ಹೊಸದಿಲ್ಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಂಸದೀಯ ಪಕ್ಷದ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಮೋದಿ, ರಾಹುಲ್ ಗಾಂಧಿ ರೀತಿ ಎನ್‌ಡಿಎ ಸಂಸದರು ವರ್ತಿಸುವುದು ಬೇಡ. ಬದಲಿಗೆ ಸತ್ಯ ಸಂಗತಿಗಳೊಂದಿಗೆ ಉತ್ತರ ನೀಡಬೇಕು ಎಂದು ಕಿವಿಮಾತು ಹೇಳಿದರು. ಎನ್‌ಡಿಎ ಸಂಸದರು ಸಂಸ ದೀಯ ನಿಯಮಗಳನ್ನು ಪಾಲಿಸಬೇಕು ಮತ್ತು ಉತ್ತಮ ನಡವಳಿಕೆಯನ್ನು ಪ್ರದರ್ಶಿಸಬೇಕು. ವಿಪಕ್ಷದ ನಾಯಕ ರಾಹುಲ್ ಗಾಂಧಿ ಅತ್ಯಂತ ಬೇಜವಾಬ್ದಾರಿ ಭಾಷಣ ಮಾಡಿದ್ದಾರೆಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಹೊಸ ಸದಸ್ಯರಿಗೆ ಸಂಸತ್ ಬಗ್ಗೆ ತಿಳಿದು ಕೊಳ್ಳಬೇಕು ಎಂದರೆ ಅವರು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಬೇಕು ಮತ್ತು ಅವರ ಜೀವನ ಪಯಣದಿಂದ, ಅವರ ಅನುಭವದಿಂದ ಹೊಸದನ್ನು ಕಲಿತುಕೊಳ್ಳಬೇಕು ಎಂದು ಮೋದಿ ಹೇಳಿದರೆನ್ನಲಾಗಿದೆ.
ಬಾಲಕ ಬುದ್ಧಿಯ ವಿಪಕ್ಷ ನಾಯಕ: ರಾಹುಲ್‌ಗೆ ಮೋದಿ ಪರೋಕ್ಷ ಟೀಕೆ
ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಸಂಸತ್‌ನಲ್ಲಿ ಮಾಡಿದ ಭಾಷಣಕ್ಕೆ ಪ್ರಧಾನಿ ಮಂಗಳವಾರ ತಿರುಗೇಟು ನೀಡಿದ್ದಾರೆ. ರಾಹುಲ್ ಅವರನ್ನು ಪರೋಕ್ಷವಾಗಿ “ಬಾಲಕ ಬುದ್ಧಿ’ ಎಂದು ಕರೆದಿದ್ದಾರೆ. “ಚಿಕ್ಕ ಮಕ್ಕಳ ಹಾಗೆ ಅವರು ನನಗೆ ಹೊಡೆದರು, ಇವರು ಹೊಡೆದರು, ನನಗೆ ಇಲ್ಲಿ ನೋವಾಗಿದೆ, ಅಲ್ಲಿ ನೋವಾಗಿದೆ ಎಂದು ಕಾಂಗ್ರೆಸ್ ಅನುಕಂಪ ಸೃಷ್ಟಿಸಿಕೊಳ್ಳಲು ನಾಟಕವಾಡುತ್ತಿದೆ. ಬೆಳೆದು ದೊಡ್ಡವರಾಗಿದ್ದರೂ ಕೆಲವರು ಮಕ್ಕಳಂತೆ ವರ್ತಿಸುತ್ತಾರೆ’ ಎಂದರು. ದೇಶ ಆ ನಾಯಕರ ಬಗ್ಗೆ ಚೆನ್ನಾಗಿ ಅರಿತುಕೊಂಡಿದೆ. ಹೀಗಾಗಿ ನಿನ್ನಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಅವರಿಗೆ ನೀಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಹೇಳಿದ 3 ಪುಟ ಕಥೆ
ಕಾಂಗ್ರೆಸ್ ಕುರಿತು ಮೋದಿ ಸ್ವಾರಸ್ಯದ ಸಂಗತಿ ಹಂಚಿಕೊಂಡರು. ಮಗು ಸೈಕಲ್‌ನಿಂದ ಬಿದ್ದಾಗ, ಚೆನ್ನಾಗಿ ಸೈಕಲ್ ಓಡಿಸುತ್ತಿ. ಬಿದ್ದಿದ್ದಕ್ಕೆ ಬಹಳ ಚಿಂತಿಸಬೇಡ. ಕೇವಲ ಒಂದು ಇರುವೆ ಸತ್ತಿದೆ ಎಂದು ದೊಡ್ಡವರು ಮಗುವಿಗೆ ಸಮಾಧಾನ ಪಡಿಸುತ್ತಾರೆ. ಸದ್ಯ ಕಾಂಗ್ರೆಸ್‌ನದ್ದು ಇದೇ ಸ್ಥಿತಿಯಾ ಗಿದೆ. ಪರೀಕ್ಷೆಯಲ್ಲಿ 99 ಅಂಕ ಪಡೆದ ಮಗು ಸಿಹಿ ಹಂಚುತ್ತಿತ್ತು. ಆದರೆ ಮಗು 100ರ ಬದಲು 543ಕ್ಕೆ 99 ಅಂಕ ಪಡೆದಿರುವುದನ್ನು ಹೇಳಿರಲಿಲ್ಲ. ಇನ್ನೊಂದು ಸಂಗತಿ, ಶಾಲೆಯಲ್ಲಿ ಹೊಡೆದರೆಂದು ಮಗು ಅಳುತ್ತಾ ತಾಯಿಯ ಬಳಿ ಬಂದಿತ್ತು. ಆದರೆ ತಾನೇ ಎಲ್ಲರ ಊಟದ ಡಬ್ಬಿ ಕದ್ದಿರುವುದಾಗಿ ಚಿಂತಿಸುತ್ತಿರುವ ತಾಯಿಗೆ ಹೇಳಿರಲಿಲ್ಲ ಎಂದು ಮೋದಿ ಹೇಳಿದರು.