ಹಾವೇರಿ: ಕೋವಿಡ್ ಸೋಂಕಿತರಿಗೆ ಅಗತ್ಯವಾದ ಕೋವಿಡ್ ಇಂಜೆಕ್ಷನ್, ಔಷಧ ಕಿಟ್, ಪಂಚಾಮೃತ ಕಿಟ್ ಸೇರಿದಂತೆ ರೋಗ ನಿರೋಧಕ ಶಕ್ತಿ(ಇಮ್ಯೂನಿಟಿ) ಹೆಚ್ಚಿಸುವ ಲಕ್ಷಾಂತರ ರೂ. ಮೌಲ್ಯದ ಔಷಧಗಳನ್ನು ದಾನಿಯೊಬ್ಬರು ಉಚಿತವಾಗಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಹಿರಿಯರ ನುಡಿಯಂತೆ ಸಾಗಾಣಿಕೆ ವೆಚ್ಚ ನಿರೀಕ್ಷಿಸದೇ ದಾನವಾಗಿ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ, ತಮ್ಮ ಹೆಸರನ್ನು ಬಹಿರಂಗವಾಗಿ ಪ್ರಕಟಿಸದಂತೆ ಮನವಿ ಮಾಡಿಕೊಂಡಿರುವ ಅಪರೂಪದ ಈ ವ್ಯಕ್ತಿ ಲಾರಿಯಲ್ಲಿ ಅಂದಾಜು 30 ರಿಂದ 35 ಲಕ್ಷ ರೂ.ಗೂ ಅಧಿಕ ಮೌಲ್ಯದ ಜೀವ ರಕ್ಷಕ ಕೋವಿಡ್ ಔಷಧಗಳು, ಕೋವಿಡ್ ಸುರಕ್ಷತಾ ಸಾಮಗ್ರಿಗಳನ್ನು ಕಳುಹಿಸಿದ್ದಾರೆ.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಗುರುವಾರ ದಾನಿಗಳು ಕಳುಹಿಸಿಕೊಟ್ಟ ಔಷ ಧ ಸಾಮಗ್ರಿಗಳನ್ನು ಸ್ವೀಕರಿಸಿ, ದಾನಿಗಳಿಗೆ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಜಿಲ್ಲೆಗೆ ಅಗತ್ಯವಾದ ಔಷಧ, ಇಮ್ಯೂನಿಟಿ ಹೆಚ್ಚಿಸುವ ಪಂಚಾಮೃತ ಕೀಟ್, ಮಾತ್ರೆಗಳ ಕಿಟ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೆಸರು ಹೇಳಲಿಚ್ಛಿಸದ ದಾನಿಯೊಬ್ಬರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಇದು ಜಿಲ್ಲೆಗೆ ಸಂತಸದ ವಿಷಯವಾಗಿದೆ ಎಂದು ಕೃತಜ್ಞತಾ ಭಾವದಿಂದ ಸ್ಮರಿಸಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಾಗಿರುವ ಔಷ ಧ ವಸ್ತುಗಳ ಬೇಡಿಕೆ ಪಟ್ಟಿಯನ್ನು ದಾನಿಗಳು ನಮ್ಮಿಂದ ಕೇಳಿದ್ದರು. ನಾವು ಸಲ್ಲಿಸಿದ ಬೇಡಿಕೆಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಔಷಧ ಹಾಗೂ ಸುರಕ್ಷಾ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಮಾರುಕಟ್ಟೆಯಲ್ಲಿ ಸಿಗದೇ ಇರುವ ಅಪರೂಪದ ಇಂಜೆಕ್ಷನ್‌ಗಳನ್ನು ಸಹ ದೊಡ್ಡ ಪ್ರಮಾಣದಲ್ಲಿ ನೀಡಿದ್ದಾರೆ. ಆ್ಯಂಟಿಬೈಯಾಟಿಕ್ ಕಿಟ್ ಗಳು, ಆಯುರ್ವೇದ ಮೂಲದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಂಚಾಮೃತ ಕಿಟ್‌ಗಳು, ಮಲ್ಟಿ ವಿಟಮಿನ್ ಕಿಟ್‌ಗಳು, ಓಮೆಗಾ, ಸಿರಪ್, ಫೇಸ್ ಶೀಲ್ಡ್, ತ್ರೀ ಲೇಯರ್ ಮಾಸ್ಕ್, ಸ್ಯಾನಿಟೈಸರ್, ಅಗತ್ಯ ಮಾತ್ರೆಗಳು, ಇಂಜೆಕ್ಷನ್‌ಗಳನ್ನು ಉಚಿತವಾಗಿ ಕಳುಹಿಸಿಕೊಟ್ಟಿರುವುದಾಗಿ ಹೇಳಿದರು.
ಮುಖಪೂರ್ತಿ ಕವರ್ ಆಗುವ ಶೀಲ್ಡ್‌ಗಳನ್ನು ಮನೆ ಮನೆ ಸರ್ವೇ ನಡೆಸುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು. ಔಷಧ , ಇಂಜೆಕ್ಷನ್‌ಗಳನ್ನು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿರಪ್‌ಗ್ಳನ್ನು ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಮಹಮ್ಮದ ರೋಷನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಆಸ್ಪತ್ರೆಯ ಆರ್‌ಎಂಒ ಡಾ.ಪೂಜಾರ ಇತರರಿದ್ದರು.