ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ 2019 ರ ಗಣರಾಜ್ಯೋತ್ಸವ ಪರೇಡ್‌ಗೆ ಅತಿಥಿಯಾಗಿ ಆಗಮಿಸುವಂತೆ ಶ್ವೇತಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಔಪಚಾರಿಕ ಆಮಂತ್ರಣ ಕಳುಹಿಸಿರುವುದಾಗಿ ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯಂತೆ ಪ್ರಧಾನಿ ಕಾರ್ಯಾಲಯವು ಶ್ವೇತಭವನದ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದು, ಟ್ರಂಪ್ ಅವರು ಆಹ್ವಾನವನ್ನು ಸ್ವೀಕರಿಸಿದರೆ ಭಾರತದ ವಿದೇಶಾಂಗ ನೀತಿಯ ದೊಡ್ಡ ಸಾಧನೆಯಾಗುತ್ತದೆ.
ಎಪ್ರಿಲ್‌ನಲ್ಲೇ ಆಹ್ವಾನವನ್ನು ಕಳುಹಿಸಲಾಗಿದ್ದು, ಟ್ರಂಪ್ ಅವರ ಭಾರತ ಪ್ರವಾಸದ ಕುರಿತು 2 ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ನಡುವೆ ಹಲವು ಸುತ್ತಿನ ಮಾತುಕತೆಯೂ ನಡೆದಿದೆ ಎಂದು ತಿಳಿದು ಬಂದಿದೆ.
2015 ರ ಗಣರಾಜ್ಯೋತ್ಸವಕ್ಕೆ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಅತಿಥಿಯಾಗಿ ಆಗಮಿಸಿದ್ದರು.
ಟ್ರಂಪ್ ಅವರನ್ನು ಭಾರತಕ್ಕೆ ಕರೆಸುವಲ್ಲಿ ಯಶಸ್ವಿಯಾದರೆ, ಲೋಕಸಭಾ ಚುನಾವಣೆ ವೇಳೆ ಮತ್ತೆ ಅಧಿಕಾರಕ್ಕೆ ಬರಲು ಲೆಕ್ಕಾಚಾರ ಹಾಕಿಕೊಂಡಿರುವ ಬಿಜೆಪಿಗೆ ದೊಡ್ಡ ಬಲವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.