Advertisement

ಪರ್ಲ್ ಹಾರ್ಬರ್‌, 9/11ಕ್ಕಿಂತ ಭೀಕರ ; ಕೋವಿಡ್ ದಾಳಿಯ ಬಗ್ಗೆ ಟ್ರಂಪ್‌ ಬಣ್ಣನೆ

08:24 AM May 09, 2020 | Hari Prasad |

ವಾಷಿಂಗ್ಟನ್‌: ಪರ್ಲ್ ಹಾರ್ಬರ್‌‌ ಮತ್ತು 9/11ರ ದಾಳಿಗಿಂತ ಕೋವಿಡ್ ವೈರಸ್‌ನ ಪ್ರಭಾವ ಹೆಚ್ಚಾಗಿದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.

Advertisement

ಬುಧವಾರ ವಾಷಿಂಗ್ಟನ್‌ನಲ್ಲಿ ಕೋವಿಡ್ ವಾರಿಯರ್ಸ್‌ ಜತೆಗಿನ ಭೇಟಿ ಬಳಿಕ ಮಾತನಾಡಿದ ಅವರು, ಈ ಅಂಶ ಪ್ರಸ್ತಾವಿಸಿದ್ದಾರೆ.

ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ. ವೈರಸ್‌ ಅನ್ನು ಆರಂಭದಲ್ಲಿಯೇ ತಡೆಯಬಹುದಿತ್ತು. ಆದರೆ ಆ ರೀತಿ ನಡೆಯಲಿಲ್ಲ ಎಂದಿದ್ದಾರೆ.

ಸದ್ಯ ಉಂಟಾಗಿರುವ ಪರಿಸ್ಥಿತಿ ಎರಡನೇ ವಿಶ್ವ ಮಹಾಯುದ್ಧದ ವೇಳೆ ನಡೆದ ಪರ್ಲ್ ಹಾರ್ಬರ್‌ ದಾಳಿ ಮತ್ತು 2001ರ ಸೆಪ್ಟೆಂಬರ್‌ನಲ್ಲಿ ವಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ನಡೆದ ದಾಳಿಯಲ್ಲಿ ಮೂರು ಸಾವಿರ ಮಂದಿ ಅಸುನೀಗಿದ್ದರು.

ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ ಎರಡೂ ಘಟನೆಗಳಿಗಿಂತ ಹೆಚ್ಚು ಎಂದರು ಟ್ರಂಪ್‌. ಹೀಗಾಗಿ ಇದೊಂದು ರೀತಿಯಲ್ಲಿ ಯುದ್ಧದ ಪರಿಸ್ಥಿತಿಯೇ ಎಂದರು. ಅಮೆರಿಕದಲ್ಲಿ ಈಗಾಗಲೇ ಚೀನ ವಿರುದ್ಧ ಕಾನೂನು ಹೋರಾಟಕ್ಕೆ ಆರಂಭಿಕ ಸಿದ್ಧತೆಗಳು ನಡೆದಿವೆ.

Advertisement

ಚೀನ ಹೂಡಿಕೆ ತಡೆಗೆ ವಿಧೇಯಕ: ಕೋವಿಡ್ ನಂತರದ ಸ್ಥಿತಿ ಅಮೆರಿಕ – ಚೀನ ನಡುವೆ ಬಾಂಧವ್ಯಕ್ಕೆ ಪ್ರತಿಕೂಲವನ್ನೇ ತಂದೊಡ್ಡಿದೆ. ಹೊಸ ಬೆಳವಣಿಗೆಯೊಂದರಲ್ಲಿ ಚೀನ ಸರಕಾರ ಅಮೆರಿಕದ ಕಂಪನಿಗಳಲ್ಲಿ ಹೂಡಿಕೆ ಮಾಡದಂತೆ ತಡೆಯಲು ಸಂಸದ ಜಿಮ್‌ ಬಾಂಕ್ಸ್‌ ವಿಧೇಯಕವೊಂದನ್ನು ಅಲ್ಲಿನ ಸಂಸತ್‌ನ ಕೆಳಮನೆ, ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ವಿದೇಶಿ ಕಂಪನಿಗಳು ವಿಶೇಷವಾಗಿ ಚೀನದ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡದಂತೆ ತಡೆಯುವುದೇ ಅದರ ಪ್ರಧಾನ ಅಂಶ. ಈ ಸಂದರ್ಭದಲ್ಲಿ ಅವುಗಳು ಲಾಭ ಪಡೆಯದಂತೆ ಮಾಡುವುದೇ ಆಗಿದೆ ಎಂದಿದ್ದಾರೆ ಬಾಂಕ್ಸ್‌.

