Advertisement
ಇದರ ಮಧ್ಯೆಯೇ ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಬಗ್ಗೆ ಎಚ್ಚರದಿಂದ ಇರುವಂತೆ ಮತ್ತೂಮ್ಮೆ ಸೂಚನೆ ನೀಡಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತಂಕ ಬೇಡ, ಎಚ್ಚರ ಇರಲಿ ಎಂದಿದ್ದು, ಸದ್ಯ ಶಾಲೆ ಮುಚ್ಚುವುದಿಲ್ಲ, ಲಾಕ್‌ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Related Articles
ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಸಿಎಂ ಹೇಳಿದ್ದಾರೆ. ಕೇರಳದಿಂದ ಬಂದಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 7 ದಿನಗಳ ಅನಂತರ ಮತ್ತೂಮ್ಮೆ ಪರೀಕ್ಷೆ ನಡೆಸಲಾಗುವುದು. ನೆಗೆಟಿವ್ ಬಂದರೂ ಕ್ವಾರಂಟೈನ್ ಮಾಡಲಾಗುತ್ತಿದೆ. ಆದಷ್ಟು ಗುಂಪು ಗೂಡದಂತೆ ನಿಗಾ ವಹಿಸಲಾಗುತ್ತಿದೆ ಎಂದರು.
Advertisement
ವದಂತಿ ಹಬ್ಬಿಸುವವರ ವಿರುದ್ಧ ಕ್ರಮಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಸುಧಾಕರ್ ಮಾತನಾಡಿ, ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಮೊದಲನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಜಾರಿ ಮಾಡಿದ ಪರಿಣಾಮ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. ಅನೇಕರು ಉದ್ಯೋಗಗಳನ್ನು ಕಳೆದುಕೊಂಡರು. ನಮ್ಮ ಮುಂದೆ ಲಾಕ್‌ಡೌನ್ ಮಾಡುವ ಚಿಂತನೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ವದಂತಿಗಳನ್ನು ಹಬ್ಬಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ:ರಾಜ್ಯದಲ್ಲಿ 257ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ: ಐವರು ಸಾವು ಭಿನ್ನ ವೈದ್ಯಕೀಯ ವರದಿ ತಂದ ಆತಂಕ
ಒಮಿಕ್ರಾನ್ ರೂಪಾಂತರಿ ಭೀತಿ ನಡುವೆ ದ. ಆಫ್ರಿಕಾದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬರ ವೈದ್ಯಕೀಯ ವರದಿ ಭಿನ್ನವಾಗಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ| ಸುಧಾಕರ್, ಈ ಪ್ರಕರಣದ ಜಿನೋಮ್ ಸೀಕ್ವೆನ್ಸಿಂಗ್ ವರದಿ ಬರಲು ಒಂದು ವಾರ ಬೇಕು. ಡಿ. 1ರಂದು ವರದಿ ಕೈಸೇರುವ ನಿರೀಕ್ಷೆ ಇದೆ ಎಂದರು. ದ. ಆಫ್ರಿಕಾದಿಂದ ಬಂದ ಹಿರಿಯ ನಾಗರಿಕರಿಗೆ ದೃಢಪಟ್ಟಿರುವ ಸೋಂಕಿನ ಬಗ್ಗೆ ಅಧಿಕೃತವಾಗಿ ಹೇಳಲು ಸಾಧ್ಯವಾಗದು ಎಂದರು. ಎಚ್ಚರ ವಹಿಸಿ: ಡಬ್ಲ್ಯುಎಚ್‌ಒ
ಹೊಸ ರೂಪಾಂತರಿ ವೇಗವಾಗಿ ಹಬ್ಬಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಕೆಲವು ಪ್ರದೇಶಗಳಲ್ಲಿ ಅದು ಗಂಭೀರ ಆರೋಗ್ಯ ಸವಾಲುಗಳನ್ನು ತಂದೊಡ್ಡಲಿದೆ ಎಂದೂ ಹೇಳಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಹೊಸ ರೂಪಾಂತರಿ ತಳಿಯಿಂದಾಗಿ ಅಸುನೀಗಿದ್ದು ಇದುವರೆಗೆ ದೃಢಪಟ್ಟಿಲ್ಲ ಎಂದು ಹೇಳಿದೆ. ಲಾಕ್‌ಡೌನ್ ಇಲ್ಲ
ಲಾಕ್‌ಡೌನ್ ಮಾಡುವುದಿಲ್ಲ ಮತ್ತು ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಒಮಿಕ್ರಾನ್ ರೂಪಾಂತರಿ ತಡೆಯಲು ಸರಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಆದರೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲಿಸಬೇಕು. ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ಬಂದ ಒಬ್ಬರಲ್ಲಿ ವಿಭಿನ್ನ ಸೋಂಕಿನ ಲಕ್ಷಣ ಕಂಡುಬಂದಿರುವ ಹಿನ್ನೆಲೆ ಯಲ್ಲಿ ಗಂಟಲದ್ರವದ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದರು. ಇಂದು ಉನ್ನತ ಮಟ್ಟದ ಸಭೆ
ಹೊಸ ರೂಪಾಂತರಿ ಭೀತಿ ಹಿನ್ನೆಲೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ಸಭೆ ನಡೆಯಲಿದೆ. ಕೊರೊನಾ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ. ಬಳಿಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಮಾಸ್ಕ್ ಬಳಕೆ ಕಡ್ಡಾಯ, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆ ವಿಚಾರದಲ್ಲಿ ಬಿಗಿ ನಿಯಮ ಜಾರಿಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿಗಳು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜತೆಗೆ ಮಾತನಾಡಿದ್ದು, ಅವರನ್ನೂ ಸಭೆಗೆ ಆಹ್ವಾನಿಸಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.