ಚಿಕ್ಕಮಗಳೂರು: ಜಾತ್ರೆ, ರಥೋತ್ಸವಗಳಲ್ಲಿ ಮುಸ್ಲಿಮರ ಅಂಗಡಿಗಳ ಬ್ಯಾನ್ ವಿಚಾರದ ಚರ್ಚೆ ಜೋರಾದ ಬೆನ್ನಲ್ಲೇ ಈಗ ಹಲಾಲ್ ಬ್ಯಾನ್ ಅಭಿಯಾನ ಆರಂಭವಾಗಿದೆ.
ಕಾಫಿನಾಡಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಲಾಲ್ ಬ್ಯಾನ್ ಅಭಿಯಾನ ಆರಂಭಿಸಿದ್ದು, ಯುಗಾದಿ ಬಳಿಕದ ಹೊಸತೊಡಕಿನಂದು ಮುಸ್ಲಿಂ ಬಳಿ ಮಾಂಸ ಖರೀದಿಸುವುದು ಬೇಡ ಎಂದು ಕರೆ ನೀಡಿದೆ.
ಹಲಾಲ್ ಎಂದರೆ ಅಲ್ಲಾ ಹೆಸರಿನಲ್ಲಿ ನೈವೇದ್ಯವಾದ ಮಾಂಸ. ಬೇರೆ ದೇವರಿಗೆ ಒಪ್ಪಿಸಿದ ಮಾಂಸವನ್ನ ನಾವೇಕೆ ಸ್ವೀಕರಿಸಬೇಕು. ಹಲಾಲ್ ಮಾಡುವಾಗ ಪ್ರಾಣಿಯ ಕತ್ತಿನ ಭಾಗ ಸೀಳಿ ಬಿಡುತ್ತಾರೆ.ಆಗ ಪ್ರಾಣಿಯ ಮೆದುಳಿನ ಗ್ರಂಥಿಯಿಂದ ವಿಷಕಾರಿ ಅಂಶ ಬಿಡುಗಡೆಯಾಗುತ್ತದೆ. ಇಂತಹ ಮಾಂಸ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ವೈಜ್ಞಾನಿಕವಾಗಿ ನಿರೂಪಿತವಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಹಿಂದೂಗಳ ಬಳಿಯೇ ಮಾಂಸ ಸ್ವೀಕರಿಸೋಣ ಎಂದು ವಿಹಿಂಪ, ಬಜರಂಗದಳ ಕರಪತ್ರ ಬಿಡುಗಡೆ ಮಾಡಿದೆ.
ಸಿ.ಟಿ.ರವಿ ಬೆಂಬಲ
‘ಹಲಾಲ್ ಅನ್ನುವದು ಒಂದು ಆರ್ಥಿಕ ಜಿಹಾದ್, ಮುಸ್ಲಿಮರು ಇನ್ನೊಬ್ಬರ ಜತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಹೇಳಿಕೆ ನೀಡಿದ್ದರು.ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಳಲು ಹೇಗೆ ಹಕ್ಕು ಇದೆಯೋ, ಹಾಗೆಯೇ ಅದನ್ನು ಬಹಿಷ್ಕರಿಸಿ ಅಂತ ಹೇಳುವ ಹಕ್ಕು ನಮಗಿದೆ’ ಎಂದಿದ್ದರು.