Advertisement
ದಿಲ್ಲಿಯಲ್ಲಿ ನಡೆದ ಬಹುಚರ್ಚಿತ ಶ್ರದ್ಧಾ ಕಗ್ಗೊಲೆಯ ಮಾದರಿಯ ಘಟನೆ ಮಧ್ಯಪ್ರದೇಶದಲ್ಲೂ ನಡೆದಿದೆ. ದೇಶಾದ್ಯಂತ ಹೆಚ್ಚುತ್ತಿರುವ ಇಂತಹ ಘಟನೆಗಳು ಹೆಣ್ಣು ಹೆತ್ತವರನ್ನು ಚಿಂತೆಗೀಡುವಂತೆ ಮಾಡಿದೆ. ದಿಲ್ಲಿಯ ಬೀಭತ್ಸ ಘಟನೆಯ ಕಾರಣಗಳು ಎಳೆಎಳೆಯಾಗಿ ಸಾರ್ವಜನಿಕವಾಗುತ್ತಿದ್ದಂತೆ ಲವ್ ಜೆಹಾದ್ ಚರ್ಚೆ ಕಾವು ಪಡೆದುಕೊಂಡಿದೆ. ಈ ಚರ್ಚೆಯನ್ನು ಬಹು ಆಯಾಮಿ ಮತ್ತು ಹೆಚ್ಚು ವಿಸ್ತೃತವಾಗಿಸುವ ಅಗತ್ಯ ಇದೆ. ನಾಗರಿಕ ಸಮಾಜ ಈ ಕುರಿತು ಚಿಂತನ-ಮಂಥನ ನಡೆಸಲಿ. ಇಂದಿನ ಯುವ ಜನಾಂಗದ ಸ್ವೇಚ್ಛಾಚಾರ ಮತ್ತು ನಮ್ಮ ಸಮಾಜದಲ್ಲಿ ಇದೀಗ ಸರ್ವೇಸಾಮಾನ್ಯವಾಗುತ್ತಿರುವ ಲಿವ್ ಇನ್ ರಿಲೇಶನ್‌ಶಿಪ್ ನ್ಯೂನತೆಗಳ ಕುರಿತು ಅರಿವು ಮೂಡಿಸುವ ಅಗತ್ಯ ಖಂಡಿತವಾಗಿಯೂ ಇದೆ.
Related Articles
Advertisement
ಸಂಸ್ಕಾರವಿಲ್ಲದ, ಆರ್ಥಿಕವಾಗಿ ಸ್ವತಂತ್ರ ಸುಶಿಕ್ಷಿತ ಯುವಕ-ಯುವತಿಯರು ತಾರುಣ್ಯದ ಹುಮ್ಮಸ್ಸಿನಲ್ಲಿ ವಿವೇಚನಾರಹಿತ ನಿರ್ಧಾರ ಕೈಗೊಳ್ಳುತ್ತಾರೆ. ಕೆಲವೊಮ್ಮೆ ಮನೆಯಿಂದಲೂ ದೂರವಾಗುತ್ತಾರೆ. ಪೋಷಕರ, ಬಂಧುಗಳ ಆಸರೆ, ಅಕ್ಕರೆ, ಪ್ರೀತಿಯಿಂದ ವಂಚಿತರಾಗುತ್ತಾರೆ. ಮನೆಯಿಂದ ದೂರವಾದ ಯುವತಿಯೋರ್ವಳಿಗೆ ಒಂದೆಡೆ ಕಾಡುವ ಖಾಲಿತನ, ಇನ್ನೊಂದೆಡೆ ನಂಬಿ ಬಂದ ಪ್ರೀತಿಪಾತ್ರನ ತಿರಸ್ಕಾರ ಬದುಕು ಭಾರವಾಗಿಸಿದರೆ ಆಶ್ಚರ್ಯವಿಲ್ಲ. ಅಸಹಾಯಕ ಹೆಣ್ಣಿನ ಶೋಷಣೆ ಸುಲಭವೆಂದು ತಿಳಿಯುವ ಮತಿಗೇಡಿ ಪುರುಷರೂ ಕಡಿಮೆ ಏನಿಲ್ಲ. ಧಾರ್ಮಿಕ ಲೇಪ ಸಿಕ್ಕಾಗ ಇದು ದಳ್ಳುರಿಯಾಗಿ ಸಮಾಜವನ್ನೇ ಕಾಡುತ್ತದೆ.
