ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಅಕ್ರಮಗಳ ಸಂಬಂಧ ಡೊನಾಲ್ಡ್ ಟ್ರಂಪ್ ವಿರುದ್ಧ ನವೆಂಬರ್ ಬಳಿಕ ಮಹಾಭಿಯೋಗ ಪ್ರಕ್ರಿಯೆ ನಡೆಯಲಿದೆ. ನವೆಂಬರ್‌ನಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್(ಕೆಳಮನೆ)ಗೆ ಮಧ್ಯಂತರ ಚುನಾವಣೆ ನಡೆಯಲಿದ್ದು ಈ ಬಳಿಕವಷ್ಟೇ ಮಹಾಭಿಯೋಗ ಪ್ರಕ್ರಿಯೆ ಶುರುವಾಗಲಿದೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಈ ಚುನಾವಣೆಯಲ್ಲಿ ಜನ ಡೆಮಾಕ್ರಾಟಿಕ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡಿದಲ್ಲಿ ಅವರು, ಟ್ರಂಪ್ ಮಹಾಭಿಯೋಗ ಬಯಸಿದ್ದಾರೆ ಎಂಬರ್ಥವಾಗುತ್ತದೆ. ಹೀಗಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಪ್ರಕ್ರಿಯೆ ಶುರು ಮಾಡಬಹುದು ಎಂದು ಡೆಮಾಕ್ರಾಟಿಕ್‌ನ ಸದಸ್ಯರೇ ಹೇಳಿದ್ದಾರೆ.
ಒಂದು ವೇಳೆ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಅವರ ಪಕ್ಷವಾದ ರಿಪಬ್ಲಿಕನ್‌ಗೆ ಹೆಚ್ಚಿನ ಸ್ಥಾನ ನೀಡಿದಲ್ಲಿ ಜನ ಟ್ರಂಪ್ ಪರವೇ ಇದ್ದಾರೆ ಎಂದರ್ಥವಾಗುತ್ತದೆ. ಹೀಗಾಗಿ ಚುನಾವಣೆ ನೋಡಿಕೊಂಡು ಪ್ರಕ್ರಿಯೆ ಶುರು ಮಾಡಬಹುದು ಎಂದಿದ್ದಾರೆ.
ಟೈಮ್ ಮುಖಪುಟದಲ್ಲಿ: ಇದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಪ್ರಸಿದ್ಧಿಯ ಪತ್ರಿಕೆ ಟೈಮ್‌ನಲ್ಲಿ ಟ್ರಂಪ್ ಅವರ ಅರ್ಧ ಫೋಟೋ ಬಳಕೆ ಮಾಡಿಕೊಂಡು ಮುಖಪುಟ ವಿನ್ಯಾಸ ಮಾಡಲಾಗಿದೆ. ಇಡೀ ವೈಟ್‌ಹೌಸ್‌ಗೆ ನೀರು ತುಂಬಿಸಿ “ಇನ್ ಡೀಪ್’ ಎಂಬ ತಲೆಬರಹ ನೀಡಲಾಗಿದೆ. ಈಗ ಎದುರಾಗಿರುವ ಸಮಸ್ಯೆಗಳು ಹೆಚ್ಚಿದ್ದು ಹೊರಗೆ ಬರುವುದು ಕಷ್ಟ ಎಂಬರ್ಥದಲ್ಲಿ ವಿನ್ಯಾಸ ಮಾಡಲಾಗಿದೆ. ಈ ಹಿಂದೆಯೂ ಟ್ರಂಪ್ ಅವರ ಖಾಸಗಿ ವಕೀಲರ ಕಚೇರಿ ಮೇಲೆ ಎಫ್ಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾಗ “ಸ್ಟಾರ್ಮ್’ ಎಂಬರ್ಥದ ತಲೆಬರಹ ನೀಡಿ ಅರ್ಧ ನೀರಿನಲ್ಲಿ ಮುಳುಗಿಸಲಾಗಿತ್ತು. ಈಗ ಸಂಪೂರ್ಣವಾಗಿ ಟ್ರಂಪ್ ಅವರನ್ನು ಮುಳುಗಿಸಲಾಗಿದೆ.
ಈ ಮಹಾಭಿಯೋಗ ಪ್ರಕ್ರಿಯೆ ಬಗ್ಗೆ ಗುರುವಾರವಷ್ಟೇ ಮಾತನಾಡಿದ್ದ ಟ್ರಂಪ್, ಒಂದು ವೇಳೆ ಹಾಗೇನಾದರೂ ಆದರೆ ಇಡೀ ಅಮೆರಿಕದ ಷೇರು ಮಾರುಕಟ್ಟೆ ಕುಸಿದು ನೆಲಕ್ಕೆ ಬೀಳಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.
ವಲಸೆ ನೀತಿಗೆ ಆಕ್ಷೇಪ
ಟ್ರಂಪ್ ಸರಕಾರ ಕೈಗೊಂಡ ವಲಸೆ ನೀತಿಗೆ ಉದ್ಯಮ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಅಮೆರಿಕದ ಪ್ರಮುಖ ಕಂಪನಿಗಳ ಸಿಇಒಗಳು ಪತ್ರ ಬರೆದಿದ್ದಾರೆ. ಈ ವಲಸೆ ನೀತಿಯಿಂದಾಗಿ ಅಸ್ಥಿರತೆ ಉಂಟಾಗುತ್ತದೆ ಹಾಗೂ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಆರೋಪಿಸಿದ್ದಾರೆ. ಆ್ಯಪಲ್ ಸಿಇಒ ಟಿಮ್ ಕುಕ್, ಜೆಪಿ ಮಾರ್ಗನ್ ಚೇಸ್‌ನ ಜೇಮೀ ಡಿಮಾನ್, ಅಮೆರಿಕನ್ ಏರ್‌ಲೈನ್ಸ್‌ನ ಡಗ್ ಪಾರ್ಕರ್ ಸೇರಿ 59 ಸಿಇಒಗಳು ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಇವರೆಲ್ಲರೂ ಭಾರತೀಯ ಪ್ರತಿಭಾವಂತರ ಪರ ನಿಂತಂತಾಗಿದೆ.
ಸರಕಾರ ವಲಸೆ ನೀತಿ ಬದಲಾವಣೆ ಮಾಡುವಾಗ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಕೌಶಲ ಭರಿತ ಉದ್ಯೋಗಿಗಳ ಜೀವನಕ್ಕೆ ಬಾಧೆಯಾಗಬಾರದು. ಉದ್ಯೋಗಿಗಳ ಹಿತದೃಷ್ಟಿಯಿಂದ ಹಠಾತ್ತನೆ ನೀತಿಗಳನ್ನು ಬದಲಾವಣೆ ಮಾಡಬಾರದು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಇತ್ತೀಚೆಗೆ ಎಚ್1ಬಿ ವೀಸಾ ನೀತಿಯಲ್ಲಿ ಟ್ರಂಪ್ ಸರಕಾರ ಭಾರಿ ಬದಲಾವಣೆ ಮಾಡಿತ್ತು.