ಸವದತ್ತಿ: ಮರಣದ ನಂತರವೂ ಸಮಾಜಕ್ಕೇನಾದರೂ ಕೊಡುಗೆ ನೀಡಬೇಕೆಂದಲ್ಲಿ ದೇಹದಾನ ಮಾಡಿರೆಂದು ಕೆಎಲ್‌ಇ ಶರೀರ ರಚನೆ ವಿಭಾಗದ ಮುಖ್ಯಸ್ಥರು ಹಾಗೂ ಬೈಲಹೊಂಗಲ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಕಾರ್ಯದರ್ಶಿ ಡಾ| ಮಹಾಂತೇಶ ರಾಮಣ್ಣವರ ಹೇಳಿದರು.
ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ 11ನೇ ಶರಣ ಸಂಗಮದಲ್ಲಿ ಸಾಧಕರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಗನಾಗಿ ನನ್ನ ತಂದೆಯ ಆಶಯದಂತೆ ಅವರ ದೇಹವನ್ನು ನಾನೇ ಛೇದನ ಮಾಡಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದೇನೆ. ನೇತ್ರದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಕುರುಡರಾಗಿ ಹುಟ್ಟುತ್ತೇವೆಂಬ ಮೂಢನಂಬಿಕೆಗಳು ನಮ್ಮಲ್ಲಿವೆ. ಇವೆಲ್ಲ ಬಿಟ್ಟು ಸಾಗುತ್ತಿರುವ ಜಗತ್ತನ್ನು ವೀಕ್ಷಿಸಲು ಸಾಧ್ಯವಾದಷ್ಟು ಸಹಕರಿಸಿ. 18 ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಬಹುದು. ರಕ್ತದಾನದಿಂದ ಹೃದಯ ಸಂಬಂಧಿ ಕಾಯಿಲೆ ಕಡಿಮೆ ಮಾಡಬಹುದು.
ಸಾವಿನ ಆಚೆ, ನೇತ್ರ, ಚರ್ಮ, ದೇಹ, ಅಂಗಾಂಗ ದಾನ ಮಾಡಿ. ಗೋಕಾಕ, ಅಥಣಿ, ಬೈಲಹೊಂಗಲ, ಸವದತ್ತಿಯ ಜನತೆ ಇದೀಗ ದೇಹದಾನಕ್ಕೆ ಇಚ್ಛೆ ವ್ಯಕ್ತಪಡಿಸುತ್ತಿರುವದು ಸಂತಸ ತಂದಿದೆ ಎಂದರು. ಲಿಂಗಾಯತ ಧರ್ಮಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಧೀರ ವಾಲಿ ಮಾತನಾಡಿದರು. ಮಹಾನಂದಾ ಶಿರಸಂಗಿ, ಸಂಜನಾ ಮನೋಹರ ಶರಣ ಸಂಗಮದ ದಾಸೋಹಿಗಳಾಗಿದ್ದರು. ಈ ವೇಳೆ ಎಲ್. ಎಸ್. ನಾಯಕ, ಅನಿಲ ಶಿರಸಂಗಿ, ಬಸವರಾಜ ಕಪ್ಪಣ್ಣವರ, ಹಣಮಂತ ಟಪಾಲ, ನಿಂಗಪ್ಪ ಮೇಟಿ, ಲಿಂಗರಾಜ ಶಿರಸಂಗಿ, ಯ.ರು. ಪಾಟೀಲ, ಬಸವರಾಜ ಲಿಂಗಾಯತ, ಲಕ್ಷ್ಮೀ ಎಮ್. ಆರಿಬೆಂಚಿ, ಬಸವರಾಜ ಪುಟ್ಟಿ, ಕಸ್ತೂರಿ ಹೂಲಿ, ಗಣೇಶ ಸೋಗಿ ಮತ್ತು ಪ್ರಮುಖರು ಇದ್ದರು.