Advertisement

ಕಿಮ್ಸ್‌ಗೆ ಮಹಾಂತ ದೇವರು ತಾಯಿ ಮೃತದೇಹ ದಾನ!

10:17 AM Feb 08, 2019 | Team Udayavani |

ಕೊಪ್ಪಳ: ಈ ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಲಿ ಎನ್ನುವ ತಾತ್ವಿಕತೆ ಅರಿತ ಬಾಗಲಕೋಟೆ ಜಿಲ್ಲೆಯ ಸ್ವಾಮೀಜಿ ಒಬ್ಬರು ತಮ್ಮ ತಾಯಿಯ ಮೃತದೇಹವನ್ನೇ ದಾನ ಮಾಡಿ ಸಮಾಜಕ್ಕೆ ಜಾಗೃತಿಯ ಸಂದೇಶ ನೀಡಿದ್ದಾರೆ.

Advertisement

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿಯ ಶರಣರ ಕುಟೀರದ ಸ್ವಾಮೀಜಿ ಮಹಾಂತ ದೇವರು ತಮ್ಮ ತಾಯಿ ಕಮಲಮ್ಮ (82) ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿದ್ದಾರೆ. ಮಹಾಂತ ದೇವರು ಅವರ ತಾಯಿ ಕಮಲಮ್ಮ ಜ.22ರಂದೇ ಮೃತಪಟ್ಟಿದ್ದಾರೆ. ಸ್ವಾಮೀಜಿಗಳು ತಮ್ಮ ತಾಯಿಯ ಮೃತದೇಹವನ್ನು ಬೈಲಹೊಂಗದಲ್ಲಿನ ಡಾ| ರಾಮಣ್ಣವರ್‌ ಪ್ರತಿಷ್ಠಾನಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ಪ್ರತಿಷ್ಠಾನವು ಹಲವು ವರ್ಷಗಳಿಂದ ಮೃತದೇಹ ದಾನದ ಕುರಿತು ಜಾಗೃತಿ ಮೂಡಿಸುತ್ತಿದೆ. ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ನಾಲ್ಕಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದು ವೈಜ್ಞಾನಿಕ ತಿಳಿವಳಿಕೆ ನೀಡುತ್ತಿದೆ. ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮಹಾಂತೇಶ ರಾಮಣ್ಣವರ್‌ ಅವರು ಆ ದೇಹವನ್ನು ಬೈಲಹೊಂಗಲದ ಎಸ್‌.ಜಿ.ವಿ. ಆರ್ಯುವೇದ ಕಾಲೇಜಿಗೆ ಹಸ್ತಾಂತರ ಮಾಡಿದ್ದಾರೆ.

ಕಿಮ್ಸ್‌ಗೆ ಮೃತದೇಹ ಬಂದಿದ್ದು ಹೇಗೆ?: ಕೊಪ್ಪಳ ಮೆಡಿಕಲ್‌ ಕಾಲೇಜಿನಲ್ಲಿ ಮೃತದೇಹದ ಕೊರತೆ ಇದೆ. ಎಂಸಿಐ ನಿಯಮದ ಪ್ರಕಾರ 10 ವಿದ್ಯಾರ್ಥಿಗಳಿಗೆ ಒಂದು ಮೃತದೇಹದ ಅಧ್ಯಯನಕ್ಕೆ ಬೇಕು. ಆದರೆ ಕಿಮ್ಸ್‌ನಲ್ಲಿ 5 ಮೃತದೇಹಗಳು ಮಾತ್ರ ಇವೆ. ಹಾಗಾಗಿ ವಿದ್ಯಾರ್ಥಿಗಳಿಗೆ ಮೃತದೇಹದ ಕೊರತೆಯಾದ ಕಾರಣ ಕಿಮ್ಸ್‌ ಬೈಲಹೊಂಗಲದ ಆರ್ಯುವೇದ ಕಾಲೇಜಿಗೆ ಹಾಗೂ ಪ್ರತಿಷ್ಠಾನವನ್ನು ಸಂಪರ್ಕಿಸಿ ಮೃತದೇಹ ದಾನಕ್ಕಾಗಿ ಮನವಿ ಮಾಡಿತ್ತು. ಕಿಮ್ಸ್‌ಗೆ ಸ್ವಾಮೀಜಿ ಅವರ ತಾಯಿ ಮೃತದೇಹವೇ ರವಾನೆಯಾಗಿರುವುದು ವಿಶೇಷವಾಗಿದೆ. ಅದು ಈ ಭಾಗದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪುಣ್ಯವೇ ಸರಿ. ಮಂಗಳವಾರದಂದೇ ಮೃತದೇಹ ಆಗಮಿಸಿದ್ದು, ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಮೃತದೇಹಕ್ಕೆ ನಮನ ಸಲ್ಲಿಸಿ, ಅಂಗರಚನಾ ವಿಭಾಗಕ್ಕೆ ದೇಹವನ್ನು ರವಾನೆ ಮಾಡಲಾಗಿದೆ.

