Advertisement

ವಲಸೆಗೆ ತಾತ್ಕಾಲಿಕ ಸ್ಥಗಿತ ; ಅಮೆರಿಕ ನಾಗರಿಕರ ಉದ್ಯೋಗ ರಕ್ಷಣೆಗೆ ಕ್ರಮ: ಟ್ರಂಪ್‌ ಘೋಷಣೆ

05:03 PM Apr 22, 2020 | Hari Prasad |

ವಾಷಿಂಗ್ಟನ್‌: ವಿದೇಶೀಯರು ದೇಶಕ್ಕೆ ವಲಸೆ ಬರುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆದೇಶಕ್ಕೆ ಸಹಿ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

Advertisement

ಕೋವಿಡ್ 19 ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಅಮೆರಿಕನ್‌ ನಾಗರಿಕರ ಉದ್ಯೋಗ ರಕ್ಷಿಸಲು ಈ ಕ್ರಮಕ್ಕೆ ಮುಂದಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಈ ನಿರ್ಧಾರದಿಂದ ಭಾರತದ ಐಟಿ (ಮಾಹಿತಿ ತಂತ್ರಜ್ಞಾನ) ವಲಯದಲ್ಲಿ ಆತಂಕ ಶುರುವಾಗಿದೆ.

ಈ ಸಂಬಂಧ ಮಂಗಳವಾರ ಟ್ವೀಟ್‌ ಮಾಡಿರುವ ಅವರು, ‘ಅದೃಶ್ಯ ಶತ್ರುವಿನ ದಾಳಿ ಹಿನ್ನೆಲೆಯಲ್ಲಿ ಉಂಟಾಗಿರುವ ಸಂಕಷ್ಟದ ಸಮಯದಲ್ಲಿ ಅಮೆರಿಕನ್‌ ಪ್ರಜೆಗಳ ಉದ್ಯೋಗ ರಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಬರುವ ಎಲ್ಲಾ ವಲಸೆಯನ್ನು ತಾತ್ಕಾಲಿಕವಾಗಿ ತಡೆಯುವ ಸಂಬಂಧದ ಆದೇಶಕ್ಕೆ ನಾನು ಸಹಿ ಹಾಕುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಆದರೆ, ಈ ಆದೇಶಕ್ಕೆ ಅವರು ಯಾವಾಗ ಸಹಿ ಹಾಕುತ್ತಾರೆ ಎಂಬುದರ ಬಗ್ಗೆಯಾಗಲಿ, ಆದೇಶದ ವಿವರವಾಗಲಿ ಲಭ್ಯವಾಗಿಲ್ಲ.  ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಈಗಾಗಲೇ ಚೀನ, ಯುರೋಪ್‌, ಕೆನಡಾ ಮತ್ತು ಮೆಕ್ಸಿಕೊದಿಂದ ಆಗಮಿಸುವ ವಿದೇಶಿ ನಾಗರಿಕರಿಗೆ ತಡೆ ವಿಧಿಸಲಾಗಿದೆ. ಅಲ್ಲದೆ, ವೀಸಾ ನೀಡುವ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿದೆ.

ಮತ್ತಷ್ಟು ಪ್ರಾಂತ್ಯಗಳಲ್ಲಿ ನಿರ್ಬಂಧ ತೆರವು
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ನಲ್ಲಿದ್ದ ಅಮೆರಿಕವು ಈಗ ತನ್ನ ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸುವತ್ತ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದೆ. ನ್ಯೂಯಾರ್ಕ್‌ ಬಳಿಕ ಜಾರ್ಜಿಯಾ, ಸೌತ್‌ ಕರೋಲಿನಾ ಮತ್ತು ಟೆನ್ನೆಸ್ಸಿ ಕೂಡ ನಿರ್ಬಂಧವನ್ನು ತೆರವುಗೊಳಿಸಿದ್ದು, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದೆ.

Advertisement

ಶುಕ್ರವಾರದೊಳಗಾಗಿ ಹಲವು ಉದ್ದಿಮೆಗಳು ಪುನಾರಂಭಗೊಳ್ಳಲಿವೆ ಎಂದು ಜಾರ್ಜಿಯಾ ಮತ್ತು ಸೌತ್‌ ಕರೋಲಿನಾ ಗವರ್ನರ್‌ಗಳು ಹೇಳಿದ್ದರೆ, ಮುಂದಿನ ವಾರದಿಂದ ಬಹುತೇಕ ವ್ಯಾಪಾರಗಳಿಗೆ ಅವಕಾಶ ನೀಡಲಾಗುವುದು ಎಂದು ಟೆನ್ನೆಸ್ಸಿ ಗವರ್ನರ್‌ ಹೇಳಿದ್ದಾರೆ. ಸೋಮವಾರ ವಷ್ಟೇ ಟೆಕ್ಸಾಸ್‌ ಪ್ರಾಂತ್ಯವು ಲಾಕ್‌ ಡೌನ್‌ ಅನ್ನು ಭಾಗಶಃ ತೆರವುಗೊಳಿಸಿತ್ತು. ಕಳೆದ ವಾರವಷ್ಟೇ ಅಧ್ಯಕ್ಷ ಟ್ರಂಪ್‌ ಅವರು ಅಮೆರಿಕದ ವಿವಿಧ ಪ್ರಾಂತ್ಯಗಳನ್ನು ನಿರ್ಬಂಧದಿಂದ ಮುಕ್ತಗೊಳಿಸುವ ಮಾರ್ಗಸೂಚಿಯನ್ನು ಪ್ರಕಟಿಸಿದ್ದರು.

