ಬೆಂಗಳೂರು: ರಾಮಜನ್ಮಭೂಮಿ-ಬಾಬರಿ ಮಸೀದಿ ಸಂಬಂಧದ ತೀರ್ಪು ಶೀಘ್ರದಲ್ಲೇ ಹೊರಬೀಳಲಿದ್ದು, ತೀರ್ಪು ಯಾರ ಕಡೆ ಬಂದರೂ, ಭಾವೋದ್ವೇಗಕ್ಕೆ ಒಳಗಾಗದೆ ಸರ್ವ ಧರ್ಮಗಳು ಶಾಂತಿ – ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.
ಸೌಹಾರ್ದ ಕರ್ನಾಟಕ ವೇದಿಕೆ, ಶನಿವಾರ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 22 ವರ್ಷಗಳ ನಂತರ ವಿವಾದ ಕುರಿತಂತೆ ತೀರ್ಪು ಹೊರಬೀಳುತ್ತಿದೆ. ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅಂತಿಮವಾಗಲಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಸಂಬಂಧ ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ ಪಕ್ಷ ಭೇದ ಮರೆತು ಒಪ್ಪಬೇಕು. ಇಂದು ದೇಶದಲ್ಲಿ ಆತಂಕದ ಪರಿಸ್ಥಿತಿ ಇದೆ. ಕೆಲ ಸಮಾಜಘಾತುಕ ಶಕ್ತಿಗಳು ತೀರ್ಪಿನ ಸಂದರ್ಭ ಬಳಸಿಕೊಂಡು ದ್ವೇಷ, ಅಶಾಂತಿ ಹುಟ್ಟುಹಾಕುವ ಆತಂಕ ಮೂಡಿದೆ ಎಂದರು.
ನಾವು ದೇಶದ ಇತಿಹಾಸ ನೋಡುತ್ತೇವೆಯೇ ಹೊರತು ಮುಂದೆ ದೇಶ ಏನಾಗಬೇಕೆಂದು ನೋಡುವುದಿಲ್ಲ. ಜಗತ್ತಿನಲ್ಲಿ ಶಾಂತಿ ನೆಲೆಸಲು ಭಾರತದ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಹ್ಮದ್ ಅನ್ವರ್, ಕವಯತ್ರಿ ಡಾ.ಕೆ.ಶರೀಫಾ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಸೇರಿದಂತೆ ಉಪಸ್ಥಿತರಿದ್ದರು.
ಮಠಾಧೀಶರಿಗೂ ಪತ್ರ: ನ್ಯಾಯಾಲಯದ ತೀರ್ಪಿನ ನಂತರ ಶಾಂತಿ ಕಾಪಾಡುವುದಕ್ಕೆ ಸಂಬಂಧಿಸಿದಂತೆ ನಾಡಿನ ಹಲವು ಮಠಾಧೀಶರಿಗೆ, ಧರ್ಮ ಗುರುಗಳಿಗೆ, ರಾಜಕೀಯ ಪಕ್ಷಗಳ ನಾಯಕರಿಗೆ ಹಾಗೂ ಚಿಂತಕರುಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅವರಿಂದಲೂ ಈಗಾಗಲೇ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಸೌಹಾರ್ದ ಕರ್ನಾಟಕ ವೇದಿಕೆ ಸಂಚಾಲಕ ಎಸ್.ವೈ.ಗುರುಶಾಂತ್ ಹೇಳಿದರು.
ಸಭ್ಯತೆ ಬೆಳೆಸುವ ಕಾರ್ಯಕ್ಕೆ ಅಡ್ಡಿಪಡಿಸುವ ಜಗಳಗಂಟಿತನ ವಿರೋಧಿಸೋಣ. ಶಾಂತಿಯಿಂದ ಅಯೋಧ್ಯೆ ವಿವಾದದ ತೀರ್ಪು ಎದುರಿಸೋಣ.
-ಪ್ರಸನ್ನ ಹೆಗ್ಗೋಡು, ಹಿರಿಯ ರಂಗಕರ್ಮಿ
ತೀರ್ಪು ಕುರಿತಂತೆ ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ, ದೇಶದ ಮುಸ್ಲಿಂ ಸಮುದಾಯದ ಜನರನ್ನು ಮತ್ತಷ್ಟು ಅಭದ್ರತೆ ಕಾಡುತ್ತಿದೆ.
-ಡಾ.ಕೆ.ಶರೀಫಾ, ಕವಯತ್ರಿ