Advertisement

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಹಿಂಜರಿಯಬೇಡಿ: ಅಂಬಲಗಿ

06:34 PM Nov 24, 2022 | Nagendra Trasi |

ಇಂಡಿ: ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಹಿಂಜರಿಯಲು ಹಲವು ತಪ್ಪು ಕಲ್ಪನೆಗಳಿವೆ. ವೈದ್ಯರ ಬಳಿ ಸಮರ್ಪಕ ಸಲಹೆ ಪಡೆದು ಮುಂದುವರಿಯಬೇಕೆಂದು ತಾಲೂಕು ಆರೋಗ್ಯ ಶಿಕ್ಷಣಾ ಧಿಕಾರಿ ಸುನಂದಾ ಅಂಬಲಗಿ ಹೇಳಿದರು.

Advertisement

ಹಲಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರದಲ್ಲಿ ನಡೆದ ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಲ್ಲಿ ಲೈಂಗಿಕ ಶಕ್ತಿ ಕುಂದುತ್ತದೆ ಎಂಬ ಊಹಾತ್ಮಕ ಕಲ್ಪನೆಗಳಿಂದ, ಅನಾರೋಗ್ಯಕ್ಕೆ ಒಳಗಾಗುವುದು, ಸೇರಿದಂತೆ ಸಾಮಾಜಿಕ ಅಪಮಾನವು ಇದಕ್ಕೆ ಕಾರಣವೂ ಕೂಡ ಆಗಿದೆ. ಇನ್ನು ಅತಿಯಾದ ನೋವು, ಹೊಲಿಗೆ, ವಿಶ್ರಾಂತಿಯ ತಪ್ಪು ಕಲ್ಪನೆಗಳಿಂದಾಗಿ ಪುರುಷರು ಈ ಶಸ್ತ್ರ ಚಿಕಿತ್ಸೆಗೆ ಇಚ್ಛೆ ವ್ಯಕ್ತಪಡಿಸುತ್ತಿಲ್ಲ. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಜುಗರ ಬೇಡ. ಒಂದು ಸಂತಾನ ಜನನವಾಗಲು ಮಹಿಳೆ ಮತ್ತು ಪುರುಷ
ಇಬ್ಬರ ಪಾತ್ರವು ಮುಖ್ಯವಾಗಿರುತ್ತದೆ ಎಂದರು.

ಮಹಿಳೆಯರಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗುತ್ತಿದ್ದಂತೆಯೇ, ತಾಲೂಕಿನಾದ್ಯಂತ ಪುರುಷರ ಯೋಜನೆಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುರುಷರು ಸಂತಾನ ಶಕ್ತಿ ಹರಣ ಚಿಕಿತ್ಸೆಯಿಂದ ದೂರ ಉಳಿದಿದ್ದು, ತಮ್ಮ ಪತ್ನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು, ಇಲ್ಲವೆ ಇತರೆ ತಾತ್ಕಾಲಿಕ ಕುಟುಂಬ ಯೋಜನೆಗೆ ಪುರುಷರು ಆಸಕ್ತಿ ತೋರಿಸುತ್ತಿದ್ದಾರೆ ಎಂದರು.

ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಅದು ಮಹಿಳೆಗೆ ಸೀಮಿತ ಎನ್ನುವ ಭಾವನೆ ಪುರುಷ ಪ್ರಧಾನ ವ್ಯವಸ್ಥೆಯು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದೇ ಕಾರಣಕ್ಕೆ ತಾಲೂಕಿನಲ್ಲಿ ನಡೆಯುವ ಶೇ. 100 ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಪ್ರಕರಣಗಳಲ್ಲಿ ಪುರುಷರ ಪಾಲು 000.1 ಮಾತ್ರ ಕಂಡು ಬಂದಿದೆ.

Advertisement

ಜನಸಂಖ್ಯೆ ಸ್ಫೋಟ ತಡೆಯುವ ಸಲುವಾಗಿ ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಪಡುತ್ತಿರುವ ಪುರುಷರ ಸಂಖ್ಯೆ ಕಡಿಮೆಯಾಗುತ್ತಿದೆ. ಪುರುಷರು ಶಸ್ತ್ರಚಿಕಿತ್ಸೆ ಮಾಡಿಕೊಂಡರೆ ಲೈಂಗಿಕ ಹಾಗೂ ದುಡಿಯುವ ಶಕ್ತಿ ಕುಂದುತ್ತದೆ ಎಂಬ ಅಪನಂಬಿಕೆಗೆ ಕಟ್ಟುಬಿದ್ದಿರುವ ಪುರುಷರು ಹಿಂದೇಟು ಹಾಕುತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದರೆ ಪುರುಷರು ದೂರ ಓಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಪಡುತ್ತಾರೆ. ಮಹಿಳೆಯರಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ಆದರೆ ಪುರುಷರು ಇನ್ನು ಮೂಢನಂಬಿಕೆಗೆ ಒಳಪಟ್ಟಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದರಾಮ ಕೊಟ್ಟಲಿ ವಹಿಸಿದ್ದರು. ಸಾವಿತ್ರಿ ವಾಲೀಕಾರ  ಸೇರಿದಂತೆ ಗ್ರಾಮಸ್ಥರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ಮಹಿಳೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next