Advertisement

ಆರೋಗ್ಯದ ಬಗ್ಗೆ ಉದಾಸೀನ ಬೇಡ

10:58 AM Aug 05, 2020 | Suhan S |

ಚಾಮರಾಜನಗರ: ಜಿಲ್ಲೆಯ ಜನತೆ ಜ್ವರ, ಕೆಮ್ಮು, ಶೀತ, ಉಸಿರಾಟದಂತಹ ಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೇ ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮನವಿ ಮಾಡಿದ್ದಾರೆ.

Advertisement

ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ ಸೋಂಕಿನಿಂದಾಗಿ 11 ಮಂದಿ ಮೃತಪಟ್ಟಿದ್ದಾರೆ. ಮೃತರಾದವರ ಪೈಕಿ 8 ಮಂದಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದವರಾಗಿದ್ದರು. ಇವರಲ್ಲಿ 3 ಮಂದಿ ಉದಾಸೀನ ತೋರಿ ಆರೋಗ್ಯ ಪರಿಸ್ಥಿತಿ ತೀರ ಹದಗೆಟ್ಟಾಗ ತಡವಾಗಿ ಚಿಕಿತ್ಸೆಗೆ ದಾಖಲಾಗಿದ್ದರು. ಆಸ್ವತ್ರೆಗೆ ಬರುವ ವೇಳೆಗೆ ಪರಿಸ್ಥಿತಿ ಕೈ ಮೀರಿ ಹೋದ ಕಾರಣದಿಂದ ಸಕಾಲಕ್ಕೆ ಚಿಕಿತ್ಸೆ ಫ‌ಲಕಾರಿ ಯಾಗದೇ ನಿಧನ ಹೊಂದಿರುವುದು ವೈದ್ಯಕೀಯ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಚಿಕಿತ್ಸೆಗೆ ಸಲಹೆ ಪಡೆಯಿರಿ: ಪ್ರಸ್ತುತ ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಜ್ವರ, ಶೀತ ಬಾಧಿಸುವುದು ಸಾಮಾನ್ಯವಾಗಿದೆ. ಇದನ್ನು ಉಪೇಕ್ಷೆ ಮಾಡದೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಸಲಹೆ ಪಡೆಯಬೇಕು. ಆರಂಭದಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮುಂದೆ ಹೆಚ್ಚಿನ ಅನಾರೋಗ್ಯದಿಂದ ವಿಕೋಪ ಪರಿಸ್ಥಿತಿಗೆ ತಲುಪುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ವಿಶೇಷ ಕಾಳಜಿ: ಕೋವಿಡ್ ಗೆ ಲಸಿಕೆ ಇಲ್ಲ. ಆದರೆ, ಔಷಧೋಪಚಾರದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗಿದೆ. ಜಿಲ್ಲಾಡಳಿತ ಸೋಂಕಿತರ ಆರೈಕೆಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸಾ ಕ್ರಮಗಳಿಗೆ ಸಕಲ ವ್ಯವಸ್ಥೆ ಕೈಗೊಂಡಿದೆ. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಜ್ವರ, ಉಸಿರಾಟ ತೊಂದರೆ, ಶೀತ, ಕೆಮ್ಮು ಕಾಣಿಸಿಕೊಂಡಲ್ಲಿ ಅಂತಹವರನ್ನು ಗ್ರಾಮ, ವಾರ್ಡ್‌ವಾರು ಟಾಸ್ಕ್ ಫೋರ್ಸ್‌ ಸಮಿತಿಯವರು, ಸ್ವಯಂ ಸೇವಕರು ಗುರುತಿಸಿ ಕೂಡಲೆ ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಕಳುಹಿಸಿಕೊಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next