ಕಿಮ್ಸ್‌ಗೆ ಮೃತದೇಹಗಳ ಕೊರತೆಯಿತ್ತು. ಇದಕ್ಕಾಗಿ ಡಾ| ರಾಮಣ್ಣವರ್‌ ಪ್ರತಿಷ್ಠಾನವನ್ನು ಸಂಪರ್ಕಿಸಿದ್ದೆವು. ಅವರ ನೆರವಿನಿಂದ ಒಬ್ಬ ಸ್ವಾಮೀಜಿ ಅವರ ತಾಯಿಯ ಮೃತದೇಹವನ್ನು ಬೈಲಹೊಂಗಲದ ಆರ್ಯುವೇದ ಕಾಲೇಜಿನ ಮೂಲಕ ಕೊಪ್ಪಳ ಕಿಮ್ಸ್‌ಗೆ ಕಳುಹಿಸಿದ್ದಾರೆ. ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗತ್ತದೆ ಎಂದು ಸ್ವಾಮೀಜಿಗಳು ತಮ್ಮ ತಾಯಿ ದೇಹದಾನ ಮಾಡಿರುವುದು ಶ್ಲಾಘನೀಯ.
• ಡಾ| ಚನ್ನಬಸವನಗೌಡ,
ಕಿಮ್ಸ್‌ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರು

ಈ ಹಿಂದೆ ಬನಹಟ್ಟಿಯಲ್ಲಿ ಮೃತದೇಹ ದಾನದ ಕುರಿತು ಉಪನ್ಯಾಸ ನೀಡಿ ಜಾಗೃತಿ ಮೂಡಿಸಿದ್ದೆ. ಅದರಿಂದ ಪ್ರೇರೇಪಿತರಾಗಿ ಮಹಾಂತ ದೇವರು ಸ್ವಾಮೀಜಿಗಳು ತಮ್ಮ ತಾಯಿಯ ಮೃತದೇಹ ದಾನ ಮಾಡಿದ್ದಾರೆ. ಅವರ ಒಪ್ಪಿಗೆ ಮೇರೆಗೆ ಬೈಲಹೊಂಗಲ ಕಾಲೇಜು ಮೂಲಕ ಕೊಪ್ಪಳ ಕಿಮ್ಸ್‌ಗೆ ರವಾನೆ ಮಾಡಿದ್ದೇವೆ. ಕಿಮ್ಸ್‌ನಲ್ಲಿ ತುಂಬ ಅವಶ್ಯವಿದ್ದ ಕಾರಣ ಅಲ್ಲಿಗೆ ರವಾನೆ ಮಾಡಿದ್ದೇವೆ. ಭಾವನಾತ್ಮಕತೆ ಬಿಟ್ಟು ತಮ್ಮ ದೇಹ ದಾನ ಮಾಡಲು ಮುಂದೆ ಬರಬೇಕು.
• ಡಾ| ಮಹಾಂತೇಶ ರಾಮಣ್ಣನವರ್‌,
ಡಾ| ರಾಮಣ್ಣವರ್‌ ಪ್ರತಿಷ್ಠಾನದ ಕಾರ್ಯದರ್ಶಿ, ಬೈಲಹೊಂಗಲ

Advertisement

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next