ಕಸ್ಬಾಬೆಂಗ್ರೆ: ಸಂಕಷ್ಟದಲ್ಲಿರುವ ಜನರ ನೋವನ್ನು ಅರಿತು ಅವರ ನೋವಿನಲ್ಲಿ ಪಾಲ್ಗೊಂಡು ಸಹಾಯ ಮಾಡುವುದೇ ನಿಜವಾದ ಧರ್ಮ. ಪ್ರಾರ್ಥನೆ ಮಾಡುವ ತುಟಿಗಳಿಗಿಂತ ದಾನ ಮಾಡುವ ಕೈಗಳೇ ಶ್ರೇಷ್ಠವಾದದು ಎಂದು ತಣ್ಣೀರುಬಾವಿ ಫಾತಿಮಾ ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಅಲ್ಬನ್ ಡಿ’ ಸೋಜಾ ಹೇಳಿದರು.
ಅವರು ಬುಧವಾರ ಮಂಗಳೂರಿನ ಸಮುದ್ರ ಕಿನಾರೆಯ ಭಾಗವಾಗಿರುವ ಕಸ್ಬಾ ಬೆಂಗ್ರೆಯಲ್ಲಿ ಮುಸ್ಲಿಂ ಸಮಾಜದ ಬಡ ಯುವತಿಯ ಮದುವೆಗಾಗಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಸಹಾಯಧನ ನೀಡುವ “ಕಣ್ತೆರೆದು ನೋಡು ಗೆಳೆಯ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತ ನಾಡಿದ ಅವರು, ಪ್ರತಿಯೊಬ್ಬರು ಪರಸ್ಪರರನ್ನು ಅರಿತು ಜೀವಿಸಿದರೆ ಅದರಿಂದ ಸಮಾಜಕ್ಕೂ ಒಳಿತು ಹಾಗೂ ರಾಷ್ಟ್ರಕ್ಕೂ ಒಳಿತು. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಾದಿ ಕ್ರೈಸ್ತರ ವೇದಿಕೆಯು ಇಟ್ಟಿರುವ ಹೆಜ್ಜೆಯು ಇತರರಿಗೆ ಮಾದರಿಯಾಗಲಿ ಹಾಗೂ ಸಾಮರಸ್ಯದ ನಿಜವಾದ ಕೃತಿಯಾಗಿ ಮೂಡಿಬಂದು ಬಾನಂಗಳದ ಸೂರ್ಯನಂತೆ ಸದಾ ಪ್ರಜ್ವಲಿಸಲಿ.
ಈ ರೀತಿಯ ಕಾರ್ಯಕ್ರಮಗಳು ಅವಿರತವಾಗಿ ನಡೆದಾಗ ನಮ್ಮ ದೇಶದಲ್ಲಿ ನಿಜಕ್ಕೂ ಸಾಮರಸ್ಯ ಮೂಡುವುದು ಹಾಗೂ ಎಲ್ಲ ಜಾತಿ-ಮತ- ಪಂಥದವರು ಇದನ್ನು ಅರ್ಥಮಾಡುವ ಆವಶ್ಯಕತೆಯಿದೆ ಎಂದರು. ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ, ಜನಸೇವೆಯೇ, ಜನಾರ್ದನ ಸೇವೆ ಎಂಬಂತೆ ಈ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತೋಷವಾಗಿದೆ. ಸರ್ವ ಸಮಾಜ ಹಾಗೂ ಸರ್ವ ಪಕ್ಷಗಳ ಪ್ರಮುಖರನ್ನು ಸೇರಿಸಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.ವೇದಿಕೆ ಸ್ಥಾಪಕ ಫ್ರಾಂಕ್ಲಿನ್ ಮೊಂತೆರೊ ಪ್ರಸ್ತಾವನೆಗೈದು, ಫಲಾನುಭವಿ ಯುವತಿಯ ಮನೆಯ ಪರಿಸ್ಥಿತಿಯನ್ನು ವಿವರಿಸಿದರು.
ಕಸ್ಬಾ ಬೆಂಗರೆ ಕಿಲೇರಿ ಮಸೀದಿಯ ಖತೀಬರಾದ ನಾಸಿರ್, ಬೆಂಗರೆ ಮೊನೈಯಿದ್ದೀನ್ ಮಸೀದಿಯ ಖತೀಬರಾದ ಅಬ್ದುಲ್ಲ, ಮುಸ್ಲಿಂ ಸಮಾಜದ ಪ್ರಮುಖರಾದ ಸಮದ್, ಹಸನ್, ಇಬ್ರಾಹಿಂ, ಹಂಝ, ಬಿಜೆಪಿಯ ಮೀನುಗಾರರ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ನವೀನ್ ತಣೀ¡ರುಬಾವಿ ಹಾಗೂ ಬಿಜೆಪಿ ಕಾರ್ಯಕರ್ತ ಸಲೀಂ ಬೆಂಗ್ರೆ, ವೇದಿಕೆಯ ಪ್ರಮುಖರಾದ ಪ್ರಕಾಶ್ ಡಿ’ಸೋಜಾ, ವಿಜಯ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು. ಮಾಧ್ಯಮ ಪ್ರಮುಖ್ ರೋಶನ್ ಡಿ’ಸೋಜಾ ಅಶೋಕನಗರ ವಂದಿಸಿದರು.