Advertisement

ಬೆಳಗಿಸಿದ್ದೇವೆಂಬ ಅಹಂ ಬೇಡ…ಅಂಧಕಾರದ ಭೀತಿ ಬೇಡ

04:18 PM Oct 26, 2022 | Team Udayavani |

ಕತ್ತಲನ್ನು ಓಡಿಸಿದ್ದೇನೆ ಎಂಬ ಅಹಂ ಸೂರ್ಯನಿಗೂ ಇಲ್ಲ. ಸೂರ್ಯನನ್ನು ಸೋಲಿಸಿದ್ದೇನೆ ಎಂಬ ಅಹಂಕಾರ ಅಂಧಕಾರಕ್ಕೂ ಇಲ್ಲ. ಕತ್ತಲು ಬಂದೀತು, ಬೆಳಗೂ ಬಂದೀತು, ಅದು ಕಾಲಧರ್ಮ. ನಾವು ಹುಲುಮನುಷ್ಯರು. ನಮ್ಮ ಕೈಲಾದ ಮಟ್ಟಿಗೆ ಮನೆ, ಮನ, ಊರು, ಕೇರಿ, ಭೂಮಿ ಬೆಳಗುತ್ತ, ಮಾಗುತ್ತ ಹೋಗೋಣ. ಆಗಲೇ ದೀಪಗಳ ಹಬ್ಬಕ್ಕೊಂದು ಅರ್ಥ.

Advertisement

ಕೆಲವರಿಗೆ ವರವಾಗಿ, ಕೆಲವರಿಗೆ ಬರವಾಗಿ ಅರೆಬರೆ ಬಿದ್ದ ಮಳೆ ಮಾಯವಾಗಿದೆ. ಮಳೆ ಬಿದ್ದಲ್ಲಿ ಬೆಳೆ ಚೆನ್ನಾಗಿದೆ. ಮಾಗಿದ ತೆನೆಯನ್ನು ಮನೆಗೆ ಬರಮಾಡಿಕೊಳ್ಳುವ ಕಾಲ. ಬರಗಾಲದವರ ಬದುಕು ಎಣ್ಣೆಯಿಲ್ಲದ ದೀಪವಾಗಿದೆ. ನಾಡಿನ ಹಬ್ಬಗಳೆಲ್ಲ ಸಾಂತ್ವನಕ್ಕೆ, ಸತ್ಯದರ್ಶನಕ್ಕೆ ಮೀಸಲಾದ ಕಾರ್ಯಕ್ರಮಗಳು. ನನ್ನ ಕರ್ತವ್ಯ ಮಾಡಿದ್ದೇನೆ. ಹಾಲಿಗಾದರೂ ಹಾಕು, ನೀರಿಗಾದರೂ ಹಾಕು ಎಂದು ಭಗವಂತನಿಗೆ ಶರಣಾಗುವ ಕಾಲ. ಹಣತೆ ತಂದು ಬತ್ತಿ
ಇಟ್ಟು ಎಣ್ಣೆ ತುಂಬಿಸಿ ದೀಪ ಹಚ್ಚುತ್ತೇವೆ.ದೀಪಗಳ ಸಾಲು ಸಾಲು ಹೊರಗಿನ ಕತ್ತಲನ್ನು ದೂರ ಮಾಡುತ್ತದೆ. ಸೂರ್ಯನಿಲ್ಲದಕ್ಷಣಗಳಲ್ಲಿ ಏನೋ ನೆಮ್ಮದಿ, ಧೈರ್ಯ. ಆದರೆ ಒಳಗಿನ ಕತ್ತಲು?

