ಉಡುಪಿ: ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದಿಂದ ನೀಡುವ ನೇರ ಸಾಲ ಯೋಜನೆಗೆ ಅವಿಭಜಿತ ದ.ಕ. ಜಿಲ್ಲೆಯ ಜನರು ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ನಿಗಮ ಈ ಯೋಜನೆಯಡಿಯಲ್ಲಿ ಪ್ರಗತಿ ಸಂಪೂರ್ಣವಾಗಿ ಕುಠಿತವಾಗಿದೆ.
ಜಿಲ್ಲೆಯಲ್ಲಿ ಗುರಿ ನಿಗದಿಯಾಗಿಲ್ಲ
ಕೇಂದ್ರ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಯೋಜನೆಯನ್ನು ರಾಜ್ಯ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮ ಜಾರಿಗೊಳಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನ ಇನ್ನ್ನೂ ಗುರಿ ನಿಗದಿಯಾಗಿಲ್ಲ. 2018 -19ರಲ್ಲಿ 3 ಭೌತಿಕ ಮತ್ತು 16 ಲ.ರೂ. ಆರ್ಥಿಕ ಗುರಿ ನಿಗದಿ ಮಾಡಲಾಗಿತ್ತು. ಆದರೆ ಯಾರೂ ಅರ್ಜಿ ಹಾಕಿಲ್ಲ. 2017-18ರಲ್ಲಿ 2 ಭೌತಿಕ ಮತ್ತು 14 ಲ.ರೂ ಆರ್ಥಿಕ ಗುರಿ ನಿಗದಿ ಮಾಡಲಾಗಿತ್ತು. ಒಬ್ಬರು ಮಾತ್ರ ಆಯ್ಕೆಯಾಗಿದ್ದರು.
ದ.ಕ. ಜಿಲ್ಲೆಯಲ್ಲಿ ಶೇ.70 ಮರುಪಾವತಿ
ದ.ಕ. ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ ನೇರ ಸಾಲ ಯೋಜನೆಯ ಪ್ರಾರಂಭಿಸಲಾಗಿದ್ದು, 2016ರ ವರೆಗೆ ಒಟ್ಟು 23 ಫಲಾನುಭವಿಗಳಿಗೆ ಸಾಲವನ್ನು ನೀಡಲಾಗಿದೆ. ಅವರಲ್ಲಿ ಶೇ. 70 ಫಲಾನುಭವಿಗಳು ಸಾಲದ ಮೊತ್ತವನ್ನು ಪಾವತಿಸಿದ್ದು, ಶೇ. 30ರಷ್ಟು ಫಲಾನುಭವಿಗಳು ಸಾಲದ ಮೊತ್ತ ಇನ್ನೂ ಕಟ್ಟುತ್ತಿದ್ದಾರೆ. 2018 ನೇ ಸಾಲಿನಲ್ಲಿ ಈ ಯೋಜನೆಯಡಿ ಮೂರು ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆದಿದ್ದಾರೆ.
ಕಡಿಮೆ ಬಡ್ಡಿಯಲ್ಲಿ ಸಾಲ
ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಜೈನ್, ಸಿಖ್ ಸಮುದಾಯದವರು ಈ ಯೋಜನೆಯಡಿ 10 ಲ.ರೂ. ವರೆಗೆ ಸಾಲ ಪಡೆಯಬಹುದು. ಅದರಲ್ಲಿ ಶೇ. 90ರಷ್ಟು ಯೋಜನೆಯ ಸಾಲದ ಮೊತ್ತವನ್ನು ಕೇಂದ್ರ ಅಲ್ಪಸಂಖ್ಯಾಕರ ಅಭಿವೃದ್ಧಿ ಇಲಾಖೆ ನೀಡಲಿದೆ. ಉಳಿದ ಶೇ. 5ರಷ್ಟು ಮೊತ್ತ ಜಿಲ್ಲಾ ನಿಗಮ ಹಾಗೂ ಶೇ. 5ರಷ್ಟು ಫಲಾನುಭವಿಗಳು ಭರಿಸಬೇಕಾಗಿದೆ.
ಭದ್ರತೆಗೆ ಹೆಚ್ಚಿನ ಆದ್ಯತೆ
ನೇರ ಸಾಲ ಯೋಜನೆಯಡಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಯೋಜನೆ ಯಡಿ ಗುರಿ ಸಾಧಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗು ತ್ತಿದೆ. ಪ್ರಸಕ್ತ ಸಾಲಿನಲ್ಲಿ ಯೋಜನೆ ಗುರಿ ಇನ್ನೂ ನಿಗದಿಯಾಗಿಲ್ಲ. -ಮುಹಮ್ಮದ್ ಶಾಫ್ವಾನ್, ಅಲ್ಪಸಂಖ್ಯಾಕ ನಿಗಮದ ವ್ಯವಸ್ಥಾಪಕ, ದ.ಕ. ಮತ್ತು ಉಡುಪಿ ಜಿಲ್ಲೆ.