ಮಳೆಯಿಂದ ವಾತಾವರಣವೆಲ್ಲವೂ ತೇವಾಂಶಸಂಭೂತ. ಮಳೆಗೆ ಪ್ರತಿಕ್ರಿಯಿಸಿ ಸಸ್ಯರಾಶಿಗಳೆಲ್ಲವೂ ನಳನಳಿಸುವ ಕಾಲವಿದು. ಹೂಬಿಡುವ ಮರಗಿಡಗಳ ನಡುವೆ ಹಸುರಿನಲ್ಲಿ ನಾಲ್ಕೈದು ಎಲೆಗಳನ್ನು ಹೊಂದಿ ಉದಿಸುವ ಗಿಡಗಳೂ ಇವೆ. ಮಳೆ ಬಂದಾಗ ಅಲ್ಲಲ್ಲಿ ಪಾಚಿ-ಜರೀಗಿಡಗಳು ಸರ್ವೇಸಾಮಾನ್ಯ.
ಮಳೆಯ ಹೊಡೆತಕ್ಕೆ ಹುಲ್ಲು ಮೇಲೇಳುವ ಹಾಗೆ ಭೂಮಿಗೆ ಹಸುರನ್ನು ಉಡಿಸುವ ಸಸ್ಯ ಕೆಸು. ಕೆಸವು, ಆನೆಕಿವಿ ಎಲೆ ಗಿಡ, ತೇವು, ಮಾಡಿ ಗಿಡ ಹೀಗೆ ಹಲವು ಹೆಸುರುಗಳಲ್ಲಿ ಕೆಸು ಪ್ರಸಿದ್ಧ. ಗಡ್ಡೆಗಳಿಂದ ಮೊಳೆಯುವ ಕೆಸುವು ಒಂದೆರಡು ಎಲೆಗಳಿಂದ ಯುಕ್ತವಾಗಿ ಮೇಲೆದ್ದು ನಳನಳಿಸುತ್ತದೆ. ನೀರುಬಿದ್ದು ಮುತ್ತಿನಂತೆ ಹೊಳೆದು ಜಾರುವ ಕೆಸುವಿನ ಎಲೆಯ ಹೈಡ್ರೊಫೊಬಿಕ್ ಗುಣ ಯಾರಿಗೆ ತಾನೇ ತಿಳಿದಿಲ್ಲ? ನಾಲ್ಕೈದು ಎಲೆಗಳ ಮಧ್ಯ ಹಳದಿ ಹೂವು ಅಂಕುರವಾಗುವುದು ಇನ್ನೂ ಆಕರ್ಷಕ.
ಕೆಸು – ಟಾರೋ – ಕೊಲೊಕಾಸಿಯಾ ಎಸ್ಕಾಲೆಂಟಾ ಹೃದಯಾಕಾರದ ಅಥವಾ ಬಾಣದ ಆಕಾರದ ಎಲೆಗಳನ್ನು ಹೊಂದಿರುವ ಮತ್ತು ಪ್ರಮುಖವಾಗಿ ಒಂದು ಕಂದಮೂಲ ತರಕಾರಿ. ಇದು ಅರಕೇಶಿಯಾ ಕುಟುಂಬದ್ದು. ಈ ಕುಟುಂಬಕ್ಕೆ ಆಕರ್ಷಕವಾದ ಫಿಲೋಡೆಂಡ್ರಾನ್ ಗಳು ಮತ್ತು ಕ್ಯಾಲಾ ಲಿಲ್ಲಿಗಳೂ ಸಹ ಸೇರಿವೆ. ಕೆಸುವು ಪ್ರಪಂಚಾದ್ಯಂತ ಅನೇಕ ಸಂಸ್ಕೃತಿಗಳಲ್ಲಿ, ಉಷ್ಣವಲಯದ ದೇಶಗಳಲ್ಲಿ ಪ್ರಧಾನ ಆಹಾರವಾಗಿದೆ. ಭಾರತದಲ್ಲಿ ಕೇರಳದಿಂದ ಈಶಾನ್ಯ ರಾಜ್ಯದವರೆಗೂ ಕೆಸುವಿನ ಅನೇಕ ತಿನಿಸುಗಳು ಅಡುಗೆಕೋಣೆಯ ಒಲೆಯಲ್ಲಿ ಬೇಯುತ್ತವೆ. ಕೆಲವು ಕೆಸುವಿನ ಪ್ರಭೇದಗಳು ಮಳೆಗಾಲದಲ್ಲಿ ಮಾತ್ರ ಕಂಡುಬಂದರೆ, ವಾಣಿಜ್ಯ ಬೆಳೆಯಾಗಿಯೂ ಕೆಸುವನ್ನು ವರ್ಷವಿಡೀ ಪಾತಿ ಮಾಡಿ ಬೆಳೆದಿದ್ದಿದೆ.