ಒಳಗೆ ಕತ್ತಲು ತುಂಬಿಕೊಂಡವರಿಗೆ ಹಗಲು, ರಾತ್ರಿ ಎಲ್ಲವೂ ಒಂದೆ. ಹಗಲು ಹೊಟ್ಟೆಯ ಪಾಡಿಗೆ, ರಾತ್ರಿ ನಿದ್ರೆಗೆ ಎಂದು ನಂಬಿದವರೇ ಹೆಚ್ಚು. ಇಂತಹ ಜೀವನವನ್ನು ಪ್ರಾಣಿಗಳು ನಡೆಸುತ್ತವೆ. ಆದರೆ ಸೃಷ್ಟಿಯಲ್ಲಿ ಬುದ್ಧಿ ಪಡೆದುಕೊಂಡ ಮನುಷ್ಯ ಒಳಗಿನ ಕತ್ತಲು ಕಳೆಯಲು ಸಿದ್ಧಿ ಮಾಡಬೇಕು, ಬುದ್ಧನಾಗಬೇಕು. ಅಂದರೆ ದೀಪಾವಳಿ ಅರ್ಥಪೂರ್ಣವಾಗುತ್ತದೆ. ನಮ್ಮ ಆಶ್ರಿತರ ಬದುಕಿನ ಜೊತೆ ನಮಗಿಂತ ಹಿಂದಿರುವವರ, ನೊಂದಿರುವವರ ಬದುಕಿಗೆ ಬೆಳಕಾಗಲು,
ಅನ್ನವಾಗಲು ಪ್ರಯತ್ನಿಸಬೇಕು. ರಾತ್ರಿ ಕತ್ತಲಲ್ಲೂ ಲೋಕಕಲ್ಯಾಣದ ಚಿಂತನೆ ಮಾಡಬೇಕು. ಕನಸು, ಮನಸಿನಲ್ಲೂ ಇನ್ನೊಬ್ಬರ ಕೆಡುಕನ್ನು ಎಣಿಸದವರ ಮನಸ್ಸಿನಲ್ಲಿ ಪ್ರತಿ ಉಸಿರು ದೀಪಾವಳಿ.

ಹೊಟ್ಟೆಕಿಚ್ಚಿನ ಉರಿ ಹಚ್ಚಿಕೊಂಡು ಹಗಲು-ರಾತ್ರಿ ವಿಷ ಕಾರುತ್ತ ಆಯುಷ್ಯ ಕಳೆಯುವವರಿಗೆ ದೀಪಾವಳಿಯೂ ಕತ್ತಲೇ! ಗಡಿಯಲ್ಲೂ ಘರ್ಷಣೆ, ಗುಡಿಯಲ್ಲೂ ಘರ್ಷಣೆ. ಖಾಕಿ, ಖಾವಿ, ಖಾದಿಗಳಲ್ಲೂ ಘರ್ಷಣೆ. ಖಾಕಿ ಗಡಿಯಲ್ಲಿ ಭಾರತಾಂಬೆಯ ಗುಡಿ ಕಾಯುತ್ತಿದ್ದರೆ ಖಾವಿ, ಖಾದಿಗಳು ಯಶಸ್ಸು ಹಂಚಿಕೊಳ್ಳಲು ಕಚ್ಚಾಡುತ್ತವೆ.

ಇವರೆಲ್ಲ ಖಾಕಿ ತೊಟ್ಟು ಗಡಿಗೆ ಹೊರಡಬೇಕು. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಕೊಂದರೆ ಅದು ಕೊಲೆ. ಒಂದು ದೇಶದ ಜನ ಇನ್ನೊಂದು ದೇಶದ ಜನರನ್ನು ಹತ್ಯೆ ಮಾಡಿದರೆ ಅದು ಭಯೋತ್ಪಾದನೆ. ಒಂದು ದೇಶದ ಸೈನಿಕರು ಇನ್ನೊಂದು ದೇಶದ ಸೈನಿಕರನ್ನು ಕೊಂದರೆ ಅದು ಆಯಾ ದೇಶದಲ್ಲಿ ದೇಶಭಕ್ತಿಯ ಪರಾಕಾಷ್ಠೆ. ಇಲ್ಲೆಲ್ಲ ಸಾವೇ ಮುಖ್ಯ. ಧರ್ಮಗ್ರಂಥಗಳು ಒಳ್ಳೆಯದನ್ನೇ ಹೇಳಿವೆ. ಅದನ್ನು ಅರ್ಥಮಾಡಿ ಕೊಳ್ಳಲಾರದವರು, ಧರ್ಮದಂತೆ ನಡೆಯಲಾರದವರು
ತಪ್ಪಾಗಿ ಅರ್ಥೈಸಿ ಧರ್ಮದ ಹೆಸರಿನಲ್ಲಿ ಕಾದಾಟಕ್ಕಿಳಿಯುತ್ತಾರೆ. ಹಿಂಸೆಯನ್ನು ಧರ್ಮ ಬೋಧಿಸುವುದಿಲ್ಲ. ಅಜ್ಞಾನಿಗಳಿಗೆ ಜ್ಞಾನದ ಮಾರ್ಗ ತೋರಿಸಿದ್ದು ಧರ್ಮ.

Advertisement

ಕಾಲಕಾಲಕ್ಕೆ ಹುಟ್ಟಿ ಬಂದ ಧರ್ಮಗಳು ಧರ್ಮಗ್ರಂಥಗಳು ಮನುಕುಲದ ಒಳಿತನ್ನೇ ಹೇಳಿವೆ. ಧರ್ಮವನ್ನು ಆಚರಿಸುವ ಮುಖಾಂತರ ಸತ್ಯದ ಹಾದಿಯಲ್ಲೇ ಬಾಳಬೇಕು ಎಂಬುದು ಧಾರ್ಮಿಕ ಗ್ರಂಥಗಳಲ್ಲಿ ಹೇಳಿದ ಹಬ್ಬಗಳ ಆಚರಣೆಯ ಹಿನ್ನೆಲೆ. ಜ್ವಲಿಸುವುದು ಲೋಕಮೂಲ, ಸೂರ್ಯದೇವನ ಧರ್ಮ. ಕತ್ತಲಾವರಿಸಿ ಪ್ರಪಂಚಕ್ಕೆ ನೆಮ್ಮದಿಯ ನಿದ್ದೆ ಕೊಡುವುದು ಕತ್ತಲೆಯ ಧರ್ಮ. ಜ್ವಲಿಸುವ ಸೂರ್ಯದೇವನ ರಥ ಭೂಮಿಯ ಒಂದು ಸುತ್ತು ಮುಗಿಸುವಷ್ಟರಲ್ಲಿ
ಕತ್ತಲು ಕಳೆದು ಬೆಳಕು, ಬೆಳಕು ಕಳೆದು ಕತ್ತಲು ಬರುತ್ತದೆ. ಬೆಳಗಿನ ಸೂರ್ಯಕಿರಣಗಳಿಂದ ಚರಾಚರ ಸೃಷ್ಟಿಕಾರ್ಯ ಆರಂಭವಾಗುತ್ತದೆ. ಸೂರ್ಯಾಸ್ತದ ನಂತರ ಸೃಷ್ಟಿಕಾರ್ಯಕ್ಕೊಂದಿಷ್ಟು ವಿಶ್ರಾಂತಿ. ಇದು ಜಗದ ನಿಯಮ.

ಬಿಸಿಲಲ್ಲಿ ನೀರು ಆಕಾಶಕ್ಕೇರಿ ಮೋಡಗಟ್ಟಿ ಮತ್ತೆ ಮಳೆಯಾಗಿ ಸೃಷ್ಟಿಕಾರ್ಯ ನಿರಂತರವಾಗಿ ನಡೆದಿತ್ತು. ಮನುಷ್ಯ ಕತ್ತಲ ಭಯದಲ್ಲಿ ಅಗ್ನಿ ಸೃಷ್ಟಿಸಿದ. ಅನ್ನ ಬೆಂದಿತು, ಮನೆ ಬೆಳಗಿತು. ಶಕ್ತಿಯ ಪ್ರತೀಕವಾದ ಅಗ್ನಿಯನ್ನು ಇನ್ನೊಬ್ಬರ ಮನೆಗೆ ಕಿಚ್ಚಿಡಲು ಮನುಷ್ಯ ಬಳಸಿದಾಗಲೇ ದುರಂತ ಆರಂಭವಾಯಿತು. ಅನ್ನಕ್ಕೆ ಕಾರಣವಾದ ಅಗ್ನಿ ಅಣುಬಾಂಬ್‌ ಆಗಿ ಜಗತ್ತನ್ನು ಸುಡಲು ಸಿದ್ಧವಾಗಿದೆ. ಇದು ಅಗ್ನಿಯ ತಪ್ಪಲ್ಲ. ಮನುಕುಲದ ತಪ್ಪು. ಕತ್ತಲಲ್ಲೂ ಕೊಲ್ಲುವ ಶಕ್ತಿಯನ್ನು ಬೆಳೆಸಿಕೊಂಡು ಭೂಮಿ, ಆಕಾಶ, ಪಾತಾಳಗಳಿಂದ ಕೊಲ್ಲುವ ಸಾಮರ್ಥ್ಯ ಬೆಳೆಸಿಕೊಂಡ ದೇಶವೇ ದೊಡ್ಡದು ಎಂಬ ಹಸಿಸುಳ್ಳನ್ನು ಮನುಷ್ಯ ನಂಬಿದ್ದಾನೆ. ಇದರಿಂದ ಬೆಳಗುವ ದೀಪ ಮುಕ್ತಿ ಕೊಡಬೇಕಾಗಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇದು ಇನ್ನೊಬ್ಬನ ಭೂಮಿಯನ್ನು ಬಲಾತ್ಕಾರವಾಗಿ ಕಸಿಯುವ, ಅದಕ್ಕಾಗಿ ಕೊಲ್ಲುವ ಯುಗ ಅಲ್ಲ. ಜ್ಞಾನದ ಯುಗ. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಜ್ಞಾನ ಬಿತ್ತಿ ಬೆಳೆಯುತ್ತ ಜಗತ್ತನ್ನು ಬೆಳಗುವ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ದೇಶದ ಗಡಿಕಾಯುವ ಸೈನಿಕನ ಹೆಸರಿನಲ್ಲಿ ದೀಪಾವಳಿಯ ಮೊದಲ ದೀಪ ಬೆಳಗಿ ಎಂದಿದ್ದಾರೆ. ಇದು ದೇಶದ ಅತಿ ಹೆಚ್ಚು ಜನರಿಗೆ ಅರ್ಥವಾಗಿ, ಅತಿ ಹೆಚ್ಚು
ಪ್ರಜೆಗಳು ಜ್ಞಾನದ ಮಾರ್ಗಕ್ಕೆ ಬಂದಾಗ ಮಾತ್ರ ಹಿರಿಯರು ಆರಂಭಿಸಿದ ದೀಪಾವಳಿ ಅರ್ಥಪೂರ್ಣವಾಗುತ್ತದೆ.

