Advertisement

ಉದ್ಯೋಗ ದೊರೆತ ಬಳಿಕ ಊರು ಮರೆಯಬೇಡಿ

09:35 PM Sep 14, 2019 | Lakshmi GovindaRaju |

ಕೆ.ಆರ್‌.ನಗರ: ಉದ್ಯೋಗ, ಹಣ, ಅಧಿಕಾರ ಬಂದ ತಕ್ಷಣ ಗ್ರಾಮೀಣ ಪ್ರದೇಶಗಳನ್ನು ಮರೆಯಬಾರದು. ಹುಟ್ಟೂರಿನ ಋಣ ತೀರಿಸಬೇಕು. ಶಾಲೆ, ಗ್ರಾಮಗಳ ಅಭಿವೃದ್ಧಿಗೆ ನೆರವಾಗಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮುನ್ನುಗ್ಗಿ: ಯಾವುದೇ ಕೆಲಸಗಳಲ್ಲಿ ಏಳು ಬೀಳುಗಳು ಸಹಜವಾಗಿದ್ದು, ಎದೆಗುಂದದೆ ಮುನ್ನುಗ್ಗಿದರೆ ಗುರಿ ತಲುಪಲು ಸಾಧ್ಯವಾಗಲಿದೆ. ಎಂತಹ ಸಂದರ್ಭ ಬಂದರೂ ತಾವು ಹುಟ್ಟಿ ಬೆಳೆದ ಊರು, ಜನರನ್ನು ಮರೆಯದೆ ಸೇವೆ ಅವರ ಮಾಡಿ ಋಣವನ್ನು ತೀರಿಸಬೇಕು ಎಂದರು.

ಸಮಾಜದಲ್ಲಿ ಹೆಣ್ಣ-ಗಂಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅವರ ನಡುವೆ ಭೇದಭಾವ ಮಾಡಬಾರದು. ಜಗತ್ತಿನ ಇತಿಹಾಸದಿಂದಲೂ ಹೆಣ್ಣು ಗಂಡಿಗಿಂತ ಶಕ್ತಿವಂತಳು ಎಂಬುದು ಸಾಬೀತಾಗಿದೆ. ಆದ್ದರಿಂದಲೇ ಹೆಣ್ಣನ್ನು ನಾವು ಪೂಜ್ಯ ಮನೋಭಾವನೆಯಿಂದ ಕಾಣುತ್ತಾ ಗೌರವ ನೀಡುತ್ತಿದ್ದೇವೆ. ಮಹಿಳೆಯರಲ್ಲಿ ಹಠ, ಅಹಂಕಾರ, ಗರ್ವ ಇರಬಾರದು ಎಂದು ಸಲಹೆ ನೀಡಿದರು.

ರಾಜಕೀಯಕ್ಕೆ ಬರಬೇಡಿ: ಪ್ರಸ್ತುತ ರಾಜಕೀಯ ಕ್ಷೇತ್ರ ಅವ್ಯವಸ್ಥೆಯಿಂದ ಕೂಡಿದ್ದು, ಹೊಲಸಾಗಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ರಾಜಕೀಯ ಪ್ರವೇಶಿಸದೇ ಚೆನ್ನಾಗಿ ಓದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳಬೇಕು. ರಾಜಕಾರಣದಲ್ಲಿ ಅಧಿಕಾರ, ಸ್ಥಾನಮಾನ ನೀಡಿದರೂ ನಂಬಿಕೆ ದ್ರೋಹ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ರಾಜಕಾರಣಿಗಳಿಗೆ ಸಮಾಜದಲ್ಲಿ ಗೌರವವಿಲ್ಲದಂತಾಗಿದೆ. ಹೀಗಾಗಿ ವಿದ್ಯಾವಂತರು ಇತರೆ ಕ್ಷೇತ್ರಗಳಲ್ಲಿ ಸ್ಥಿರವಾಗಿದ್ದು ಅಲ್ಲೇ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾಂಪೌಂಡ್ ನಿರ್ಮಾಣ: ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರಾತಿಯನ್ನು 10 ವರ್ಷಗಳ ಹಿಂದೆ ನಾನೇ ಮಾಡಿಸಿಕೊಟ್ಟಿದ್ದಲ್ಲದೆ ಸುಸಜ್ಜಿತ ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿಗೆ ಕಾಂಪೌಂಡ್ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ.ಪಿ.ಕೋಕಿಲಾ, ಖ್ಯಾತ ಜನಪದಗೀತೆ ಗಾಯಕ, ರಂಗಭೂಮಿ ಕಲಾವಿದ ದೇವಾನಂದವರ ಪ್ರಸಾದ್‌, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಗೋಪಾಲಯ್ಯ, ಪ್ರಾಧ್ಯಾಪಕರಾದ ಸುನೀಲ್‌, ಎಸ್‌.ಮೋಹನ್‌, ಸಿಡಿಸಿ ಕಾರ್ಯದರ್ಶಿ ಕೆ.ಟಿ.ರಮೇಶ್‌, ಸದಸ್ಯೆ ಮೋಹನಕುಮಾರಿ, ಪುರಸಭಾ ಸದಸ್ಯ ಸಂತೋಷ್‌ಗೌಡ, ನಿವೃತ್ತ ಉಪನ್ಯಾಸಕ ಕೆ.ಆರ್‌.ಲಕ್ಕೇಗೌಡ, ತಹಶೀಲ್ದಾರ್‌ ಎಂ.ಮಂಜುಳಾ, ಪ್ರಾಧ್ಯಾಪಕ ವಿಜಯ್‌ ಇತರರು ಉಪಸ್ಥಿತರಿದ್ದರು.

ಸಾರಾ ಮಹೇಶ್‌ ಜಾತಿವಾದಿ ಅಂತಾರೆ: ತಾಲೂಕಿನಲ್ಲಿ ನಾನು ಎಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಸಾ.ರಾ.ಮಹೇಶ್‌ ಜಾತಿವಾದಿ ಎನ್ನುತ್ತಾರೆ. ಕಳೆದ 15 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ, ಉಚಿತ ತುರ್ತು ವಾಹನ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌, ವಿಕಲಚೇತನರಿಗೆ ವಿಮೆ, ಸೀಮಂತ ಕಾರ್ಯಕ್ರಮ ಸೇರಿದಂತೆ ಸೂಕ್ಷ್ಮಾತಿ ಸೂಕ್ಷ್ಮ ಸಮಾಜಗಳ ಮಕ್ಕಳಿಗೂ ಅನುಕೂಲವಾಗಲಿ ಎಂದು ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸಿದ್ದೇನೆ. ಜೊತೆಗೆ ಕೈಗಾರಿಕಾ ತರಬೇತಿ ಕಾಲೇಜು, ಡಿಪ್ಲೊಮಾ ಕಾಲೇಜು. ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದರೂ ಸಾ.ರಾ.ಮಹೇಶ್‌ ಜಾತಿವಾದಿ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next