ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ದೇಶದ ಪ್ರಥಮ ಮಹಿಳೆ, ಪತ್ನಿ ಮೆಲಾನಿಯಾ ಟ್ರಂಪ್ ಗೆ ಕೋವಿಡ್ 19 ವೈರಸ್ ಪಾಸಿಟಿವ್ ವರದಿ ಬಂದಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಸಲಹೆಗಾರ ಹೋಪ್ ಹಿಕ್ಸ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಬಂದ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿಗೆ ಕೋವಿಡ್ 19 ದೃಢಪಟ್ಟಿದ್ದು, ಇಬ್ಬರೂ ಕ್ವಾರಂಟೈನ್ ನಲ್ಲಿರಲಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಉನ್ನತ ಸಲಹೆಗಾರ ಹಿಕ್ಸ್ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರು. ಹಿಕ್ಸ್ ಟ್ರಂಪ್ ಜತೆಗೆ ಇದ್ದಿದ್ದರಿಂದ ಸೋಂಕು ಹರಡಿದೆ. ಇದರಿಂದಾಗಿ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅಂತಿಮ ಹಂತದಲ್ಲಿ ಕೋವಿಡ್ ತಗುಲಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಸುದ್ದಿ ತಿಳಿಸಿದೆ.
ತಾವು ಎಷ್ಟು ದಿನಗಳ ಕಾಲ ಐಸೋಲೇಶನ್ ನಲ್ಲಿ ಇರಲಿದ್ದೇವೆ ಎಂಬುದನ್ನು ಟ್ರಂಪ್ ಬಹಿರಂಗಪಡಿಸಿಲ್ಲ. ಟ್ರಂಪ್ ಅವರು ನಿರಂತರವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿದ್ದರು. ಪ್ರತಿ ಬಾರಿ ನೆಗೆಟೀವ್ ಫಲಿತಾಂಶ ಬರುತ್ತಿತ್ತು. ಆದರೆ ಈ ಬಾರಿ ಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದಾರೆ.