ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಎದೆಗುಂದದೆ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಿ ಬಲ ತುಂಬುವ ಕೆಲಸ ಮಾಡೋಣ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಈ ಕುರಿತು ಭಾವನಾತ್ಮಕವಾಗಿ ಪಕ್ಷದ ಮುಖಂಡರಿಗೆ ಪತ್ರ ಬರೆದಿರುವ ಅವರು, ಪ್ರಜಾಪ್ರಭುತ್ವದ ಚುನಾವಣೆ ವ್ಯವಸ್ಥೆಯಲ್ಲಿ ಏಳು-ಬೀಳು ಸಹಜ. ಆದರೆ, ಪಕ್ಷಕ್ಕೆ ದೊರೆತಿರುವ ಫಲಿತಾಂಶದಿಂದ ಯಾರೂ ಎದೆಗುಂದಬಾರದು ಎಂದು ಮನವಿ ಮಾಡಿದ್ದಾರೆ.
ಪಕ್ಷದ ಶಾಸಕರು, ಸಂಸದರು, ಮಾಜಿ ಶಾಸಕರು, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಫಲಿತಾಂಶದ ಬಗ್ಗೆ ಪರಾಮರ್ಶೆ ಮಾಡಲು ಸ್ಪರ್ಧೆ ಮಾಡಿದ್ದ ಎಲ್ಲ ಅಭ್ಯರ್ಥಿಗಳ ಸಭೆಯನ್ನು ಮುಂದಿನ ವಾರ ಆಯೋಜಿಸಲು ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪತ್ರದಲ್ಲಿ ಏನಿದೆ?:
ಈ ಬಾರಿಯ ಚುನಾವಣೆ ಫಲಿತಾಂಶ ನಿರೀಕ್ಷಿತ ಮಟ್ಟಕ್ಕೆ ಬಂದಿಲ್ಲ. ಇದು ನಮ್ಮೆಲ್ಲರಿಗೂ ಅಚ್ಚರಿ ಮತ್ತು ನಿರಾಶೆ ಮೂಡಿಸಿದೆ. ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದವರು ಶಕ್ತಿಮೀರಿ ಶ್ರಮಿಸಿದ್ದಾರೆ. ಎಲ್ಲರೂ ಕೈ ಜೋಡಿಸಿ ಕೆಲಸ ಮಾಡಿದ್ದಾರೆ. ಆದರೂ ದುಡಿಮೆಗೆ ನಿರೀಕ್ಷಿತ ಯಶಸ್ಸು ದೊರೆತಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ವರ್ಷಗಳಿಂದ ಜನತಾಪರ್ವ ಹಾಗೂ ಪಂಚರತ್ನ ಕಾರ್ಯಕ್ರಮ ಜನರ ಮುಂದಿಟ್ಟು ರಾಜ್ಯ ಪ್ರವಾಸ ಮಾಡಿದಾಗ ಸಾವಿರಾರು ಜನರು ಸೇರಿ ಬೆಂಬಲ ಸೂಚಿಸಿದರು. ಆದರೆ, ಚುನಾವಣೆಯಲ್ಲಿ ಯಶಸ್ಸು ಸಿಗಲಿಲ್ಲ.
Related Articles
ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, 90ರ ವಯಸ್ಸಿನಲ್ಲಿ ಆರೋಗ್ಯ ಸ್ಥಿತಿ ಅಷ್ಟು ಸಹಜವಾಗಿ ಇಲ್ಲದಿದ್ದರೂ ನಾನೂ ಸಹ ಹಲವಾರು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರೂ ಮತದಾರರು ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕಹಿ ಅನುಭವಿಸಿ, ಸಾಕಷ್ಟು ಕಷ್ಟ-ನಷ್ಟ ಹೊಂದಿದ್ದೀರಿ. ಆದರೆ, ಪಕ್ಷ, ರಾಜ್ಯಾಧ್ಯಕ್ಷರು, ನಾನೂ ಒಳಗೊಂಡಂತೆ ಎಲ್ಲರೂ ಸದಾ ಕಾಲ ನಿಮ್ಮ ನೆರವಿಗೆ ಮತ್ತು ಬೆಂಬಲಕ್ಕೆ ನಿಲ್ಲುತ್ತೇವೆ ಎಂಬ ಆಶ್ವಾಸನೆ ನೀಡುತ್ತೇನೆ.
ಆರು ದಶಕಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದೇನೆ. 1989 ರಲ್ಲಿ 2 ಸ್ಥಾನ ಗಳಿಸಿದ್ದ ಪಕ್ಷ 1994ರಲ್ಲಿ ಅಧಿಕಾರಕ್ಕೆ ಬಂದಿದ್ದೂ ಇದೆ. ಹೀಗಾಗಿ, ಯಾರೂ ಸೋಲಿಗೆ ಎದೆಗುಂದಬಾರದು. ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ್ತೆ ಪಕ್ಷ ಸಂಘಟಿಸಿ ಬಲ ತುಂಬೋಣ ಎಂದು ಹೇಳಿದ್ದಾರೆ.
ಗುರುವಾರ ದೇವೇಗೌಡರ ಹುಟ್ಟುಹಬ್ಬ ಸರಳ ರೀತಿಯಲ್ಲಿ ಆಚರಿಸಬೇಕು. ಹುಟ್ಟುಹಬ್ಬದ ಪ್ರಯುಕ್ತ ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆಗಳಲ್ಲಿ ಹಣ್ಣು-ಹಂಪಲು ವಿತರಣೆ, ರಕ್ತದಾನದ ಮೂಲಕ ಆಚರಿಸಬೇಕು. ದೇವೇಗೌಡರ ಆರೋಗ್ಯ ವೃದ್ಧಿಗೆ ಪ್ರಾರ್ಥಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.