ದಾಖಲೆ ನಿರುದ್ಯೋಗಿಗಳು
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ 4 ವಾರಗಳ ಅವಧಿಯಲ್ಲಿ ದಾಖಲೆ ಸಂಖ್ಯೆಯ 2.2 ಕೋಟಿ ಅಮೆರಿಕನ್ನರು ನಿರುದ್ಯೋಗ ಭತ್ಯೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್‌ನಲ್ಲಿ ಚಿಲ್ಲರೆ ಮಾರಾಟದಲ್ಲಿ ದಾಖಲೆಯ ಕುಸಿತ ಕಂಡು ಬಂದಿದೆ. ಅಲ್ಲದೆ, 1946ರ ನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ಕಾರ್ಖಾನೆಗಳ ಉತ್ಪಾದನಾ ವಲಯದಲ್ಲಿ ತೀವ್ರ ಕುಸಿತ ಕಂಡು ಬಂದಿದೆ.

ಆರ್ಥಿಕ ತಜ್ಞರ ಪ್ರಕಾರ ದೇಶದ ಆರ್ಥಿಕ ವ್ಯವಸ್ಥೆ ಈಗಾಗಲೇ ಕುಸಿತದ ಹಾದಿಯಲ್ಲಿದ್ದು, ಈ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕ ಅವಧಿಯಲ್ಲಿ ಮತ್ತಷ್ಟು ಕುಸಿತ ಕಾಣಲಿದೆ. ಈ ಕುಸಿತ ಎರಡನೇ ವಿಶ್ವ ಮಹಾಯುದ್ಧದ ನಂತರದ ದೊಡ್ಡ ಕುಸಿತವಾಗಲಿದೆ.

ಡೆಮಾಕ್ರಾಟಿಕ್‌ ನಾಯಕರ ಟೀಕೆ
ಅಮೆರಿಕ ಅಧ್ಯಕ್ಷರ ವಲಸೆ ಸ್ಥಗಿತ ನಿರ್ಧಾರವನ್ನು ಭಾರತೀಯ ಮೂಲದ ಸೆನೆಟರ್‌ ಕಮಲಾ ಹ್ಯಾರಿಸ್‌ ಸೇರಿದಂತೆ ಡೆಮಾಕ್ರಾಟಿಕ್‌ ಪಕ್ಷದ ನಾಯಕರು ಟೀಕಿಸಿದ್ದಾರೆ. ಆರಂಭದ ದಿನಗಳಿಂದಲೂ ಟ್ರಂಪ್‌ ಅವರು, ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದರು. ಈಗ ಪರಿಸ್ಥಿತಿಯ ಲಾಭ ಪಡೆದು ತಮ್ಮ ವಲಸೆ-ವಿರೋಧಿ ನೀತಿಯನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ ಎಂದು ಕಮಲಾ ಟ್ವೀಟ್‌ ಮಾಡಿದ್ದಾರೆ.

ಜಾಗತಿಕ ಸಹಕಾರಕ್ಕೆ ವಿಶ್ವಸಂಸ್ಥೆ ನಿರ್ಣಯ
ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಜಾಗತಿಕ ಸಹಕಾರಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಒಕ್ಕೊರಲಿನ ನಿರ್ಣಯ ಅಂಗೀಕರಿಸಲಾಗಿದೆ. ಎಲ್ಲ ದೇಶಗಳಿಗೂ ಕೋವಿಡ್ 19 ವೈರಸ್ ಗೆ ಸಂಬಂಧಿಸಿದ ಔಷಧಗಳು, ಲಸಿಕೆಗಳು ಹಾಗೂ ವೈದ್ಯಕೀಯ ಉಪಕರಣಗಳು ಸಮಾನ ಹಾಗೂ ನ್ಯಾಯಯುತವಾಗಿ ದೊರೆಯಬೇಕು ಮತ್ತು ಯಾವ ದೇಶ ಕೂಡ ಅತ್ಯವಶ್ಯಕ ವೈದ್ಯಕೀಯ ಪರಿಕರಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವಂತಿಲ್ಲ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್ 19 ವೈರಸ್ ವಿರುದ್ಧದ ಸಮರ್ಪಕ ಹೋರಾಟಕ್ಕೆ ಅಗತ್ಯವಾದ ಪರಿಣಾಮಕಾರಿ ಸುರಕ್ಷಾ ಕ್ರಮಗಳು ಎಲ್ಲ ದೇಶಗಳ ಬಳಿಯೂ ಇರಬೇಕು. ಈ ವಿಚಾರದಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳೂ ಪರಸ್ಪರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಬೇಕು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪಾಲುದಾರಿಕೆ ಮಾಡಿಕೊಂಡು ಕೊರೊನಾಗೆ ಲಸಿಕೆ, ಔಷಧ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ಸಂಶೋಧನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದೂ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next