ವಿಜಯಪುರ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಡೋಣಿ ನದಿ ಪ್ರವಾಹ ಸೃಷ್ಟಿಸಿದ್ದು, ನದಿ ದಾಟುವ ವೇಳೆ ಟ್ರ್ಯಾಕ್ಟರ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಟ್ರಾಕ್ಟರ್ ನಲ್ಲಿದ್ದ ಇಬ್ಬರು ಈಜಿ ದಡ ಸೇರಿದ ಘಟನೆ ಸೋಮವಾರ ಜರುಗಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಹರಿಯುವ ಡೋಣಿ ನದಿಯಲ್ಲಿ ಡಬಲ್ ಟ್ರಾಲಿ ಸಹಿತ ಟ್ರ್ಯಾಕ್ಟರ್ ಕೊಚ್ಚಿಕೊಂಡು ಹೋಗಿದೆ. ತಾಳಿಕೋಟೆಯ ರಾಜು ಬೀಳಗಿ ಎಂಬವರಿಗೆ ಸೇರಿದ ಟ್ರ್ಯಾಕ್ಟರ್ ಇಂಜಿನ್ ಹಾಗೂ ಎರಡು ಟ್ರಾಲಿ ಸಹಿತ ಕೊಚ್ಚಿಕೊಂಡು ಹೋಗಿದೆ.
ಕೊಚ್ಚಿ ಹೋಗಿದ್ದ ಟ್ರ್ಯಾಕ್ಟರ್ ಇಂಜಿನ್ ಅನ್ನು ರೈತರು ಹಗ್ಗ ಕಟ್ಟಿ ಜೆಸಿಬಿ ಮೂಲಕ ಹೊರ ತೆಗೆದಿದ್ದಾರೆ.
ಕಡಕೋಳ ಗ್ರಾಮದಿಂದ ಡೋಣಿ ನದಿ ದಾಟಿ ಕೊಂಡಗೂಳಿಗೆ ಹೊರಟಿದ್ದ ವೇಳೆ ಘಟನೆ ಜರುಗಿದೆ. ಟ್ರ್ಯಾಕ್ಟರ್ ಜೊತೆಯಲ್ಲಿ ನದಿಯಲ್ಲಿ ಸಿಲುಕಿದ್ದ ರಾಜೂ ಬೀಳಗಿ ಹಾಗೂ ಮನ್ಸೂರ್ ಬೀಳಗಿ ಇವರು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಕಡಕೋಳ ಮಾರ್ಗವಾಗಿ ಸೇತುವೆ ಇಲ್ಲದ ನದಿಯಲ್ಲಿ 200 ಮೀಟರ್ ದಾಟಿದರೆ 1 ಕಿ.ಮೀ. ಮೀಟರ್ ಅಂತರದಲ್ಲಿ ರೈತರ ಜಮೀನುಗಳಿವೆ. ಈ ಮಾರ್ಗದ ಹೊರತಾಗಿ ರೈತರು ನದಿ ದಾಟಲು ಸುಮಾರು 30 ಕಿ.ಮೀ. ಸುತ್ತುವರಿದು ಬರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ರೈತರು ಜೀವದ ಹಂಗು ತೊರೆದು ತುಂಬಿ ಹರಿಯುವ ನದಿಯಲ್ಲೇ ದಾಟಲು ಯತ್ನಿಸುತ್ತಾರೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಡೋಣಿ ನದಿ ದಾಟಲು ರೈತರು ಪರದಾಟ ನಡೆಸುವಂತಾಗಿದೆ. ಹೀಗಾಗಿ ಡೋಣಿ ನದಿಗೆ 200ಮೀಟರ್ ಸೇತುವೆ ನಿರ್ಮಿಸಬೇಕು ಎಂದು ರೈತರ ಆಗ್ರಹಿಸಿದ್ದಾರೆ.