Advertisement

ಪ್ರಚಾರಕ್ಕೆ ಮುನ್ನ ಡ್ರಗ್ಸ್‌ ಪರೀಕ್ಷೆಗೆ ಒಳಗಾಗಿ; ಬೈಡೆನ್‌ಗೆ ಅಧ್ಯಕ್ಷ ಟ್ರಂಪ್‌ ಸವಾಲು

10:07 AM Aug 28, 2020 | Nagendra Trasi |

ವಾಷಿಂಗ್ಟನ್‌: “ಚುನಾವಣೆಯ ಪ್ರಚಾರದಲ್ಲಿ ಭಾಷಣ ಮಾಡುವುದಕ್ಕೆ ಮೊದಲು ಡ್ರಗ್ಸ್‌ ಪರೀಕ್ಷೆಗೆ ಒಳಗಾಗಿ’- ಹೀಗೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಡೆಮಾಕ್ರಾಟಿಕ್‌ ಪಕ್ಷದ ಅಧ್ಯಕ್ಷೀಯ ಸ್ಥಾನಾಕಾಂಕ್ಷಿ ಜೋ ಬೈಡೆನ್‌ ಅವರಿಗೆ ಸವಾಲು ಹಾಕಿದ್ದಾರೆ. ಮುಂದಿನ ತಿಂಗಳು ಇಬ್ಬರು ನಾಯಕರ ನಡುವೆ ಮುಖಾಮುಖೀ ಪ್ರಚಾರ ನಡೆಯುವ ಮೊದಲೇ ಪರೀಕ್ಷೆಯ ಫ‌ಲಿತಾಂಶ ನೀಡುವಂತೆ ಟ್ರಂಪ್‌ ಪಂಥಾಹ್ವಾನ ನೀಡಿದ್ದಾರೆ.

Advertisement

“ಇತ್ತೀಚಿನ ದಿನಗಳಲ್ಲಿ ಡೆಮಾಕ್ರಾಟಿಕ್‌ ಪಕ್ಷದ ನಾಯಕ ಬೈಡೆನ್‌ ಅತ್ಯಂತ ಉತ್ಸಾಹ ಪೂರ್ವಕವಾಗಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ’ ಎಂದು “ವಾಷಿಂಗ್ಟನ್‌ ಎಕ್ಸಾಮಿನರ್‌’ ಎಂಬ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷ ಟ್ರಂಪ್‌ ಈ ಮಾತುಗಳನ್ನಾಡಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರಾದರೂ, ಅದಕ್ಕೆ ಪೂರಕವಾಗಿರುವ ಸಾಕ್ಷ್ಯಗಳನ್ನು ಸಂದರ್ಶನದಲ್ಲಿ ನೀಡಲಿಲ್ಲ. 2016ರ ಚುನಾವಣೆ ವೇಳೆ ಡೆಮಾಕ್ರಾಟಿಕ್‌ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್‌ಗೂ ಇದೇ ರೀತಿಯ ಟೀಕೆಯನ್ನು ಟ್ರಂಪ್‌ ಮಾಡಿದ್ದರು.

ಕೆಲವೊಂದು ಟಿವಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಸ್ಪರ್ಧಿ ಉತ್ಸಾಹದಾಯಕವಾಗಿ  ಕಂಡುಬರುತ್ತಿರಲಿಲ್ಲ. ಮಾ.15ರ ಬಳಿಕ ನಡೆದ ಹಲವು ಪ್ರಚಾರದ ವೇದಿಕೆಗಳಲ್ಲಿ ಡೆಮಾಕ್ರಾಟಿಕ್‌ ಪಕ್ಷದ ನಾಯಕ ಅತ್ಯುತ್ಸಾಹದಿಂದ ಇರುವಂತೆ ಕಂಡು ಬರುತ್ತದೆ ಎಂದಿದ್ದಾರೆ ಟ್ರಂಪ್‌. “ಅವರು ವಿನ್‌ಸ್ಟನ್‌ ಚರ್ಚಿಲ್‌ ಎಂದು ಭಾವಿಸಿಕೊಂಡಿದ್ದರೆ ತಪ್ಪು. ಅದು ಅಲ್ಲವೇ ಅಲ್ಲ. ಆರಂಭದಲ್ಲಿ ಅವರ ಪ್ರಚಾರ ಸಭೆಗಳಲ್ಲಿನ ಭಾಷಣ ತುಂಬಾ ನೀರಸವಾಗಿ ಇರುತ್ತಿತ್ತು’ ಎಂದರು.

