ಲಾಕ್ ಮಾಡಿ.
* ಖಾಸಗಿ ಫೋಟೊಗಳನ್ನು, ವಿಷಯಗಳನ್ನು ಆನ್‌ಲೈನ್ ಫ್ರೆಂಡ್ಸ್‌ಗಳ ಜೊತೆ ಹಂಚಿಕೊಳ್ಳುವಾಗ ಎಚ್ಚರ ಇರಲಿ.
-ಸೀಮಾ