ತುಮಕೂರು: ಕೊರೊನಾ ವೈರಸ್ ಬಗ್ಗೆ ಯಾವುದೇ ಯಾವುದೇ ಭಯ ಬೇಡ, ಆದರೆ ಅಲಸ್ಯ ಮಾಡದೇ ಎಚ್ಚರಿಕೆಯಿಂದ ಎದರಿಸೋಣ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಅಗತ್ಯ ಮುಂಜಾಗ್ರತೆ ಕೈಗೊಂಡಿದೆ, ನಾಗರೀಕರೂ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭಾನುವಾರ ವೈದ್ಯರೊಂದಿಗೆ ಸಭೆ ನಡೆಸಿ ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಮುನ್ನೆಚ್ಚರಿಕೆ ವಹಿಸಿ: ವಿದೇಶಗಳಲ್ಲಿ ಕೋವಿಡ್ -19 ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇದ್ದು, ಇದರ ಬಗ್ಗೆ ಜಾಗೃತಗೊಂಡು ಮುನ್ನೆಚ್ಚರಿಕೆ ವಹಿಸಿದರೆ, ಈ ವೈರಸನ್ನು ತಡೆಯಬಹುದು ಎಂದು ಹೇಳಿದರು.
ವ್ಯಾಪಕವಾಗಿ ಆರೋಗ್ಯ ಜಾಗೃತಿ: ಕೊರೊನಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆದು 100 ರಿಂದ 150 ಹಾಸಿಗೆ ವ್ಯವಸ್ಥೆಯನ್ನು ಕೊರೊನಾ ಸೋಂಕಿತರಿಗೆ ಎಂದು ಮೀಸಲಿಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವ್ಯಾಪಕವಾಗಿ ಆರೋಗ್ಯ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ಸಾರ್ವಜನಿಕರು ಸ್ವಯಂ ಜಾಗೃತರಾಗಿ ಕಾಯಿಲೆ ಇರುವವರ ಬಳಿ ತೆರಳದೆ ಅಂತರ ಕಾಯ್ದುಕೊಳ್ಳಬೇಕು, ಜನರು ಗುಂಪು ಗುಂಪಾಗಿ ಸೇರುವುದನ್ನು ನಿಯಂತ್ರಣ ಮಾಡಬೇಕು, ಹಲವಾರು ಬಾರಿ ಕೈಗಳನ್ನು ತೊಳೆದುಕೊಂಡು ಶುಚಿಯಾಗಿಟ್ಟು ಕೊಳ್ಳಬೇಕು, ಪದೇ ಪದೆ ಕಣ್ಣು, ಮೂಗು, ಬಾಯಿಯನ್ನು ಕೈಗಳಿಂದ ಮುಟ್ಟಿಕೊಳ್ಳಬೇಡಿ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಆಸ್ಪತ್ರೆಯ ಸಹಾಯವಾಣಿ ದೂ: 0816-2278387 ಹಾಗೂ 0816-2251414 ಈ ಸಂಖ್ಯೆಗಳಿಗೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ. ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಬಿ.ಆರ್. ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಹಾಗೂ ಹಿರಿಯ ವೈಧ್ಯಾಧಿಕಾರಿಗಳು ಇದ್ದರು.
ವಿಶ್ವದೆಲ್ಲಡೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ ನಮ್ಮ ಜಿಲ್ಲೆಯಲ್ಲಿ ಯಾರಿಗೂ ಈ ವೈರಸ್ ಹರಡಿಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ, ನಮ್ಮ ದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇದ್ದು, ಇದರ ಬಗ್ಗೆ ಜಾಗೃತಗೊಂಡು ಮುನ್ನೆಚ್ಚರಿಕೆ ವಹಿಸಿದರೆ, ಈ ವೈರಸನ್ನು ತಡೆಯಬಹುದು, ನಗರದ ನಾಗರಿಕರು ಈ ವೈರಸ್ ಬಗ್ಗೆ ಭಯ ಬೇಡ ಸ್ವಚ್ಛತೆ ಕಾಪಾಡಿ, ಜಾಗೃತವಾಗಿ ಇರಿ ಸದಾ ಕೈ ತೊಳೆಯಿರಿ ನಿರಂತರ ಕೆಮ್ಮು, ನೆಗಡೆ ಜ್ವರ ಬಂದರೆ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆಯಿರಿ.
-ಜಿ.ಬಿ.ಜ್ಯೋತಿಗಣೇಶ್, ಶಾಸಕ