ಕಾಬೂಲ್ : ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಅಮೆರಿಕದ ಮಹಿಳೆಯೊಬ್ಬಳು ತಾಲಿಬಾನ್ ಅಟ್ಟಹಾಸಕ್ಕೆ ಹೆದರಿ ಅಮೆರಿಕಾದ ಸರ್ಕಾರದ ಸಹಾಯವನ್ನು ಯಾಚಿಸಿದ್ದಾಳೆಂದು ಅಲ್ಲಿನ ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾಗ ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲುತ್ತಿರುವ ದೃಶ್ಯವನ್ನು ಕಂಡು ಬೆದರಿದ ಮಹಿಳೆ ಬೈಡನ್ ಸರ್ಕಾರದ ಸಹಾಯವನನು ಕೇಳಿದ್ದು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಉಪಟಳವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮನ್ನು ರಕ್ಷಿಸಿ ಎಂದು ಕೇಳಿದ್ದಾಳೆ.
ಭದ್ರತೆ ದೃಷ್ಟಿಯಿಂದ ತನ್ನ ಗುರುತನ್ನು ಗೌಪ್ಯವಾಗಿಟ್ಟ ಮಹಿಳೆ, ತನ್ನ ಸ್ಥಳ ಮತ್ತು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರ 20 ಚೆಕ್ ಪೋಸ್ಟ್ ಗಳಿವೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಈ ಬಾರಿಯ ಐಪಿಎಲ್ ಗೆ ಜೋಸ್ ಬಟ್ಲರ್ ಗೈರು: ರಾಯಲ್ಸ್ ಗೆ ಗ್ಲೆನ್ ಫಿಲಿಪ್ ಸೇರ್ಪಡೆ
ಕಾಬೂಲ್ ವಿಮಾನ ನಿಲ್ದಾಣದ ಬಳಿ ಆಕೆಯ ಪಕ್ಕದಲ್ಲೇ ಇದ್ದ ಒಬ್ಬ ವ್ಯಕ್ತಿಯನ್ನು ತಾಲಿಬಾನ್ ಉಗ್ರರು ಹೆಡ್ ಶಾಟ್ ಮಾಡಿ ಸಾರ್ವಜನಿಕವಾಗಿ ಕೊಂದದ್ದನ್ನು ನೋಡಿ ಅಮೆರಿಕಾ ಮೂಲದ ಮಹಿಳೆ ಹೆದರಿದ್ದಾರೆ. ಅಮೆರಿಕಾ ಸರ್ಕಾರದ ರಕ್ಷಣೆಗೆ ಮೊರೆ ಹೋಗಿರುವುದು ತಾಲಿಬಾನ್ ಉಗ್ರರ ಹಿಂಸಾಚಾರ ತಾರಕಕ್ಕೇರಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನುತ್ತದೆ ವರದಿ.
ವೆಸ್ಟ್ ವರ್ಜೀನಿಯಾ ಪ್ರತಿನಿಧಿ ಕರೋಲ್ ಮಿಲ್ಲರ್ ಅವರ ಕಚೇರಿಗೆ ಕಳುಹಿಸಿದ ಆಡಿಯೋ ರೆಕಾರ್ಡಿಂಗ್ ನಲ್ಲಿ, “ನನಗೆ ನನ್ನ ಕುಟುಂಬವನ್ನು, ನನ್ನ ಮಕ್ಕಳನ್ನು ಮತ್ತೆ ಕಾಣುತ್ತೇನೆ ಎನ್ನುವ ಭರವಸೆ ಇಲ್ಲ. ಜೀವ ಭಯ ಬಿಟ್ಟು ಉಸಿರಾಡುತ್ತಿದ್ದೇನೆ. ತಾಲಿಬಾನ್ ಉಗ್ರರೇ ತುಂಬಿರುವ ವಾಹನಗಳು ರಸ್ತೆ ತುಂಬೆಲ್ಲಾ ಹಾದು ಹೋಗುತ್ತಿರುವಾಗ ಈ ಕ್ಷಣವೋ, ಮರು ಕ್ಷಣವೋ ನಮ್ಮನ್ನು ಸಾರ್ವಜನಿಕವಾಗಿ ಕೊಂದು ಹೋಗುತ್ತಾರೆ ಎಂಬ ಭಯವಾಗುತ್ತಿದೆ” ಎಂದು ಹೇಳಿರುವುದನ್ನು, ಕರೋಲ್ ಮಿಲ್ಲರ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾಬೂಲ್ ನಿಂದ ಹಲವು ಮೂಲ ಅಮೆರಿಕನ್ನರಿಂದ ನಾವು ಈ ರೀತಿಯ ಆಡಿಯೋವನ್ನು ಸ್ವೀಕರಿಸಿದ್ದೇವೆ. ಪ್ರತಿ ಬಾರಿ ಅವಳು ವಿಮಾನ ನಿಲ್ದಾಣವನ್ನು ತಲುಪಲು ಪ್ರಯತ್ನಿಸಿದಾಗ ಅವಳ ಮೇಲೆ ದಾಳಿ ಮಾಡಲಾಯಿತು. ತನಗೆ ಅಪಾಯದ ಹೊರತಾಗಿಯೂ, ನಾವು ಇದನ್ನು ಹಂಚಿಕೊಳ್ಳಬೇಕೆಂದು ಅವಳು ಬಯಸಿರುವುದು ಆಕೆಯ ಧೈರ್ಯವನ್ನು ತೋರಿಸುತ್ತದೆ. ತಡ ಮಾಡದೇ, ನಾವು ಅಮೆರಿಕನ್ನರು ಮತ್ತು ನಮ್ಮ ಮಿತ್ರರಾಷ್ಟ್ರಗಳ ಸುರಕ್ಷತೆಯತ್ತ ಗಮನ ನೀಡಬೇಕಾಗಿದೆ ಎಂದು ಮಿಲ್ಲರ್ ಬರೆದುಕೊಂಡಿದ್ದಾರೆ.
