Advertisement

ಖುಷಿ ಹುಡುಕಬೇಡಿ ಆಸ್ವಾದಿಸಿ!

12:22 AM Nov 18, 2019 | Sriram |

ಎಲ್ಲವೂ ರೆಡಿಮೆಡ್‌ ಆಗಿ ದೊರೆಯುವ ಈಗ ಸಂತೋಷವನ್ನೂ, ನೆಮ್ಮದಿಯನ್ನೂ ಆರ್ಡರ್‌ ಮಾಡಿಕೊಳ್ಳುವ ತವಕದಲ್ಲಿದ್ದೇವೆ. ನಮ್ಮೊಳಗೇ ಇರುವ ಖುಷಿಯನ್ನು ಇನ್ನೆಲ್ಲೋ ಹುಡುಕಿ ಸೋತು ಬಿಡುತ್ತೇವೆ. ಅದರ ಬದಲು ಸುತ್ತ ಮುತ್ತಲು ಇರುವುದಲ್ಲೇ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸಿ. ಧನಾತ್ಮಕ ಚಿಂತನೆಯೊಂದಿಗೆ ದಿನವನ್ನು ಸ್ವಾಗತಿಸಿ. ಆಗ ಬದುಕು ಸುಲಭ.

Advertisement

“ಜೀವನದಲ್ಲಿ ಸಂತೊಷವೇ ಇಲ್ಲ’ ಅದೂ ಸೇರಿ ಅವನು ನೂರನೇ ಬಾರಿ ಯೋಚಿಸಿದ. ಅವನು ಐಟಿ ಉದ್ಯೋಗಿ. ಲ್ಯಾಪ್‌ಟಾಪ್‌ ತೆರೆಯುವುದರೊಂದಿಗೆ ಅವನ ದಿನ ಆರಂಭವಾದರೆ ಶಟ್‌ಡೌನ್‌ ಮಾಡುವುದರೊಂದಿಗೆ ದಿನಾಂತ್ಯವಾಗುತ್ತಿತ್ತು. ಕೆಲವೊಮ್ಮೆ ರಜೆಯಲ್ಲೂ ವರ್ಕ್‌ ಫ‌Åಮ್‌ ಹೋಮ್‌ ಇರುತ್ತದೆ. ಸಂತೋಷ ಎಲ್ಲಿಂದ ಹುಡುಕಲಿ? ಕೂತು ಆಲೋಚಿಸುತ್ತಿದ್ದ.

ಇದ್ದಕ್ಕಿದ್ದಂತೆ ಮನೆ ಪಕ್ಕದಲ್ಲಿ ಭಜನ ಮಂದಿರದಲ್ಲಿ ಗುರುಗಳೊಬ್ಬರು ಮೊಕ್ಕಾಂ ಹೂಡಿರುವುದು ನೆನಪಾಯಿತು. ಅವರಲ್ಲಿ ಸಮಸ್ಯೆ ವಿಚಾರಿಸುವುದು ಸರಿ ಎನಿಸಿತು. ಗುರುಗಳ ದರ್ಶನಕ್ಕೆ ಹೊರಟ. ಆ ದಿನ ಸಾಲು ಉದ್ದವಾಗಿತ್ತು. ಅನಿವಾರ್ಯವಾಗಿ ಸರದಿಯಲ್ಲಿ ನಿಂತ. ಕ್ಯೂ ನಿಧಾನವಾಗಿ ಮುಂದುವರಿಯುತ್ತಿದ್ದರೆ ಅವನು ಅಸಹನೆಯಿಂದ ಚಡಪಡಿಸುತ್ತಿದ್ದ. ಇದನ್ನು ಅಲ್ಲಿಂದಲೇ ಗಮನಿಸುತ್ತಿದ್ದ ಗುರುಗಳು ಒಳಗೊಳಗೆ ನಸು ನಗುತ್ತಿದ್ದರು.