ಸೆ.29ರಂದು ಓಹಿಯೋದ ಕ್ಲೀವ್‌ಲ್ಯಾಂಡ್‌ನ‌ಲ್ಲಿ ಮೊದಲ ಮುಖಾಮುಖೀ ಪ್ರಚಾರ “ಪ್ರಸಿಡೆನ್ಶಿಯಲ್‌ ಡಿಬೇಟ್‌’ ನಡೆಯಲಿದೆ. ಅ.15ರಂದು ಮಿಯಾಮಿ, ಅ.22ರಂದು ಟೆನ್ನಿಸ್ಸೀಯಲ್ಲಿ ಮೂರನೇಯ ಪ್ರಚಾರ ನಡೆಯಲಿದೆ.

Advertisement

ತಾಯಿಯೇ ನನ್ನ ಪ್ರೋತ್ಸಾಹದ ಮೂಲ: “ನನ್ನ ತಾಯಿಯೇ ಪ್ರೋತ್ಸಾಹದ ಮೂಲ. ಅವರೇ ಅಮೆರಿಕ ಹೊಂದಿರುವ ಮೌಲ್ಯಗಳನ್ನು ಬೆಳೆಸಿದವರು’ ಎಂದು ಡೆಮಾಕ್ರಾಟಿಕ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ ತಿಳಿಸಿದ್ದಾರೆ. ತಾಯಿ ಭಾರತದಿಂದ ಅಮೆರಿಕಕ್ಕೆ ಆಗಮಿಸಿದ್ದ ಸಂದರ್ಭ ದಲ್ಲಿ ಇಲ್ಲಿನ ಮೂಲ ತತ್ವಗಳನ್ನು ಅರಿತರು. ಈ ದೇಶವೇ ತನ್ನ ಮನೆ ಎಂದು ತಿಳಿದುಕೊಂಡಿದ್ದರು ಎಂದು ಚುನಾವಣಾ ಪ್ರಚಾರವೊಂದರಲ್ಲಿ ನೆನಪಿಸಿಕೊಂಡರು.

ಇನ್ನೂ 4 ವರ್ಷ ಟ್ರಂಪ್‌ಬೇಕು: ಉಪಾಧ್ಯಕ್ಷ ಪೆನ್ಸ್‌
ವಾಷಿಂಗ್ಟನ್‌ನಲ್ಲಿ ರಿಪಬ್ಲಿಕನ್‌ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರಚಾರದಲ್ಲಿ ಮಾತನಾಡಿದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಇನ್ನೂ ನಾಲ್ಕು ವರ್ಷಗಳ ಕಾಲ ಅಮೆರಿಕಕ್ಕೆ ಡೊನಾಲ್ಡ್‌ ಟ್ರಂಪ್‌ ಅವರ ಅಧಿಕಾರ ಅಗತ್ಯವಿದೆ ಎಂದರು. ಪೆನ್ಸ್‌ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಅಮೆರಿಕದ ಮೇಲೆ ನಂಬಿಕೆ ಇರುವ ವ್ಯಕ್ತಿ ಅಧ್ಯಕ್ಷರಾಗಿರಬೇಕು. ಇಂಥ ಗುಣವನ್ನು ಟ್ರಂಪ್‌ ಹೊಂದಿದ್ದಾರೆ. ಹೀಗಾಗಿ, ನ.3ರಂದು ನಡೆಯಲಿರುವ ಚುನಾವಣೆಯಲ್ಲಿ ಅವರೇ ಗೆಲ್ಲಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next