ಕೌಟುಂಬಿಕ ಪ್ರೀತಿಗೆ ಪ್ರಾಮುಖ್ಯ ಸಿಗಲಿ. ಮಕ್ಕಳಿಗೆ ಪ್ರೀತಿ-ವಾತ್ಸಲ್ಯದೊಂದಿಗಿನ ಸಂಸ್ಕಾರದ ಅಮೃತ ಸಿಂಚನ ದೊರೆಯಲಿ. ಬಂಧುತ್ವ-ಸಹೋದರತ್ವ, ಹಿರಿ-ಕಿರಿಯರ ಆದರದ ಉತ್ತಮ ಸಂಸ್ಕಾರ ಸಿಗಲಿ. ಪೋಷಕರೇ, ಮಕ್ಕಳಿಗೂ ಒಂದಷ್ಟು ಸಮಯ ಕೊಡಿ. ನೈತಿಕತೆಯಿಲ್ಲದ ನಮ್ಮ ಸಾಮಾಜಿಕ ಬದುಕು ಬರಡಾದೀತು. ನೌಕರಿ ಸಿಕ್ಕೊಡನೆ, ಗಳಿಕೆ ಆರಂಭಿಸಿದೊಡನೆ ತನ್ನನ್ನು ತಾನು ಸರ್ವತಂತ್ರ-ಸ್ವತಂತ್ರ ಎಂದು ತಿಳಿಯುವ ಸಂಕುಚಿತ ಮನೋಭಾವದ ಬೀಜವನ್ನು ಪೋಷಕರೇ ಬಿತ್ತುವುದು ಸರಿಯಲ್ಲ. ಚೆನ್ನಾಗಿ ಹಣ ಸಂಪಾದಿಸು ಎಂದು ಪದೇಪದೆ ಮಕ್ಕಳನ್ನು ಪ್ರಚೋದಿಸದಿರಿ. ಪಾಶ್ಚಾತ್ಯ ಜಗತ್ತು ನಮ್ಮ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಮತ್ತು ಆದರ್ಶ ಕೌಟುಂಬಿಕ ಬದುಕಿನ ಸೆಳೆತಕ್ಕೊಳಗಾಗುತ್ತಿರುವ ಹೊತ್ತಿನಲ್ಲಿ ನಮ್ಮ ಯುವ ಸಮುದಾಯ ಹಾದಿ ತಪ್ಪುತ್ತಿರುವುದು ವಿಷಾದನೀಯ.
ನಮ್ಮ ಕೌಟುಂಬಿಕ ವ್ಯವಸ್ಥೆ ಜಾಗತೀಕರಣದ ವೇಗದಲ್ಲಿ ಕೊಚ್ಚಿಕೊಂಡು ಹೋಗದಂತೆ ರಕ್ಷಿಸಿಕೊಳ್ಳಬೇಕಾದ ಆವಶ್ಯಕತೆ ಇದೆ. ಇದನ್ನು ಯಾವ ಕಾನೂನೂ, ಸರಕಾರವೂ ಮಾಡಲಾಗದು. ಉತ್ತಮ ಸಂಸ್ಕಾರ-ಸಂಸ್ಕೃತಿಯ ವಾತಾವರಣ ಪ್ರತೀ ಮನೆಯಲ್ಲಿ ದೊರೆಯುವಂತಾಗಬೇಕು. ಮಕ್ಕಳ ಮನಸ್ಸು ತುಂಬಾ ಕೋಮಲ. ಹಿರಿಯರ ನಡೆ ಕಿರಿಯರಿಗೆ ಆದರ್ಶವಾಗಿರುವಂತೆ ಎಚ್ಚರ ವಹಿಸಬೇಕಾಗಿದೆ. ಬಾಲ್ಯ ಕಳೆದು ಮಕ್ಕಳು ಜವ್ವನಿಗರಾಗುತ್ತಿರುವುದನ್ನು ಗಮನಿಸಲಾಗದಷ್ಟರ ಮಟ್ಟಿಗೆ ಪೋಷಕರು ತಮ್ಮ ಚಟುವಟಿಕೆಗಳಲ್ಲಿ ವ್ಯಸ್ತರಾಗಿರುವುದು ಸರಿಯಲ್ಲ.
-ಬಿ. ಚಂದ್ರಶೇಖರ ನಾವಡ