ಜೀವತೈಲದಿಂದ ಜ್ಞಾನದ ದೀಪ ಹಚ್ಚುವ ಕೆಲಸ ಆಗಬೇಕು. ಧರ್ಮಗ್ರಂಥಗಳು ಇದಕ್ಕೆ ಸಹಾಯ ಮಾಡಬಹುದೇ ವಿನಃ ಧರ್ಮಗ್ರಂಥಗಳೇ ಈ ಕೆಲಸ ಮಾಡುವುದಿಲ್ಲ. ವೇದೋಪ ನಿಷತ್ತುಗಳು, ರಾಮಾ ಯಣ, ಮಹಾ ಭಾರತ, ಗೀತೆ ಈ ಗ್ರಂಥಗಳು ಇವುಗಳಲ್ಲಿ ಬರುವ ಪಾತ್ರಗಳು ಕೇವಲ ಪಾರಾಯಣದ ಕಥೆಯೂ ಅಲ್ಲ, ಇನ್ನೊಬ್ಬರ ಉಪದೇಶಕ್ಕೆ ಮೀಸಲಿಟ್ಟ ಸಂಗತಿಯೂ ಅಲ್ಲ. ನಮ್ಮ ಬದುಕನ್ನು ನಾವು ತಿದ್ದಿಕೊಳ್ಳಲು ಅನುಕೂಲ ವಾಗುವಂತೆ ಋಷಿಮುನಿಗಳು, ವ್ಯಾಸ, ವಾಲ್ಮೀಕಿಗಳು ಕಥೆಗಳನ್ನು ಬರೆದಿಟ್ಟಿದ್ದಾರೆ.

ನೂರಾರು ರೂಪದಲ್ಲಿ ಅವು ನಮ್ಮ ಮುಂದಿವೆ. ಆದರೆ ನಾವು ಮಾತ್ರ ಅದರ ಅಂಶಗಳನ್ನು ಬದುಕಿಗೆ ಅನ್ವಯಿಸಿ ಕೊಳ್ಳಬೇಕು ಎಂಬುದನ್ನು ಅರಿತೂ ಅರಿಯದವರಂತೆ ಆತ್ಮ ರಕ್ಷಣೆಯ ಅಸ್ತ್ರವಾಗಿ, ಹೊಟ್ಟೆ ಪಾಡಿಗಾಗಿ ಬಳಸುತ್ತಿದ್ದೇವೆ. ಉಪದೇಶಗಳು ಉಸಿರಿನಿಂದ ಹೊರಹೋಗದೇ ಒಳಗೆ ಅವಾಹನೆಯಾಗಬೇಕು. ಹೊರಗಿನ ದೀಪ ಒಳಗೆ ಶಾಶ್ವತವಾಗಿ ನಿಲ್ಲಬೇಕು. ಬೆಳಗಿಸಿದ್ದೇವೆ ಎಂಬ ಅಹಂ ಬೇಡ, ಅಂಧಕಾರ ಬರಲಿದೆ ಎಂಬ ಭೀತಿ ಬೇಡ. ನಮ್ಮ ಕರ್ತವ್ಯ ನಾವು ಮಾಡೋಣ. ಒಳಗಿನ ದೀಪವನ್ನು ಸದಾ ಬೆಳಗಿಸಿಟ್ಟುಕೊಂಡರೆ ಸಾವು, ನೋವು, ಮಾನಾಪಮಾನ, ಹಿಂಸೆ, ಮೊದಲಾದ ಯಾವ ಕತ್ತಲೂ ನಮ್ಮತ್ತ ಸುಳಿಯಲಾರದು. ದೀಪ ನಮ್ಮನ್ನು ಮುನ್ನಡೆಸಲಿ.
ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next