ಮತ್ತೂಮ್ಮೆ ಲಾಕ್‌ಡೌನ್‌ ಜಾರಿ ಖಚಿತ: ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ಸಾವು ನೋವು ಹೆಚ್ಚುತ್ತಿರುವುದರಿಂದ ಆರೋಗ್ಯ ಕ್ಷೇತ್ರದ ತಜ್ಞರು ಅನಿವಾರ್ಯವಾಗಿ ಮತ್ತೂಮ್ಮೆ ಲಾಕ್‌ಡೌನ್‌ ಜಾರಿಗೆ ತರುವ ಮಾತನಾಡಿದ್ದಾರೆ. ಇದರ ಜತೆಗೆ ಎರಡನೇ ಆವೃತ್ತಿಯಲ್ಲಿ ಕೋವಿಡ್ ಬಾಧಿಸಲಿದೆ ಎಂಬ ಕಾರಣವನ್ನೂ ಅವರು ಮುಂದಿಟ್ಟಿದ್ದಾರೆ.

ಜರ್ಮನಿಯಲ್ಲಿ ಮತ್ತೂಮ್ಮೆ ವೈರಸ್‌ ತಲೆಯೆತ್ತಿದರೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಯೋಚಿಸುತ್ತಿದ್ದಾರೆ. ಇಟಲಿಯಲ್ಲಿ ಹೊಸ ಸೋಂಕಿತರು ಮತ್ತು ಅವರ ಜತೆಗೆ ಸಂಪರ್ಕ ಇದ್ದವರ ಪತ್ತೆ ಕಾರ್ಯ ನಡೆಯುತ್ತಿದೆ. ಫ್ರಾನ್ಸ್‌ನಲ್ಲಿ ಸದ್ಯ ಲಾಕ್‌ಡೌನ್‌ ಇದ್ದರೂ ಅನಂತರ ದಿನಗಳ ಬಗ್ಗೆ ಚರ್ಚೆಗಳು ನಡೆದಿವೆ.

ವಿಶ್ವಸಂಸ್ಥೆಯಲ್ಲಿ ಕೂಡ ಹೋರಾಟ
ಅಮೆರಿಕ ಮತ್ತು ಚೀನ ನಡುವಿನ ವೈಮನಸ್ಸು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಯೂ (ಯುಎನ್‌ಎಸ್‌ಸಿ) ಮುಂದುವರಿದಿದ್ದು, ವಿಶ್ವವನ್ನು ಬಾಧಿಸುತ್ತಿರುವ ಕೋವಿಡ್ ಕುರಿತಾಗಿ ನಿರ್ಣಯವೊಂದನ್ನು ಅಂಗೀಕರಿಸುವುದಕ್ಕೆ ಅಡ್ಡಿಯಾಗಿದೆ. ಯುಎನ್‌ಎಸ್‌ಸಿಯಲ್ಲಿ ಕೋವಿಡ್ ಕುರಿತಾಗಿ ಕರಡು ನಿರ್ಣಯವೊಂದನ್ನು ಅಂಗೀಕರಿಸಬೇಕು ಎಂದು ಫ್ರಾನ್ಸ್‌ ಮತ್ತು ಟುನಿಶೀಯಾಗಳು ಒತ್ತಾಯಿಸುತ್ತಿವೆ.

ಅದರಲ್ಲೂ, ಮೇ ತಿಂಗಳಿಗೆ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಟುನಿಶೀಯಾ, ತನ್ನ ಅಧ್ಯಕ್ಷತೆಯಲ್ಲಿ ನಿರ್ಣಯದ ಅಂಗೀಕಾರಕ್ಕೆ ಮುಂದಾಗಿದೆ. ಆದರೆ, ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನ ಎರಡೂ ಇದಕ್ಕೆ ತಡೆ ಒಡ್ಡುತ್ತಿವೆ.

