ಬೀಳಗಿ: ಶೈಕ್ಷಣಿವಾಗಿ ಎತ್ತರಕ್ಕೆ ಬೆಳೆದರೂ ಕೂಡ, ಸಂಸ್ಕೃತಿ, ಪರಂಪರೆ ಮರೆಯಬಾರದು. ಅಕ್ಷರ ಜ್ಞಾನದ ಜತೆಗೆ ನೀತಿಯುತ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಸ್ಥಳೀಯ ಕೊರ್ತಿ ಪುನರ್ವಸತಿ ಕೇಂದ್ರದ ಜ್ಞಾನದೀಪ ಪಬ್ಲಿಕ್ ಶಾಲೆಯ 15 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗುರು-ಹಿರಿಯರನ್ನು ಹಾಗೂ ತಂದೆ-ತಾಯಿಯನ್ನು ಗೌರವಿಸುವ ಗುಣ ಮಕ್ಕಳಲ್ಲಿ ಬೆಳೆಸಬೇಕು. ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ನಮ್ಮ ಮಕ್ಕಳು ಸತ್ಪ್ರಜೆಗಳಾಗಿ ಹೊರಹೊಮ್ಮುವುದು ಅಗತ್ಯವಿದೆ. ಜ್ಞಾನದೀಪ ಶಾಲೆಯು ಹೆಸರಿಗೆ ತಕ್ಕಂತೆ ಮಕ್ಕಳಲ್ಲಿ ಅಕ್ಷರ ಜ್ಞಾನ ಬಿತ್ತುವ ಕೆಲಸ ಮಾಡುತ್ತಿದೆ ಎಂದರು.
ಕೇವಲ ಒಂದೂವರೆ ದಶಕದಲ್ಲಿ ಈ ಸಂಸ್ಥೆಯ ಅಗಾಧ ಸಾಧನೆ ಮಾಡುವ ಮೂಲಕ, ನುರಿತ ಶಿಕ್ಷಕರನ್ನು ಹೊಂದಿರುವ ಈ ವಿದ್ಯಾ ಸಂಸ್ಥೆಯು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವುದು ಶ್ಲಾಘನೀಯ. ಎಲ್ಲ ಕ್ಷೇತ್ರಗಳಿಗಿಂತ ಶೈಕ್ಷಣಿಕ ಕ್ಷೇತ್ರ ದೇಶ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶಿಕ್ಷಣ ಸೇವೆಯೇ ದೇಶ ಸೇವೆಯಾಗಿದೆ. ಜವಾಬ್ದಾರಿಯುತ ನಾಗರಿಕರನ್ನು ತಯಾರು ಮಾಡಿ ಭವ್ಯ ಭಾರತ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು.
ಬಿಇಒ ಹನುಮಂತಗೌಡ ಮಿರ್ಜಿ ಮಾತನಾಡಿ, ಪ್ರತಿ ಮಗುವಿನಲ್ಲಿಯೂ ವಿಭಿನ್ನ ಪ್ರತಿಭೆಯಿರುತ್ತದೆ. ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಅಗತ್ಯ. ಪಾಲಕರು-ಶಿಕ್ಷಕರು ಮಕ್ಕಳಿಗೆ ಯೋಗ್ಯ ತರಬೇತಿ ನೀಡಿದರೆ ಸ್ವೀಕರಿಸುವ ಶಕ್ತಿ ಮಕ್ಕಳಿಗಿದೆ ಎಂದರು. ತಮಿಳುನಾಡು ಯುನಿವರ್ಸಲ್ ವಿ.ವಿ.ಗೌರವ ಡಾಕ್ಟರೇಟ್ ಪದವಿ ಪುರಸ್ಕೃತೆ 2ನೇ ತರಗತಿ ವಿದ್ಯಾರ್ಥಿನಿ ಡಾ| ವೈದೃತಿ ಕೋರಿಶೆಟ್ಟಿ ನೆನಪಿನ ಭಂಡಾರ ಶಕ್ತಿಯ ಪ್ರದರ್ಶನ ಸಭಿಕರನ್ನು ಬೆರಗುಗೊಳಿಸಿತು.
ಹುಲಜಂತಿ ಪಟ್ಟದ ದೇವರು ಮಾಳಿಂಗರಾಯ ಮಹಾರಾಯ ಸಾನ್ನಿಧ್ಯ ಹಾಗೂ ಸಂಸ್ಥೆಯ ಅಧ್ಯಕ್ಷ ಬಸವರಾಜ ದೇವರಮನಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಆಡಳಿತಾಧಿ ಕಾರಿ ವಿದ್ಯಾ ಹಂಚಾಟೆ, ಜಿಪಂ ಸದಸ್ಯ ಹನುಮಂತ ಕಾಖಂಡಕಿ, ಸುರೇಂದ್ರ ನಾಯಕ, ಈರಣ್ಣ ಗಿಡ್ಡಪ್ಪಗೋಳ, ಶಿಕ್ಷಣ ಸಂಯೋಜಕ ರಮೇಶ ವಡವಾಣಿ, ರಾಜು ನಾಯಕವಾಡಿ, ಬಿ.ಕೆ.ದೇಸಾಯಿ, ಪಪಂ ಸದಸ್ಯ ವಿಠಲ ಬಾಗೇವಾಡಿ, ಮುತ್ತು ಬೋರ್ಜಿ, ಸಂತೋಷ ನಿಂಬಾಳಕರ, ಅಜ್ಜು ಭಾಯಿಸರಕಾರ, ಸರಸ್ವತಿ ದೇವರಮನಿ, ಸಿದ್ದು ಗಿರಗಾಂವಿ, ನಿಂಗಪ್ಪ ಹೂಗಾರ, ಹನುಮಂತ ಜಲ್ಲಿ ಇತರರು ಇದ್ದರು.