ಇನ್ನು, ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಭಯಾನಕವಾಗಿದೆ, ತಾಲಿಬಾನ್ ಉಗ್ರರು ಮನೆ ಮನೆಗೆ ಹೋಗಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಹಿಳೆ, ಯುಎಸ್ ಮಿಲಿಟರಿ ಅಥವಾ ನ್ಯಾಟೋ ಜೊತೆ ಕೆಲಸ ಮಾಡಿದ ಜನರ ಮೇಲೆ ಮಾರಾಣಾಂತಿಕ ದಾಳಿ ಮಾಡುತ್ತಿದ್ದಾರೆ. ತಾಲಿಬಾನ್ ನಿಂದ ಯಾವಾಗ ಪ್ರಾಣ ಕಳೆದುಕೊಳ್ಳುತ್ತೇನೋ ಎಂದು ತಿಳಿಯದು. ಅಷ್ಟು ಕ್ರೂರವಾಗಿ ತಾಲಿಬಾನ್ ನಡೆದುಕೊಳ್ಳುತ್ತಿದೆ ಎಂದು ಆಕೆ ತನ್ನ ಆಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆ ಹೆಸರು ಹೇಳಲು ಬಯಸದ ಮಹಿಳೆಯ ಬ್ಇಟನ್ ಲ್ಲಿ ವಾಸ್ತವ್ಯದಲ್ಲಿರುವ ಸಹೋದರ, ಮಾಜಿ ಮಿಲಿಟರಿ ಟ್ರಾನ್ಸ್ ಲೇಟರ್ ಹಾಗೂ ಕಾಂಟ್ರಾಕ್ಟರ್, ಅಫ್ಗಾನಿಸ್ತಾನದಲ್ಲಿ ತನ್ನ ಸಹೋದ್ಯೋಗಿಯಾಗಿದ್ದ ಇಬ್ಬರು ತಾಲಿಬಾನ್ ಉಗ್ರರ ಮೃಗೀಯ ದಾಳಿಗೆ ಬಲಿಯಾಗಿದ್ದಾರೆ. ಕಾಬೂಲ್ ನನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ತನ್ನದೇ ಸರ್ವಸ್ವ ಎಂಬಂತೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯ ಪತಿ, ತಮ್ಮ ಮಕ್ಕಳೊಂದಿಗೆ ಅಮೆರಿಕದ ವರ್ಜೀನಿಯಾದಲ್ಲಿ ಸುರಕ್ಷಿತವಾಗಿದ್ದಾರೆ, ಆದರೇ, ಯಾವುದೇ ಸಂದರ್ಭದಲ್ಲಿ ಸಂಪರ್ಕವನ್ನು ಕಡಿದು ಹಾಕಬಹುದು. ಮತ್ತು ಎಂಥಹ ಹೇಯ ಕೃತ್ಯ ಎಸಗುವುದಕ್ಕೂ ಹಿಂಜರಿಯುವವರಲ್ಲ. ನಾವು ಭಯದಲ್ಲಿಯೇ ಇಲ್ಲಿದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಅಮೆರಿಕಾದ ರಾಯಭಾರಿ ಕಚೇರಿ, ಮೂಲ ಅಮೆರಿಕನ್ನರಿಗೆ ರಕ್ಷಣಾ ಮುನ್ನೆಚ್ಚರಿಕೆಯನ್ನು ನೀಡಿದ್ದು, ಯಾವುದೇ ಕಾರಣಕ್ಕೂ ಕಾಬೂಲ್ ವಿಮಾನ ನಿಲ್ದಾಣದತ್ತ ತೆರಳಬೇಡಿ ಎಂದು ಎಚ್ಚರಿಕೆ ನೀಡಿದೆ. ಇನ್ನು, ಈ ಬಗ್ಗೆ ಸುದ್ದಿ ಸಂಸ್ಥೆ ಪಾಂಟಾಗಾನ್ ವರಿದಿಗಾರರಿಗೆ ಪ್ರತಿಕ್ರಿಯಿಸಿದ ಯುಎಸ್ ಆರ್ಮಿ ಜನರೆಲ್ ಹ್ಯಾಂಕ್ ಟೇಲರ್, ಈಗಾಗಲೇ ಯು ಎಸ್ ತಾಲಿಬಾನ್ ಉಗ್ರರ ಭಯದಲ್ಲಿದ್ದ ಸುಮಾರು 2500 ಮಂದಿ ಅಮೆರಿಕನ್ನರನ್ನು ಒಳಗೊಂಡು 17,000 ಮಂದಿಯನ್ನು ರಕ್ಷಿಸಿದ್ದೇವೆ ಎಂದಿದ್ದಾರೆ.
ಇನ್ನೂ ಅಂದಾಜು 15,000 ಮಂದಿಯಷ್ಟು ಅಮೆರಿಕಾ ಮೂಲದವರು ಅಫ್ಗಾನಿಸ್ತಾನದಲ್ಲಿದ್ದಾರೆ ಎಂದು ಯುಎಸ್ ನ ಅಧಿಕೃತ ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಈ ಬಾರಿಯ ಐಪಿಎಲ್ ಗೆ ಜೋಸ್ ಬಟ್ಲರ್ ಗೈರು: ರಾಯಲ್ಸ್ ಗೆ ಗ್ಲೆನ್ ಫಿಲಿಪ್ ಸೇರ್ಪಡೆ