ವಾಷಿಂಗ್ಟನ್/ಟೆಹ್ರಾನ್: ಅಮೆರಿಕದ ಡ್ರೋನ್ ಒಂದನ್ನು ಹೊಡೆದುರುಳಿಸಿದ ಇರಾನ್ ಮೇಲೆ ಪ್ರತೀಕಾರಕ್ಕಾಗಿ ಸೇನಾ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದು, ಗುರುವಾರ ತಡರಾತ್ರಿ ದಿಢೀರನೆ ದಾಳಿ ಆದೇಶವನ್ನು ಹಿಂಪಡೆದಿರುವ ಬೆಳವಣಿಗೆ ನಡೆದಿತ್ತು ಎಂದು ಮಾಧ್ಯಮದ ವರದಿ ತಿಳಿಸಿದೆ.
ಇರಾನ್ ಡ್ರೋನ್ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಗುರುವಾರ ಸಂಜೆ 7ಗಂಟೆಗೆ ಶ್ವೇತ ಭವನದಲ್ಲಿ ಅಮೆರಿಕ ಸೇನೆಯ ಹಾಗೂ ರಾಜತಾಂತ್ರಿಕ ಅಧಿಕಾರಿಗಳು ದಾಳಿ ನಡೆಸುವ ಬಗ್ಗೆ ದೇಶದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು!
ಇರಾನ್ ಗುರಿಯಾಗಿರಿಸಿಕೊಂಡು ರಾಡಾರ್ ಹಾಗೂ ಮಿಸೈಲ್ ದಾಳಿ ನಡೆಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾಥಮಿಕ ಒಪ್ಪಿಗೆ ನೀಡಿದ್ದರು ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ರಾತ್ರಿ ಟ್ರಂಪ್ ತಮ್ಮ ಮನಸ್ಸನ್ನು ದಿಢೀರನೆ ಬದಲಾಯಿಸಿಬಿಟ್ಟಿದ್ದು, ದಾಳಿ ನಡೆಸದಂತೆ ಅದೇಶ ನೀಡಿರುವುದಾಗಿ ಹೆಸರು ಹೇಳಲಿಚ್ಚಿಸದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದು, ಟ್ರಂಪ್ ಅವರು ದಿಢೀರ್ ಈ ನಿರ್ಧಾರ ಕೈಗೊಂಡಿದ್ದು ಯಾಕೆ ಎಂಬುದು ತಿಳಿದು ಬಂದಿಲ್ಲ. ಅಥವಾ ಅಧಿಕಾರಿಗಳೇ ದಾಳಿ ಕೈಬಿಡುವಂತೆ ಸಲಹೆ ನೀಡಿದ್ದಾರೋ ಎಂಬುದು ಗೊತ್ತಾಗಿಲ್ಲ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಣ್ವಸ್ತ್ರ ಇಪ್ಪಂದ ಕುರಿತು ಇರಾನ್ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಮಧ್ಯೆಯೇ ಅಮೆರಿಕದ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿತ್ತು. ತನ್ನ ದೇಶದ ಗಡಿ ಅತಿಕ್ರಮಿಸಿದ್ದಕ್ಕೆ ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ಇರಾನ್ ಪ್ರತಿಕ್ರಿಯೆ ನೀಡಿತ್ತು. ಆದರೆ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ತಿರುಗೇಟು ನೀಡಿತ್ತು.