ತಿನ್ನಲು ಯೋಗ್ಯವಾದ ಕೆಸುವಿನ ವೈವಿಧ್ಯತೆ ಅಪಾರ. ಕರಿ ಕೆಸು, ಬಾಂಬೆ ಕೆಸು, ಬಿಳಿ ಕೆಸು, ಕಾಡು ಕೆಸು, ಮೊಟ್ಟ ಕೆಸು, ಮುಂಡಿ ಕೆಸು, ಕೆಂಪು ಕೆಸು, ಬೀಳ್ ಕೆಸು, ಚಳ್ಳಿ ಕೆಸು, ಕ್ರೊಟಾನ್ ಕೆಸು ಹೀಗೆ ಗುರುತಿಸಲಾಗದಷ್ಟು ಬಗೆಗಳು ನಮ್ಮ ಸುತ್ತಮುತ್ತಲೇ ಕಂಡುಬರುತ್ತವೆ. ಕೆಸುವಿನ ಎಲೆ, ದಂಟು ಮತ್ತು ಗಡ್ಡೆ ತಿನಿಸುಗಳಿಗೆ ಉಪಯೋಗಕ್ಕೆ ಸುಲಭವಾಗಿ ಬರುತ್ತವೆ. ಇನ್ನು ಕೆಲವು ವಿಶೇಷ ನಮೂನೆಗಳಲ್ಲಿ ಬೀಳಲೂ ಪದಾರ್ಥಕ್ಕೆ ಬಳಸಬಹುದು.
ಕೆಸವಿನ ಭಕ್ಷ್ಯಗಳು ವೈಶ್ವಿಕ ಮಟ್ಟದಲ್ಲೂ ಮಿಂಚಿವೆ. ಹವಾಯಿಯನ್ ಪಾಯ್ಸ್, ಫಿಲಿಪಿನೋ ಲಂಪಿಯಾ ಮತ್ತು ಚಿಪ್ಸ್‌ನಂತಹ ಭಕ್ಷ್ಯಗಳನ್ನು ತಯಾರಿಸಲು ಕೆಸುವಿನ ಗಡ್ಡೆಯನ್ನು ಬಳಸಲಾಗುತ್ತದೆ. ಪ್ರಾದೇಶಿಕವಾಗಿ ಗಡ್ಡೆಯ ಹುಳಿ , ಸಾಸಮೆ, ಪಲ್ಯ; ದಂಟಿನ ಗೊಜ್ಜು; ಎಲೆಯ ಚೇಟ್ಲ, ಕರಗಲೆ, ಪೊಟ್ಲೆ ಹುಳಿ ಇವೆಲ್ಲವೂ ಪತ್ರೊಡೆಯಷ್ಟೇ ಪ್ರಸಿದ್ಧ.
ಮಳೆಗಾಲದ ಸ್ವಾಭಾವಿಕ ತರಕಾರಿ ಕೆಸುವು ಸಾಂಪ್ರದಾಯಕ ಉತ್ಪನ್ನವೂ ಹೌದು. ಆಷಾಢದ ಅನಂತರ ಮಾರುಕಟ್ಟೆಗೂ ಹತ್ತರೆಲೆಯ ಕಟ್ಟಿನಂತೆ ಬರುವ ಕೆಸುವು ಇಂದು ಸೂಪರ್ ಮಾರ್ಕೆಟ್ ತರಕಾರಿಗಳ ಅಂದಕ್ಕೆ ಹೋಲಿಸಿದರೆ ಸೋಜಿಗದ ವಸ್ತು. ಕೆಸುವಿನ ಗಡ್ಡೆಯನ್ನು ಆಹಾರಕ್ಕಾಗಿ ಬಳಸುವ ಕಾರಣಕ್ಕೆ ಅದು ಪ್ರಪಂಚದಾದ್ಯಂತ ವಾಣಿಜ್ಯ ಬೆಳೆಯಾಗಿಯೂ ಗುರುತಿಸಲ್ಪಟ್ಟಿದೆ.
ಕಡಿಮೆ ನಿರ್ವಹಣೆಯೊಂದಿಗೆ ಲಾಭದ ವೆಚ್ಚದ ಅನುಪಾತದ ಆರ್ಥಿಕತೆಯಲ್ಲಿ ಕೃಷಿಕನನ್ನು ಬಲಪಡಿಸುವ ಬೆಳೆ ಕೆಸುವಿನದ್ದು. ಅಧ್ಯಯನಗಳ ಪ್ರಕಾರ ಉತ್ಪಾದಕನಿಗೇ ಬೆಲೆಯ ಪ್ರಮುಖ ಪಾಲು ಸೇರುವ ಬೆಳೆಯೂ ಇದರದ್ದಂತೆ. ಸಂಘಟಿತ ಮಾರುಕಟ್ಟೆಯ ಮೂಲಕ ಕೆಸುವಿನ ಕೃಷಿ ಲಾಭದಾಯಕವಾಗುತ್ತದೆ. ಕೆಸುವಿನ ಬಳಕೆ ಅಡುಗೆಮನೆಗೆ ಸುಸ್ಥಿರತೆ ಕಲಿಸುವ ಸಸ್ಯವೂ ಹೌದು.
-ವಿಶ್ವನಾಥ ಭಟ್
ಧಾರವಾಡ