ಭಾಲ್ಕಿ: ತಾಲೂಕಿನ ಗಡಿ ಭಾಗದ ಮೇಹಕರ್ ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ದಾನಿಯೊಬ್ಬರು ನಿವೇಶನ ದೇಣಿಗೆ ನೀಡಿದ್ದಾರೆ. ಗ್ರಾಮದ ಕನ್ನಡದ ಅಭಿಮಾನಿ ಆಗಿರುವ ಸಿದ್ರಾಮಯ್ಯ ವೀರುಪಾಕ್ಷಯ್ಯ ಪುರಾಣಿಕ ಅವರು ಸ್ವಇಚ್ಛೆಯಿಂದ ಕನ್ನಡ ಭವನಕ್ಕೆ ಬೇಕಿರುವ ನಿವೇಶನ ಕೊಡುವುದಾಗಿ ಕರಾರು ಪತ್ರ ಬರೆದು ಕೊಟ್ಟಿದ್ದಾರೆ.
ಮೆಹಕರನಲ್ಲಿ ಮುಂದೆ ನಿರ್ಮಾಣ ಆಗುವ ಕನ್ನಡ ಭವನಕ್ಕೆ ವೀರುಪಾಕ್ಷಯ್ಯ ಪುರಾಣಿಕ ಸ್ಮರಣಾರ್ಥ ಎಂದು ನಾಮಕರಣ ಮಾಡುವಂತೆ ಬರೆದ ಕರಾರು ಪತ್ರವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಭೂಷಣ ಮಾಮಡಿ ಮತ್ತು ಗೌರವ ಕಾರ್ಯದರ್ಶಿ ರಮೇಶ ಚಿದ್ರಿ ಮೂಲಕ ರಾಜ್ಯಾಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ.
ಕರಾರು ಪತ್ರ ಸ್ವೀಕರಿಸಿದ ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಗಡಿ ಭಾಗದ ಮೇಹಕರ್ ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ ಆಗಬೇಕು ಎನ್ನುವುದು ಬಹುದಿನಗಳ ಬೇಡಿಕೆ ಆಗಿತ್ತು. ಆದರೆ, ಇಷ್ಟು ದಿನ ನಿವೇಶನ ಕೊರತೆಯಿಂದ ಆ ಬೇಡಿಕೆ ಕಾರ್ಯಗತ ಆಗಲಿಲ್ಲ. ಇದೀಗ ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ ಸಿದ್ರಾಮಯ್ಯ ವೀರುಪಾಕ್ಷಯ್ಯ ಪುರಾಣಿಕ ಅವರು ನಿವೇಶನ ನೀಡಲು ಮುಂದೆ ಬಂದಿರುವುದು ಖುಷಿ ತಂದು ಕೊಟ್ಟಿದೆ. ಜಿಲ್ಲಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟು ಆದಷ್ಟು ಬೇಗ ಈ ಭಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಹಣಮಂತ ಚಿದ್ರಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಷಡಕ್ಷರಿ ಹಿರೇಮಠ, ಗ್ರಾಮದ ಪ್ರಮುಖರಾದ ಧನರಾಜ ಮಂಗಣೆ, ಶಿವಪುತ್ರ ಯಾಲಾ, ಬಸವರಾಜ ಮಂಗಣೆ, ಪ್ರಭು ಮಂಗಣೆ, ಬಸವರಾಜ ಬಡದಾಳೆ, ಶಿವರಾಜ ಮೇಹತ್ರೆ, ಸಂತೋಷ ಸ್ವಾಮಿ ಇದ್ದರು.
ಗಡಿಯಲ್ಲಿ ಕನ್ನಡ ಮಾತನಾಡುವವರೇ ಕಮ್ಮಿ ಇರುವಾಗ, ಕನ್ನಡಾಭಿಮಾನಿಗಳು ನಿರಂತರ ಕನ್ನಡ ಕಾರ್ಯ ನಡೆಯುವ ನಿಟ್ಟಿನಲ್ಲಿ ದೇಣಿಗೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಕನ್ನಡಕ್ಕಾಗಿ ತನು ಮನ ಧನ ಅರ್ಪಿಸುವ ಕನ್ನಡಾಭಿಮಾನಿಗಳಿಗೆ ಗೌರವ ಪೂರ್ವಕ ಅಭಿನಂದನೆಗಳು.
-ನಾಗಭೂಷಣ ಮಾಮಡಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