ಮನೆಯಿಂದ ಹೊರಟ ಕೂಡಲೇ ಎಲ್ಲಿಲ್ಲದ ಆತಂಕ ನನ್ನನ್ನು ಸುತ್ತುವರಿಯುತ್ತದೆ. ಅದು ಯಾವುದೋ ಅಲ್ಲ, ಅದು ನಿನ್ನದೇ ಆತಂಕ. ತುಮಕೂರಿನ ಪ್ರಮುಖ ರಸ್ತೆಯ ಮೂಲೆ ಮೂಲೆಯಲ್ಲಿ ಅಂಗೈಯಲ್ಲಿ ಉಸಿರಿಟ್ಟುಕೊಂಡು ಓಡಾಡುವ ಪರಿಸ್ಥಿತಿಗೆ ಬಂದು ಬಿಟ್ಟಿದ್ದೇನೆ. ಇಡುವ ಪ್ರತಿ ಹೆಜ್ಜೆಗೂ ನಿನ್ನದೇ ಭಯ. ಮುಂದೆಂದೂ ನಿನ್ನ ಮುಖವನ್ನು ತುಂಬಿಕೊಳ್ಳಬಾರದೆಂದು ಪಣ ತೊಟ್ಟಿರುವ ನನ್ನ ಕಣ್ಣುಗಳು ನೀನು ಯಾವ ರಸ್ತೆಯಲ್ಲಾದರೂ, ಬೀದಿಯಲ್ಲಾದರೂ ಸಿಕ್ಕಿಬಿಟ್ಟರೆ ಎನ್ನುವ ಬೆಟ್ಟದಷ್ಟು ಆತಂಕವನ್ನು ತುಂಬಿಕೊಂಡಿವೆ.
ರಸ್ತೆಯಲ್ಲಿ ಓಡಾಡುವಾಗೆಲ್ಲಾ ಮೈಯೆಲ್ಲಾ ಕಣ್ಣಾಗುವ ನನ್ನ ಪರಿಯನ್ನು ವಿವರಿಸಲಾಗದು. ಒಂದು ವೇಳೆ ಸಿಕ್ಕರೆ ಎದೆಯ ಚಿಪ್ಪಿನಿಂದ ಉಮ್ಮಳಿಸುವ ಆ ಪ್ರೀತಿಯ ಹಸಿ ನೆನಪುಗಳಿಗೆ ಸಾಂತ್ವನ ಹೇಳುವಷ್ಟು ಶಕ್ತಿ ನನ್ನಲ್ಲಿಲ್ಲ. ನಿನ್ನ ನೆನಪುಗಳೆದುರು ನಾನು ನಿಶ್ಯಕ್ತ. ಆದ್ದರಿಂದ ನಿನ್ನ ದರ್ಶನ ಯೋಗ ಮುಂದೆಂದೂ ಆಗಬಾರದೆಂದು ಆ ದೇವರಲ್ಲೂ ಪ್ರಾರ್ಥಿಸಿರುವೆ.
ಅಂದು ನೀನಗಾಗಿ ಕಾಯುತ್ತಿದ್ದ ಮನಸ್ಸು, ಇಬ್ಬನಿಗೆ ಅರಳುವ ಹೂವಿನಂತೆ, ನಿನ್ನ ಮಾತಿಗೆ ಅರಳುತ್ತಿದ್ದ ಮುಖ ದಿಢೀರನೆ ಏಕೆ ಹೀಗಾಯಿತೋ ಎಂದು ಯೋಚಿಸುತ್ತಿದ್ದೇನೆ. ನಿನ್ನೊಂದಿಗೆ ಬಿ.ಎಚ್ ರಸ್ತೆಯಲ್ಲಿ ನಡೆದ ನೆನಪು. ಮುಂಗುರುಳ ಹಾದು ಪ್ರಕಾಶಿಸುತ್ತಿದ್ದ ಕಣ್ಣೋಟಕ್ಕೆ ಹುಳಿ ಜಾಸ್ತಿಯಾದದ್ದನ್ನೂ ಲೆಕ್ಕಿಸದೆ ಎರಡು ಪ್ಲೇಟ್ ಮಸಾಲೆ ಖಾಲಿಯಾದದ್ದು. ಇಬ್ಬರ ಸುದೀರ್ಘ ಸಂಭಾಷಣೆಗೆ ಸಾಕ್ಷಿಯಾದ ಬಸ್ ನಿಲ್ದಾಣ. ಕ್ಲಾಸಿನಲ್ಲಿ ನನ್ನೆಡೆಗೆ ತಿರುಗಲೆಂದೇ ಹಾರಿಸುತ್ತಿದ್ದ ಪಂಚಿಂಗ್ ಡೈಲಾಗ್‌ಗಳು. ಪಿರಿಯಡ್‌ಗೆ ಒಂದು ಸಾರಿ ಕಾರಿಡಾರ್‌ನಲ್ಲಿ ನಿಂತು ಕಿಟಿಕಿ ಕಂಡಿಯಿಂದ ನಿನ್ನ ಚಹರೆಯ ಗೆರೆಗಳನ್ನು ಎಣಿಸುತ್ತಾ ಎದೆಯೊಳಗೆ ಇಳಿಸಿಕೊಳ್ಳುವ ಪರಿ…
ಒಂದಾ, ಎರಡಾ? ಒಂದು ಯುಗಕ್ಕೆ ತೀರದಷ್ಟು ನೆನಪುಗಳು. ಅವುಗಳನ್ನೆಲ್ಲ ಎದೆಚಿಪ್ಪಿನೊಳಗೆ ಅವುಚಿಟ್ಟು ಪರದೆ ಎಳೆದಿದ್ದೇನೆ. ನಿನ್ನ ಕಂಡಾಗ ತೆರೆದುಕೊಳ್ಳುವ ಎದೆಯ ಪ್ರವಾಹವನ್ನು ತಡೆಯಲು ನನ್ನಲ್ಲಿ ತ್ರಾಣವಿಲ್ಲ. ಆದ ಕಾರಣ ನಿನ್ನಲ್ಲೊಂದು ವಿನಂತಿಯೇನೆಂದರೆ,
ನನ್ನ ಹೆಜ್ಜೆಗೆ ನಿನ್ನ ನೆರಳೂ ಸೋಕದಿರಲಿ…
-ಯೋಗೇಶ್ ಮಲ್ಲೂರು