ಸಿಡ್ನಿ: ಕೋವಿಡ್ 19 ಸೋಂಕು ಪ್ರಕರಣ ದಾಖಲೆ ಪ್ರಮಾಣದಲ್ಲಿ ಹರಡುತ್ತಿದ್ದು, ಹಾಗೂ ಕೋವಿಡ್ ರೂಪಾಂತರಿ ಡೆಲ್ಟಾ ಸೋಂಕು ನಿಯಂತ್ರಣ ಮೀರಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಅತೀ ದೊಡ್ಡ ನಗರವಾದ ಸಿಡ್ನಿಯಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ(ಜುಲೈ 09) ತಿಳಿಸಿದ್ದಾರೆ.
ಇದನ್ನೂ ವೀಕ್ಷಿಸಿ:ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಆತಂಕ ಸೃಷ್ಟಿಸಿದ ನಾಗರಹಾವು!
ನಗರದಲ್ಲಿ ಕಳೆದ 24ಗಂಟೆಗಳಲ್ಲಿ 44 ನೂತನ ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ಅನಗತ್ಯವಾಗಿ ಯಾರೂ ಕೂಡಾ ಮನೆಯಿಂದ ಹೊರಗೆ ಬರಬೇಡಿ ಎಂದು ಐವತ್ತು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಿಡ್ನಿಯ ನಿವಾಸಿಗಳಲ್ಲಿ ಪ್ರಧಾನಮಂತ್ರಿ ಗ್ಲಾಡಿಸ್ ಬೆರೆಜಿಕ್ಲಿಯನ್ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.
ಸಿಡ್ನಿಯಲ್ಲಿ ಕಳೆದ ಮೂರು ವಾರಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ. ಬಹುತೇಕ ಜನರು ಲಸಿಕೆ ಪಡೆಯದಿರುವ ಪರಿಣಾಮ ಸೋಂಕು ಪ್ರಕರಣ ದಾಖಲೆ ಸಂಖ್ಯೆಯಲ್ಲಿ ವರದಿಯಾಗುತ್ತಿದೆ ಎಂದು ತಿಳಿಸಿದೆ. ಮನೆಯಲ್ಲಿಯೇ ಇರಿ ಎಂಬ ನಿಯಮಗಳನ್ನು ಪಾಲಿಸದೇ ಇದ್ದ ಕಾರಣ ಸುರಕ್ಷತೆಗೆ ಹೆಚ್ಚಿನ ಅಪಾಯ ತಂದೊಡ್ಡಿದೆ ಎಂದು ಪ್ರಧಾನಿ ಗ್ಲಾಡಿಸ್ ತಿಳಿಸಿದ್ದಾರೆ.
ಜೂನ್ ಮಧ್ಯಭಾಗದಲ್ಲಿ ಸಿಡ್ನಿಯಲ್ಲಿ 439 ನೂತನ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿತ್ತು. ದೇಶದ ಜನಸಂಖ್ಯೆಯ ಶೇ.9ರಷ್ಟು ಮಾತ್ರ ಲಸಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.