ಅಂತೂ ಒಂದು ಗಂಟೆ ಬಿಟ್ಟು ಅವನಿಗೆ ಗುರುಗಳನ್ನು ಮಾತನಾಡಿಸುವ ಅವಕಾಶ ಸಿಕ್ಕಿತು. ಅವರಿಗೆ ನಮಸ್ಕರಿಸಿ ಪಾದದ ಬಳಿ ಕುಳಿತ. “ಜೀವನದಲ್ಲಿ ಸಂತೋಷವೇ ಇಲ್ಲ. ಅದನ್ನು ಹುಡುಕುವುದು ಹೇಗೆ?’ ಎಂದು ಕೇಳಿದ. ಅವನ ಉದ್ಯೋಗ, ಜೀವನ ರೀತಿಯನ್ನು ವಿಚಾರಿಸಿದ ಗುರುಗಳು ಪ್ರತಿಕ್ರಿಸಿದರು, “ನಾಳೆ ಬೆಳಗ್ಗೆ 5 ಗಂಟೆಗೆ ಎದ್ದು ಇಡೀ ದಿನ ಊರು ಸುತ್ತಿ ಬಾ. ಆ ಮೇಲೆ ನಿನಗೆ ಪರಿಹಾರ ಸೂಚಿಸುತ್ತೇನೆ’ ಎಂದರು. ಸರಿ ಎಂದು ತಲೆ ಅಲ್ಲಾಡಿಸಿ ಮನೆಗೆ ಬಂದ.

ಮಾರನೇ ದಿನ 5 ಗಂಟೆಗೆ ಎಚ್ಚರವಾಯಿತು. ಮನೆ ಸುತ್ತ-ಮುತ್ತ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿತ್ತು. ಎಷ್ಟು ಗಲಾಟೆ ಮಾಡುತ್ತವೆ. ಕಿರಿಕಿರಿ ಎಂದು ಮನದಲ್ಲೇ ಶಪಿಸುತ್ತಾ ಸ್ನಾನಕ್ಕೆ ಹೋದ. ಹೊರಟು ಮನೆಯಿಂದ ಹೊರ ಬಂದಾಗ ಅಂಗಳದಲ್ಲೆಲ್ಲಾ ಪಾರಿಜಾತ, ಮಲ್ಲಿಗೆ ಹೂಗಳು ಬಿದ್ದಿದ್ದವು. “ಕಸ ಬಿದ್ದಿದೆ. ನಾಳೆನೆ ಗಿಡಗಳನ್ನೆಲ್ಲ ಕಡಿಸಬೇಕು’ ಎಂದುಕೊಂಡು, ಬೈಕ್‌ ಸ್ಟಾರ್ಟ್‌ ಮಾಡಿದ. ಸ್ವಲ್ಪ ದೂರ ಬಂದಾಗ ಮಳೆ ಸುರಿಯತೊಡಗಿತು. “ದರಿದ್ರ ಮಳೆ. ಈಗ್ಲೆà ಸುರಿಬೇಕಾ?’ಎಂದು ಬೈದುಕೊಂಡು ಬೈಕ್‌ನ್ನು ಬದಿಯಲ್ಲಿ ಪಾರ್ಕ್‌ ಮಾಡಿದ. ನಂತರ ನಡೆದು ಹೊರಟ. ಒಂದು ಕಡೆ ಮಕ್ಕಳು ಕ್ರಿಕೆಟ್‌ ಆಡುತ್ತಿದ್ದರು. ಬ್ಯಾಟ್ಸ್‌ ಬೀಸಿದ ರಭಸಕ್ಕೆ ಚೆಂಡು ಬಂದು ಅವನ ಪಕ್ಕ ಬಿತ್ತು. “ಸ್ವಲ್ಪ ಈಚೆ ಆಗಿದ್ರು ತಲೆಗೆ ಬೀಳುತ್ತಿತ್ತಲ್ಲ’ ಎಂದುಕೊಂಡ ಅವನು ಕೋಪದಿಂದ ಚೆಂಡನ್ನು ಒದ್ದು ಮುಂದೆ ಸಾಗಿದ. ಸಂಬಂಧಿಕರ ಮನೆಗೆ ಹೋದ. ಅಲ್ಲಿದ್ದ ಚಿಕ್ಕ ಮಗು ಅವನ ಜತೆ ಮಾತನಾಡುತ್ತ “ಅದ್ಯಾಕೆ ಹಾಗೆ, ಇದ್ಯಾಕೆ ಹೀಗಿದೆ’ ಎಂದು ಪ್ರಶ್ನೆ ಕೇಳತೊಡಗಿತು. ಉತ್ತರಿಸುವ ತಾಳ್ಮೆ ಇಲ್ಲದೆ ಎದ್ದು ಬಂದ.

