Advertisement

ಮತ ಎಣಿಕೆಯಲ್ಲಿ ಬೇಡ ಗೊಂದಲ

09:24 AM May 18, 2019 | Team Udayavani |

ಕೊಪ್ಪಳ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದ್ದು, ಮತ ಎಣಿಕೆಗಾಗಿ ನಿಯೋಜಿಸಲಾದ ಅಧಿಕಾರಿಗಳು, ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಮತ ಎಣಿಕೆ ಕಾರ್ಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸೆಕ್ಟರ್‌ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳಿಗೆ ಮತ ಎಣಿಕೆ ಕಾರ್ಯದ ಕುರಿತು ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಮೇ 23ರಂದು ಬರಲಿದ್ದು, ಮತ ಎಣಿಕೆ ಕಾರ್ಯವನ್ನು ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ನಡೆಸಲಾಗುವುದು. ಮತ ಎಣಿಕೆ ಕಾರ್ಯದಲ್ಲಿ ಆಯೋಗವು ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈಗಾಗಲೇ ಮತ ಎಣಿಕೆ ಕೇಂದ್ರ ಸಜ್ಜುಗೊಂಡಿದೆ. ವಿಧಾನಸಭಾ ಕ್ಷೇತ್ರಗಳವಾರು ಮತ ಎಣಿಕೆ ನಡೆಯಲಿದೆ. ಅಲ್ಲದೆ ಇವಿಎಂ ಸ್ಟ್ರಾಂಗ್‌ ರೂಮ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.

ಮತ ಎಣಿಕಾ ಕೇಂದ್ರದಲ್ಲಿ ಮೀಡಿಯಾ ಸೆಂಟರ್‌, ಪೊಲೀಸ್‌ ವೇಟಿಂಗ್‌ ರೂಂ, ವೀಕ್ಷಕರ ಕೊಠಡಿ, ಹಾಗೂ ಡಿಇಒ ರೂಮ್‌ಗಳನ್ನು ಸಹ ನಿಗದಿಪಡಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರನ್ನು ನೇಮಿಸಲಾಗುವುದು. ಮತ ಎಣಿಕೆಗಾಗಿ ಅಗತ್ಯ ಟೇಬಲ್ಗಳ ವ್ಯವಸ್ಥೆ ಮಾಡಲಾಗುವುದು. ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಬೇಕಾಗಿದ್ದು, ಮತ ಎಣಿಕಾ ಕಾರ್ಯಕ್ಕಾಗಿ ನಿಯೋಜಿಸಿದ ಅಧಿಕಾರಿಗಳು ಮೇ 23ರಂದು ಬೆಳಗ್ಗೆ 5ಕ್ಕೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ, ಬೆಳಗ್ಗೆ 5:30ಕ್ಕೆ ವರದಿ ಮಾಡಿಕೊಳ್ಳಬೇಕು. ತಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರದ ಮಾಹಿತಿ ಹಾಗೂ ಟೇಬಲ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. ಮತಯಂತ್ರಗಳ ಪ್ರಕಾರ ದಾಖಲಾದ ಮತಗಳ ಸಂಖ್ಯೆ, ಚಲಾವಣೆಯಾದ ಮತಗಳು ಇತ್ಯಾದಿಗಳ ವಿವರವನ್ನು ಪಡೆಯಬೇಕು ಎಂದರು.

ಎಣಿಕೆ ದಿನ ಮೊದಲಿಗೆ ಬೆಳಗ್ಗೆ 8:00 ಗಂಟೆಗೆ ಸರಿಯಾಗಿ ಪೋಸ್ಟಲ್(ಅಂಚೆ) ಮತಗಳ ಎಣಿಕೆ ಪ್ರಾರಂಭಗೊಂಡು, ಉಳಿದಂತೆ ಮತಗಟ್ಟೆಗಳಲ್ಲಿ ಇವಿಎಂ ಮೂಲಕ ದಾಖಲಾದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಮತ ಎಣಿಕೆ ಕಾರ್ಯದಲ್ಲಿ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ತೊಂದರೆಯಾದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

Advertisement

ಸೆಕ್ಟರ್‌ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿರವರು ಮತ ಎಣಿಕೆ ಕಾರ್ಯದ ಕುರಿತು ಸಂಪೂರ್ಣ ವಿವರವನ್ನು ನೀಡಿದರು. ಮತ ಎಣಿಕೆ ಕಾರ್ಯದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು.

ಎಡಿಸಿ ಬಾಲಚಂದ್ರ, ಎಸಿ ಸಿಡಿ ಗೀತಾ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು. ತರಬೇತಿಯಲ್ಲಿ ಚುನಾವಣಾ ಮತ ಎಣಿಕೆಗೆ ನಿಯೋಜನೆಗೊಂಡಿರುವ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next