ಪರ್ಲ್ ಹಾರ್ಬರ್‌ ಏನಿದು ದಾಳಿ?
ಹವಾಯಿ ದ್ವೀಪ ಸಮೂಹದ ಬಳಿ ಇರುವ ಹೊನೊಲುಲು ಎಂಬಲ್ಲಿರುವ ಅಮೆರಿಕದ ನೌಕಾ ನೆಲೆಗೆ 1941ರ ಡಿ.7ರಂದು ಜಪಾನ್‌ ದಾಳಿ ಮಾಡಿತು. ಎಂಟು ಯುದ್ಧನೌಕೆಗಳೂ ಸೇರಿದಂತೆ 20ಕ್ಕೂ ಹೆಚ್ಚು ಹಡಗುಗಳು, 300 ವಿಮಾನಗಳು, ನಾಶಗೊಂಡವು ಮತ್ತು 2,400ಕ್ಕೂ ಅಧಿಕ ಮಂದಿ ಅಮೆರಿಕ ಪ್ರಜೆಗಳು ಅಸುನೀಗಿದ್ದರು.

ಇದಾದ ಬಳಿಕ ಅಮೆರಿಕ ಜಪಾನ್‌ ವಿರುದ್ಧ ಯುದ್ಧ ಘೋಷಣೆ ಮಾಡಿತು. ಮತ್ತು ಈ ಮೂಲಕ ಅಮೆರಿಕಾ ಅಧಿಕೃತವಾಗಿ ಎರಡನೇ ವಿಶ್ವಯುದ್ಧದ ರಣಾಂಗಣವನ್ನು ಪ್ರವೇಶಿಸಿತು. ಹಾಗೂ ಆ ಬಳಿಕವೇ ಅಮೆರಿಕಾ ಜಪಾನ್ ಮೇಲೆ ಪ್ರತೀಕಾರ ತೀರಿಸಲು ಹಿರೋಶಿಮ ಹಾಗೂ ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ಹಾಕಿತು.

ಅಮೆರಿಕದಲ್ಲಿ ಚೀನ ಕೋವಿಡ್ ವಿಜ್ಞಾನಿ ಶೂಟೌಟ್‌
ಅಮೆರಿಕದಲ್ಲಿ ಕೋವಿಡ್ ವೈರಾಣು ಕುರಿತು ಸಂಶೋಧನೆಯಲ್ಲಿ ತೊಡಗಿದ್ದ ಚೀನದ ವಿಜ್ಞಾನಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. 37 ವರ್ಷದ ಬಿಂಗ್‌ ಲಿಯು, ವಾರಾಂತ್ಯದಲ್ಲಿ ಪಿಟ್ಸ್‌ಬರ್ಗ್‌ನ ತಮ್ಮ ಮನೆಯ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಸಂಗಾತಿ ಜತೆಗಿನ ವೈಮನಸ್ಸು ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗುತ್ತಿದೆಯಾದರೂ ಪ್ರಕರಣ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತಿದೆ.

ಅಮೆರಿಕದಲ್ಲಿ ಕೋವಿಡ್ ಸೋಂಕನ್ನು ಚೀನ ಹಬ್ಬಿಸಿದ್ದು ಹೇಗೆ ಎಂಬುದರ ರಹಸ್ಯವನ್ನು ನಾಶಮಾಡಲು, ಚೀನ ಸರಕಾರವೇ ವಿಜ್ಞಾನಿಯ ಹತ್ಯೆಗೆ ಪಿತೂರಿ ನಡೆಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗುತ್ತಿದೆ. ಹೆಚ್ಚುವರಿ ತನಿಖೆಗೆ ಆದೇಶಿಸಲಾಗಿದೆ.

ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಬಂದಿದೆ ಎನ್ನುವುದು ಶತಃಸಿದ್ಧ. ಗುಪ್ತಚರ ಸಂಸ್ಥೆಗಳ ಮೂಲಕ ನಾವು ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವುದರಿಂದ ಈ ಬಗ್ಗೆ ಹೆಚ್ಚು ಹೇಳುವುದಿಲ್ಲ.
– ಮೈಕ್‌ ಪೊಂಪ್ಯೊ, ಅಮೆರಿಕದ ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next