Advertisement

ಲಂಚ ನೀಡಬೇಡಿ, ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ: ಶಾಸಕ ಹರೀಶ್‌ಗೌಡ

11:53 PM Jun 03, 2023 | Team Udayavani |

ಹುಣಸೂರು: ರೈತರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಇನ್ನು ಮುಂದೆ ಹೋಬಳಿ ಮಟ್ಟದಲ್ಲಿ ಅಧಿಕಾರಿಗಳ ಸಭೆ ಆಯೋಜಿಸಿ ಸ್ಥಳೀಯವಾಗಿ ಬಗೆಹರಿಸುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ ಎಂದು ಶಾಸಕ ಜಿ.ಡಿ.ಹರಿಶ್‌ಗೌಡ ತಿಳಿಸಿದರು.

Advertisement

ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿ,ಕರೀಮುದ್ದನಹಳ್ಳಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಾಲೂಕು ಆಡಳಿತ ಸಾರ್ವಜನಿಕರ ಮನೆ ಬಾಗಿಲಿಗೆ ಸೇವೆ ಒದಗಿಸುವ ಕೆಲಸ ಆಗಬೇಕಾಗಿದೆ. ಸಾರ್ವಜನಿಕರು ಸಹ ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕೆಂದು ಆಶಿಸಿ, ತಂದೆ ಜಿ.ಟಿ.ದೇವೇಗೌಡರು ಈ ಭಾಗದಲ್ಲಿನ ಭೂ ಸಮಸ್ಯೆ ನಿವಾರಿಸಲು ಹಲವಾರು ಕ್ರಮ ಕೈಗೊಂಡಿದ್ದರ ಪರಿಣಾಮ ಇಂದಿಗೂ ಸಹ ಕುಟುಂಬವನ್ನು ಸ್ಮರಿಸಿ ತಮ್ಮನ್ನು ಆಶಿರ್ವದಿಸುವ ಮೂಲಕ ತಾಲೂಕಿನ ಶಾಸಕನಾಗಲು ಮತಹಾಕಿದ್ದೀರಾ ಇದಕ್ಕಾಗಿ ನಮ್ಮ ಕುಟುಂಬ ಚಿರಋಣಿಯಾಗಿದ್ದೇವೆಂದರು.

ಮನೆ ಬಾಗಿಲಿಗೆ ಆಡಳಿತ
ಅರ್ಹ ಬಡವರ ಮನೆ ಬಾಗಿಲಿಗೆ ತಾಲೂಕು ಆಡಳಿತದ ಅಧಿಕಾರಿಗಳು ಖಾತೆ ಮಾಡಿಕೊಡಲು ಸಿದ್ಧತೆ ಮಾಡಿಕೊಳ್ಳಬೇಕು, ತಹಶೀಲ್ದಾರ್ ಡಾ.ಅಶೋಕ್‌ರಿಗೆ ಮುತುವರ್ಜಿವಹಿಸಿ ಅರ್ಹ ಬಡವರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದೇನೆ. ಮುಂದಿನ ನಾಲ್ಕೈದು ತಿಂಗಳಲ್ಲೇ ಪ್ರತಿ ಗ್ರಾ.ಪಂ.ನಲ್ಲಿ ಅಧಿಕಾರಿಗಳ ಸಭೆ ಆಯೋಜಿಸಿ, ಅಧಿಕಾರಿಗಳು ಫಲಾನುಭವಿಗಳ ಮನೆ ಬಾಗಿಲಿನಲ್ಲೇ ವಿಧವಾ, ಅಂಗವಿಕಲರ ಹಾಗೂ ವೃದ್ದಾಪ್ಯ ವೇತನ ಸೇರಿದಂತೆ ಸ್ಥಳದಲ್ಲೇ ಆಗುವಂತಹ ಸರಕಾರಿ ಸೌಲಭ್ಯಗಳನ್ನು ಮಂಜೂರು ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆಂದರು.

ಲಂಚ ನೀಡಬೇಡಿ, ಮಧ್ಯವರ್ತಿ ನಂಬಬೇಡಿ
ನಮೂನೆ ೫೩ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಸರಕಾರ ಅಕ್ರಮ-ಸಕ್ರಮ ಸಮಿತಿಗೆ ನಾಮನಿರ್ದೇಶನ ಮಾಡಿದ ತಕ್ಷಣ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು. ಸಾಗುವಳಿ ಚೀಟಿ ಕೊಡಿಸುತ್ತೇನೆ ಎಂದು ಯಾರಾದರೂ ಹಣ ಕೇಳಿದರೆ ನೀಡಬೇಡಿ. ಖಾತೆ- ಪಹಣಿ ಪಡೆಯಲು ಯಾರಿಗೂ ಹಣ ನೀಡಬೇಕಾಗಿಲ್ಲ. ಅರ್ಹರೆಲ್ಲರಿಗೂ ಉಚಿತವಾಗಿ ನೀಡಲಾಗುವುದು. ಯಾವುದೇ ಸಮಸ್ಯೆ ಇದ್ದರೂ ತಾಲೂಕು ಆಡಳಿತವನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ಇಪ್ಪತ್ತು ೨೦ವರ್ಷಗಳ ಹಿಂದೆ ಪಡೆದಿದ್ದ ಸಾಗುವಳಿ ಚೀಟಿ ಪಡೆದವರು ಖಾತೆಯಾಗದೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ರೀತಿ ಆಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ತಾರತಮ್ಯ ಇಲ್ಲ
ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಇಲ್ಲ. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಎಂದು ಭೇದಭಾವ ಮಾಡುವುದಿಲ್ಲ. ಅರ್ಹ ಬಡವರೆಲ್ಲರಿಗೂ ಸವಲತ್ತು ಸೌಲಭ್ಯಗಳನ್ನು ನೀಡಲಾಗುವುದು. ಈ ವಿಷಯದಲ್ಲಿ ಯಾರು ಗೊಂದಲ ಉಂಟು ಮಾಡಬಾರದು ಎಂದು ಸಲಹೆ ನೀಡಿದರು.

Advertisement

ಈ ವೇಳೆ ಮುಖಂಡರಾದ ಕರಿಮುದ್ದನಹಳ್ಳಿ ವೆಂಕಟೇಶ್, ಸತೀಶ್‌ಪಾಪಣ್ಣ, ಜಿ.ಪಂ.ಮಾಜಿ ಸದಸ್ಯ ಸುರೇಂದ್ರ, ಪುಣ್ಯಶೀಲ, ಸೋನಹಳ್ಳಿ ರವಿ ಸೇರಿದಂತೆ ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next