ಈ ಅಮ್ಮ ಬಸಮ್ಮ, ಕಾಯಕನಿಷ್ಠೆಯ ಪ್ರತಿನಿಧಿ. ದುಡಿದೇ ಉಣ್ಣಬೇಕೆಂಬ ಹಟದಾಕಿ! ವಯಸ್ಸು 80ರ ಆಸುಪಾಸು. ಊರು ಧಾರವಾಡ ತಾಲೂಕಿನ ಜೋಗೆಲ್ಲಾಪುರ. ಇಬ್ಬರು ಹೆಣ್ಣುಮಕ್ಕಳ ತಾಯಿ. ಅವರಿಗೆ 50-60ರ ಆಸುಪಾಸು.. ಕೃಷಿಕ ಮನೆತನ.
ಈ ಅವ್ವ, ಜಿಲ್ಲಾಧಿಕಾರಿ ಕಚೇರಿ ಆವರಣದ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ನ ಎದುರು, ಎಡಬದಿಯ ಫುಟ್‌ಪಾತ್ ಮೇಲೆ ನಿತ್ಯ ಹಣ್ಣು, ಕಾಯಿಪಲ್ಯ ಮಾರುತ್ತಾರೆ. ಗೋಣು, ಕೈ ಸಂಪೂರ್ಣ ಅಲುಗಾಡುತ್ತವೆ. ಬೊಚ್ಚುಬಾಯಿಯ ಅಮ್ಮನ ಮಾತೂ ಅದರುತ್ತವೆ..
“ಮನ್ಯಾಗ ಕುಂತ್ರ ಹೊತ್ತ ಹೋಗೋದಿಲ್ಲ ನನ್ನಪ್ಪ; ಮಗಳ ಕೂಡ ಬರ್ತೇನಿ. ಕೈ ಹಿಡಿದು ಕರ್ಕೊಂಡ ಬರ್ತಾಳು. ಇಡೀ ದಿನ ಕುಂತ ವ್ಯಾಪಾರ ಮಾಡ್ತೇನಿ. ಊಟದ ಡಬ್ಬಿ ಕಟಕೊಂಡ ಬರ್ತೇವಿ. ಮಗಳು ಅಲ್ಲಿ ಕುಂತ ಉಣತಾಳು.. ನಾ ಇಲ್ಲೇ ಕುಂತ ಉಣತೇನಿ.. ಒಮ್ಮೊಮ್ಮೆ ಕೂಡಿ ಉಣ್ತೆವಿ.. ಸಂಜಿ 7ಕ್ಕ ಹೊತ್ತ ಮುಗಿಸಿ ಹೊರಡತೇವಿ ಊರಿಗೆ. ದುಡಿ ದುಡದ ಸವೆಯೋದ ನೋಡ್ರಿ..’ ಅಂದ್ರು ಅಮ್ಮ.
ಬಡತನ ಅವ್ವನ್ನ ಎಷ್ಟು ಗಟ್ಟಿ ಮಾಡೇತಿ ಅಂದ್ರ, ಅದು ಅವರ ಮುಂದ ಬಾಗಿ ನಿಂತಿದ್ದು ಕಂಡೆ! ಬಸಮ್ಮ ಎಂಬ ಪ್ರತಿಮೆಯ ಕಾಣ್ಕೆ ಇದು. ಆ ಪ್ರೀತಿ, ಕಕ್ಕುಲಾತಿ, ಮೊಗದ ನಗು, ಖರೀದಿದಾರರಿಗೆ ನಷ್ಟವಾಗಬಾರದು ಎಂಬ ಕಾಳಜಿ, ಕಷ್ಟಪಟ್ಟು ಮಾತಾಡಿ ವ್ಯಾಪಾರ ಕುದುರಿಸುವ ಪರಿ, ನನಗೆ ಅಭಿಮಾನ ತಂದಿತು. “ಎರಡ ರೂಪಾಯಿ ಉಳಸ್ರಿ ನನಗ’ ಅಂದ ಮಾತು ಅಲುಗಾಡಿಸಿ ಬಿಟ್ಟಿತು, ನನ್ನ ಮತ್ತು ನನ್ನ ಶ್ರೀಮತಿಯನ್ನ..
ನೀವು ಈ ಕಡೆ ಬಂದ್ರ, ದಯವಿಟ್ಟು ಈ ನಮ್ಮ ಅವ್ವನ ಮಾತಾಡಸ್ರಿ, ಏನ್ ಬೇಕು ಖರೀದಿಸ್ರಿ. ಚೌಕಾಸಿ ಮಾಡಬ್ಯಾಡ್ರಿ.. ಈ ವಯಸ್ಸಿನಾಗೇನ ಬೇ ದುಡಿಮಿ..ಅರಾಮ ಮನ್ಯಾಗ ಮೊಮ್ಮಕ್ಕಳ ಕೂಡ ಇರಬಾರದ ಅನ್ನಬ್ಯಾಡ್ರಿ.. ಮೊಮ್ಮಕ್ಕಳಿಗೆ ಟೈಮ್ ಇಲ್ಲ.. ಕಾಲೇಜು ಮೆಟ್ಟಿಲು ಹತ್ಯಾರ.. ಓದಸಾಕ ಅಜ್ಜಿ ದುಡೀತಾರ!
ಬಸವ ತತ್ವ ಬಸಮ್ಮಗ ಚರ್ಮ ಆಗೇತಿ. ಬಹುತೇಕರಿಗೆ ನಾಲಗಿ ಆದ್ಹಾಂಗ. ಇಂತಹ ಶರಣರ ಪಾದದ ಕೆಳಗೆ ಎನ್ನ ಕೆರವಾಗಿರಿಸಲಿ ಕೂಡಲ ಸಂಗಮನಾಥ.. “ನಿಮಗ ನೂರ ವರ್ಷ ಆಗಲಿ ಅವ್ವ’ ಅಂದೆ.. ನಕ್ಕು ಹಣಿ ಜಜ್ಜಿಕೊಂಡ್ರು ಬಸಮ್ಮ.. “ಶೇಂಗಾಕ ಚೀಲಾ ಹಿಡೀರಿ’ ಅಂದ್ರು. ಮನಸಾರೆ ತೂಗಿ ಮನವನ್ನೂ ತುಂಬಿದರು..
ಈಗಿಲ್ಲದ, ನನ್ನ ನೆರಳಲ್ಲಿಟ್ಟು ಹೋದ ನನ್ನ ಅಮ್ಮಂದಿರು ಕ್ಷಣ ಕಣ್ಣ ಮುಂದೆ ಬಂದು, ದೃಷ್ಟಿಪಥ ಮಂಜಾಯಿತು.. ಅವರಿನ್ನೂ ಬದುಕಿದ್ದಾರೆ ಅನಿಸಿತು..
* ಹರ್ಷವರ್ಧನ ವಿ. ಶೀಲವಂತ