ಉಜ್ಜೆ„ನ್: ನಿಮಗೊಂದು ವಿಷಯ ಗೊತ್ತಾ? ಗುರ್ಮೀತ್ ಸಿಂಗ್ 9 ಸಾವಿರ ರೂ.ಗೆ, ಹನಿಪ್ರೀತ್ ಇನ್ಸಾನ್ 11 ಸಾವಿರ ರೂ.ಗೆ ಸೇಲ್ ಆಗಿದ್ದಾರೆ!
ಇನ್ನು ಸುಲ್ತಾನ್, ಬಾಹುಬಲಿ, ಜಿಯೋ ಕೂಡ ಮಾರಾಟಕ್ಕಿದ್ದು, ಬೇಗ ಹೋದರೆ ನೀವೂ ಖರೀದಿಸಬಹುದು. ಅಚ್ಚರಿಯಾಗ್ತಾ ಇದ್ಯಾ? ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮೀತ್ ಸಿಂಗ್, ಹಿಂಸಾಚಾರದ ಆರೋಪದಲ್ಲಿ ಜೈಲು ಸೇರಿರುವ ಹನಿಪ್ರೀತ್ ಮಾರಾಟ ಆಗಿದ್ದಾದರೂ ಹೇಗೆ ಎಂದು ಯೋಚಿಸುತ್ತಿದ್ದೀರಾ?
ಇದು ಅವರಲ್ಲ. ಆ ಹೆಸರಿನ ಕತ್ತೆಗಳು. ಹೌದು, ಮಧ್ಯಪ್ರದೇಶದ ದೇಗುಲಗಳ ನಗರ ಉಜ್ಜೆ„ನ್‌ನಲ್ಲಿ ವಾರ್ಷಿಕ “ಕತ್ತೆ ಉತ್ಸವ’ ನಡೆಯುತ್ತಿದ್ದು, ಎಂದಿನಂತೆ ಈ ವರ್ಷವೂ ಮಾರಾಟಕ್ಕಿರುವ ಕತ್ತೆಗಳಿಗೆ ವಿಶಿಷ್ಟ ಹೆಸರು ಗಳನ್ನು ಇಡಲಾಗಿದೆ. ಡೀಲ್ ಕುದುರಿ ಸಲು ಫ್ಯಾನ್ಸಿ ಹೆಸರುಗಳನ್ನಿಡುವುದು ಈ ಉತ್ಸವದ ವೈಶಿಷ್ಟé. ಅದರಂತೆ, ಈ ಬಾರಿ ಕತ್ತೆಗಳಿಗೆ “ಗುರ್ಮೀತ್ ಸಿಂಗ್’, “ಹನಿಪ್ರೀತ್,’ “ಜಿಯೋ’, “ಜಿಎಸ್‌ಟಿ’, “ಸುಲ್ತಾನ್’, “ಬಾಹುಬಲಿ’ ಎಂದೆಲ್ಲ ನಾಮಕರಣ ಮಾಡಲಾಗಿದೆ. ಪ್ರತಿ ಕತ್ತೆಯ ಕತ್ತಿನಲ್ಲೂ ಅವುಗಳ ಹೆಸರನ್ನು ನೇತು ಹಾಕಲಾಗಿದೆ.
ವಿಶೇಷವೆಂದರೆ, ರಾಜಸ್ಥಾನದ ವ್ಯಾಪಾರಿ ಯೊಬ್ಬರು ಗುರ್ಮೀತ್ ಮತ್ತು ಹನಿಪ್ರೀತ್ ಹೆಸರಿನ ಕತ್ತೆಗಳನ್ನು ಒಟ್ಟು 20 ಸಾವಿರ ರೂ. ನೀಡಿ ಖರೀದಿಸಿದ್ದಾರೆ. ಕತ್ತೆಗಳ ಮಾಲೀಕ ಹರಿಓಂ ಪ್ರಜಾಪತ್ ಜತೆ ಮಾತಾಡಿಸಿ, ಈ ಹೆಸರುಗಳನ್ನೇಕೆ ಕತ್ತೆಗಳಿಗೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರೆ, “ಮಾಡಿದ ಪಾಪಗಳಿಗೆ ತಕ್ಕ ಶಿಕ್ಷೆ ಅನುಭವಿಸಲೇಬೇಕು ಎಂದು ಗುರ್ಮೀತ್ ಮತ್ತು ಹನಿಪ್ರೀತ್‌ಗೆ ಸಂದೇಶ ಕಳುಹಿಸಬೇಕಿತ್ತು, ಅದಕ್ಕೆ ಈ ಹೆಸರಿಟ್ಟೆ’ ಎಂದಿದ್ದಾರೆ.