Advertisement
ಮನೆಯಲ್ಲಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಆರೆಸ್ಸೆಸ್ ಕಾರ್ಯಕರ್ತ, ಬೆಳಗಾವಿಯ ಮಹಾಬಲೇಶ್ವರ(ಹನುಮಾನ) ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ(51) ಅಂಗಾಂಗಳನ್ನು ದಾನ ಮಾಡಿದ್ದಾರೆ. ಚಿಕಿತ್ಸೆಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರಕ್ಕೆ ಉಮೇಶ ಅವರನ್ನು ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಿಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಗ ಹೃದಯ, ಕಿಡ್ನಿ, ಲೀವರ್ ಹಾಗೂ ನೇತ್ರಗಳನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
Related Articles
Advertisement
ಅಂಗಾಂಗಗಳನ್ನು ದಾನ ಮಾಡಿದ ವ್ಯಕ್ತಿ ಹಾಗೂ ಆತನ ಕುಟುಂಬಸ್ಥರ ಕಾರ್ಯವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಮೊದಲಿನಿಂದಲೂ ಉಮೇಶಗೆ ಸಮಾಜಸೇವೆಯ ಗೀಳು: ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಉಮೇಶ ದಂಡಗಿ ಅವರು ಹನುಮಾನ ನಗರ ಶಾಖೆಯ ಆರೆಸ್ಸೆಸ್‌ನ ಕಟ್ಟಾ ಕಾರ್ಯಕರ್ತರು. ಅನೇಕ ಸಲ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಳಗಾವಿಯಲ್ಲಿ ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳಲ್ಲಿ ಉಮೇಶ ಪಾಲ್ಗೊಳ್ಳುತ್ತಿದ್ದರು. ಮೊನ್ನೆಯಷ್ಟೇ ನಗರದಲ್ಲಿ ನಡೆದ ಪಥಸಂಚಲನಕ್ಕೆ ಪಾಲ್ಗೊಳ್ಳಲು ತಯಾರಿ ಮಾಡಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ಹಿಂದಿನ ದಿನ ರಾತ್ರಿ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಈಗ ಅಂಗಾಂಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.