ಈಗಾಗಲೇ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಸಂಬಂಧ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಕೌನ್ಸೆಲಿಂಗ್‌ನ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆಯಾಗಬೇಕಾಗಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಆ.5ರಂದೇ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು. ಇದನ್ನು ಸೆಪ್ಟಂಬರ್‌ಗೆ ಮುಂದೂಡಲಾಗಿದ್ದು, ಇನ್ನೂ ವೇಳಾಪಟ್ಟಿ ಪ್ರಕಟಿಸದಿರುವುದು ವಿದ್ಯಾರ್ಥಿಗಳಲ್ಲಿ ಆತಂಕಕ್ಕೂ ಕಾರಣವಾಗಿದೆ.
ಇದರ ಮಧ್ಯೆಯೇ ವಿದ್ಯಾರ್ಥಿಗಳು ಮತ್ತು ಪೋಷಕರು ದೊಡ್ಡದೊಂದು ಗೊಂದಲಕ್ಕೆ ಸಿಲುಕಿದ್ದಾರೆ. ಖಾಸಗಿ ಕಾಲೇಜುಗಳಿಗೆ ಪ್ರವೇಶಾತಿ ಸಂಬಂಧ ಕಾಮೆಡ್-ಕೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ಆ.18ರಿಂದಲೇ ದಾಖಲಾತಿ ಪರಿಶೀಲನೆ ಆರಂಭವಾಗಲಿದೆ. ಆ.26ರಿಂದಲೇ ಪ್ರವೇಶ ಪ್ರಕ್ರಿಯೆಯನ್ನೂ ಆರಂಭಿಸಲು ಅದು ನಿರ್ಧರಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಾವು ಮೊದಲಿಗೆ ಕಾಮೆಡ್-ಕೆ ಕೌನ್ಸೆಲಿಂಗ್‌ಗೆ ಹಾಜರಾಗಿ ಸೀಟು ಆಯ್ದುಕೊಳ್ಳಬೇಕೋ ಅಥವಾ ಸಿಇಟಿಯಡಿ ಸೀಟು ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
ಬಡ ವಿದ್ಯಾರ್ಥಿಗಳು ಕಾಮೆಡ್-ಕೆಯಡಿಯಲ್ಲಿ ಎಂಜಿನಿಯರಿಂಗ್ ಪ್ರವೇಶ ಪಡೆಯುವುದು ಕಷ್ಟಕರ. ಅಲ್ಲಿನ ಶುಲ್ಕವೂ ದುಬಾರಿ. ಅಲ್ಲದೆ, ಮಧ್ಯಮ ವರ್ಗದ ವಿದ್ಯಾರ್ಥಿಗಳೂ ಕಾಮೆಡ್-ಕೆಯಡಿ ಬರುವ ಕಾಲೇಜಿಗೆ ಸೇರಲು ಹಿಂದೆ ಮುಂದೆ ನೋಡುತ್ತಾರೆ. ಇದಕ್ಕೆ ಬದಲಾಗಿ ಮೊದಲೇ ಸಿಇಟಿಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಸೀಟು ಹಂಚಿಕೆ ಮಾಡಿದ್ದರೆ ಚೆನ್ನಾಗಿತ್ತು. ಒಂದು ವೇಳೆ ಇಲ್ಲಿ ಸೀಟು ಸಿಗದಿದ್ದರೆ, ಅನಂತರದಲ್ಲಿ ಕಾಮೆಡ್-ಕೆ ಕಾಲೇಜುಗಳಲ್ಲಿ ಸೀಟು ಪಡೆಯಲು ನೋಡಬಹುದಿತ್ತು. ಈಗ ಮೊದಲೇ ನಾವು ಕಾಮೆಡ್ ಕೆ ಕಾಲೇಜುಗಳಲ್ಲಿ ಸೀಟು ಆರಿಸಿಕೊಳ್ಳುವ ಸ್ಥಿತಿ ಎದುರಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು.
ವಿದ್ಯಾರ್ಥಿಗಳ ಈ ಬೇಸರಕ್ಕೆ ಅರ್ಥವೂ ಇದೆ. ಕಾಮೆಡ್-ಕೆನಲ್ಲಿ ಸೀಟು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆದು, ಮತ್ತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೌನ್ಸೆಲಿಂಗ್‌ಗೆ ಹಾಜರಾಗಿ ಅಲ್ಲಿ ಸೀಟು ಸಿಕ್ಕರೆ ಮೊದಲು ಆಯ್ಕೆ ಮಾಡಿಕೊಂಡಿದ್ದ ಕಾಲೇಜನ್ನು ಬಿಡಬೇಕಾಗುತ್ತದೆ. ಅಲ್ಲದೆ, ಪ್ರವೇಶಕ್ಕಾಗಿ ಶುಲ್ಕವನ್ನೂ ಕಟ್ಟಿರಬೇಕಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಡಿ ಸೀಟು ಪಡೆದ ಬಳಿಕ ಕಾಮೆಡ್-ಕೆಯಡಿಯ ಕಾಲೇಜಿನಲ್ಲಿ ಶುಲ್ಕ ವಾಪಸ್ ಕೊಡಿ ಎಂದು ಕೇಳುವುದು ಕಷ್ಟ. ಹೀಗಾಗಿ ಮುಂದೇನು ಮಾಡಬೇಕು ಎಂಬುದು ಗೊತ್ತಾಗದಂತಾಗಿದೆ.
ಈ ಹಿಂದೆ ಪ್ರತಿ ವರ್ಷವೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ, ಕಾಮೆಡ್-ಕೆಗಿಂತ ಮೊದಲು ಕೌನ್ಸೆಲಿಂಗ್ ಮುಗಿಸುತ್ತಿತ್ತು.
ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗುತ್ತಿತ್ತು. ಮೊದಲೇ ಹೇಳಿದ ಹಾಗೆ, ಒಂದು ವೇಳೆ ಇಲ್ಲಿ ಸೀಟು ಸಿಗದೇ ಹೋದರೆ ಅಥವಾ ತಾವು ಆಯ್ಕೆ ಮಾಡಿಕೊಳ್ಳಲು ಇಚ್ಚಿಸುವ ಕಾಲೇಜಿನಲ್ಲಿ ಸೀಟು ಸಿಗದಿದ್ದರೆ ಕಾಮೆಡ್-ಕೆ ಮೂಲಕ ಪ್ರವೇಶ ಪಡೆಯುತ್ತಿದ್ದರು. ಈಗ ಮೊದಲ ಆಯ್ಕೆಯೇ ಕಾಮೆಡ್-ಕೆ ಆದರೆ ಕಷ್ಟಕರ ಎಂಬುದು ವಿದ್ಯಾರ್ಥಿಗಳ ನೋವು.
ಈಗ ರಾಜ್ಯ ಸರಕಾರ ಮಾಡಬೇಕಾಗಿರುವುದು ಇಷ್ಟೇ. ಕಾಮೆಡ್-ಕೆ ಪ್ರಕ್ರಿಯೆಗಿಂತ ಮೊದಲೇ ಇಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಾಯಬೇಕು. ಇಲ್ಲದೆ ಹೋದರೆ, ದುಬಾರಿ ಶುಲ್ಕ ತೆತ್ತು ಕಾಲೇಜಿಗೆ ಸೇರುವ ಅನಿವಾರ್ಯತೆ ಉಂಟಾಗುವ ಸಾಧ್ಯತೆಯೇ ಹೆಚ್ಚು.