Advertisement

ಕೊನೆಗೆ ಸಮುದ್ರ ತೀರಕ್ಕೆ ಹೋದ. ಭೋರ್ಗರೆಯುವ ತೆರೆಯ ಶಬ್ದ ಕರ್ಕಶವಾಗಿ ಕೇಳಿಸಿತು. ಮರಳು ಕಾಲಿಗೆಲ್ಲ ಮೆತ್ತಿ ಕಿರಿಕಿರಿ ಎನಿಸಿತು. ಅಲ್ಲಿಂದ ಎದ್ದ. ಹೇಗೂ ಇಡೀ ದಿನ ಕಳೆಯಿತು.

ಮಾರನೇ ದಿನ ಗುರುಗಳ ಬಳಿ ಹೋದ. “ನಿನ್ನೆ ದಿನ ಚೆನ್ನಾಗಿತ್ತಾ?’ಅವರು ಪ್ರಶ್ನಿಸಿದರು. “ಕೆಟ್ಟ ದಿನವಾಗಿತ್ತು ಗುರುಗಳೇ. ಬೆಳಗ್ಗೆ ಹಕ್ಕಿಗಳ ಶಬ್ದಗಳಿಂದ ತಲೆ ಚಿಟ್ಟು ಹಿಡಿಯಿತು. ಹೊರಗೆ ಹೋಗುವಾಗ ಅದೆಲ್ಲಿತ್ತೋ ದರಿದ್ರ ಮಳೆ. ಒದ್ದೆಯಾದೆ. ಮಗು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ತಲೆ ತಿಂದು ಹಾಕಿತು’ ಎಂದ ಅಸಮಾಧಾನದಿಂದ. ನಸು ನಕ್ಕು ಗುರುಗಳು ಹೇಳಿದರು, “ಚಿಕ್ಕ ಚಿಕ್ಕ ಸಂಗತಿಯಲ್ಲೂ ಖುಷಿಯನ್ನು ಕಾಣುವುದನ್ನು ನೀನು ಬಿಟ್ಟೇ ಬಿಟ್ಟಿದ್ದೆ. ಆದ್ದರಿಂದಲೇ ನಿನಗೆ ಜೀವನವೇ ಕಷ್ಟ ಎನಿಸುವುದು. ಜೀವನದಲ್ಲಿ ದುಡ್ಡಿನಿಂದಷ್ಟೇ ಸಂತೋಷ ಸಿಗುತ್ತದೆ ಎನ್ನುವ ಭ್ರಮೆಯಿಂದ ಹೊರ ಬಾ. ಕಳೆದು ಹೋದ ನಿನ್ನನ್ನು ಮೊದಲು ಹುಡುಕು. ಸಂತೋಷ ನಾವು ನೋಡುವ ದೃಷ್ಟಿಕೋನದಲ್ಲಿದೆ’ ಎಂದರು.

ನೈಜ ಬದುಕನ್ನು ಆಸ್ವಾದಿಸೋಣ
ಆಲೋಚಿಸಿ ನೋಡಿ. ಸೂರ್ಯೋದಯವನ್ನು ನೋಡಿ, ಅರಳುವ ಹೂಗಳ ಚೆಲುವನ್ನು ಆಸ್ವಾದಿಸಿ, ಮಳೆಯಲ್ಲಿ ನೆನೆದು, ಮಕ್ಕಳೊಂದಿಗೆ ಮಕ್ಕಳಾಗಿ ಆಡಿ ಎಷ್ಟು ದಿನಗಳಾದವು?ಜೀವನದ ಪ್ರತಿ ಕ್ಷಣದಲ್ಲೂ ಖುಷಿ ಇದೆ. ಆದರೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ. ಕಾಣದ ಸಂತೋಷಕ್ಕಾಗಿ ಹಂಬಲಿಸಿ ನಮ್ಮಲ್ಲೇ ಇರುವ ಚಿಕ್ಕ ಪುಟ್ಟ ಖುಷಿಯನ್ನು ಮರೆತು ನಮ್ಮ ಜೀವನವನ್ನೂ ನಾವೇ ಸಂಕೀರ್ಣಗೊಳಿಸುತ್ತಿದ್ದೇವೆ. ಇನ್ನಾದರೂ ಕೃತಕ ಜೀವನದಿಂದ ಹೊರಬಂದು ನೈಜ ಬದುಕನ್ನು ಆಸ್ವಾದಿಸೋಣ.

ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next