ವಾಷಿಂಗ್ಟನ್/ಬೀಜಿಂಗ್: ಮಾರಕ ಕೋವಿಡ್ ವೈರಸ್ ಪ್ರಸರಣದ ಹಿಂದೆ ಚೀನಾ ಕೈವಾಡವಿದ್ದರೆ, ಇಲ್ಲವೇ, ಕೋವಿಡ್ ನಿಬಂಧನೆಗಳನ್ನು ಗೌರವಿಸದಿದ್ದರೆ, ಚೀನಾದೊಂದಿಗಿನ ಎಲ್ಲಾ ರೀತಿಯ ವಾಣಿಜ್ಯ-ವ್ಯಾಪಾರ ಒಪ್ಪಂದಗಳನ್ನು ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಎಚ್ಚರಿಕೆ ನೀಡಿದ್ದಾರೆ.
ಚೀನಾ ಮತ್ತು ಅಮೆರಿಕ ಜನವರಿಯಲ್ಲಿ ವ್ಯಾಪಾರ ಒಪ್ಪಂದದ ಮೊದಲನೇ ಹಂತಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ ಚೀನಾ, ಅಮೆರಿಕದಿಂದ 200 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಉತ್ಪನ್ನಗಳನ್ನು ಖರೀದಿಸಬೇಕಿದೆ.
ಆದಾಗ್ಯೂ, ನೈಸರ್ಗಿಕ ವಿಕೋಪ ಅಥವಾ ಇನ್ನಿತರ ಸಂಕಷ್ಟದ ಸಮಯದಲ್ಲಿ ಈ ಒಪ್ಪಂದದಲ್ಲಿ ಚೀನಾ ತಿದ್ದುಪಡಿಮಾಡಬಹುದು ಎಂದು ಅಮೆರಿಕ – ಚೀನಾ ಆರ್ಥಿಕ ಮತ್ತು ಭದ್ರತಾ ಪುನರ್ ಪರಿಶೀಲನಾ ಆಯೋಗ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಫ್, ಒಂದು ವೇಳೆ ಚೀನಾ ಈ ರೀತಿಯ ಕ್ರಮ ಕೈಗೊಂಡರೆ, ನಾವು ಒಪ್ಪಂದ ರದ್ದುಗೊಳಿಸಲು, ಇಲ್ಲವೇ ಇನ್ನಿತರ ಯಾವ ಕ್ರಮ ಸಾಧ್ಯವೋ ಅದನ್ನು ಮಾಡಲು ಸಿದ್ಧ ಎಂದರು. ಈ ಹಿಂದೆ 2018ರಲ್ಲಿ ಅವರು ಚೀನಾ ಜತೆ ವ್ಯಾಪಾರ ಸಮರ ಆರಂಭಿಸಿದ್ದರು.
ಚೀನಾ ವಿರುದ್ಧ ಮೊಕದ್ದಮೆ: ಈ ಮಧ್ಯೆ, ಕೋವಿಡ್ ಹರಡಲು ಚೀನಾ ಕಾರಣ ಎಂದು ಆರೋಪಿಸಿ, ಅಮೆರಿಕದ ಮಿಸ್ಸೌರಿ ರಾಜ್ಯ ಅಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಚೀನಾದ ವಿರುದ್ಧ ಮೊಕದ್ದಮೆ ಹೂಡಿದೆ.
ಆ ಮೂಲಕ ಚೀನಾದ ವಿರುದ್ಧ ಮೊಕದ್ದಮೆ ಹೂಡಿದ ಮೊದಲ ರಾಜ್ಯ ಎನಿಸಿದೆ. ಮಿಸ್ಸೌರಿಯ ಈ ನಡೆಯನ್ನು ಚೀನಾ ಖಂಡಿಸಿದ್ದು, ಇದೊಂದು ಅಸಂಬದ್ದ ನಡೆ ಹಾಗೂ ಚೀನಾದ ಸಾರ್ವಭೌಮತ್ವದ ಉಲ್ಲಂಘನೆ ಎಂದು ಆರೋಪಿಸಿದೆ.